-ಚಿಕ್ಕಮಗಳೂರಲ್ಲಿ ಭಯದಿಂದ ಗುಂಡಿ ಕಾಯ್ತಿದ್ದಾರೆ ಜನ
ಚಿಕ್ಕಮಗಳೂರು: ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಹೇಳಿ ಶೌಚಾಲಯದ ಗುಂಡಿ ತೆಗೆಯುವುದಕ್ಕೆ ತಿಳಿಸಿದ ನಗರಸಭೆ ಅಧಿಕಾರಿಗಳು ನಾಲ್ಕು ತಿಂಗಳಾದ್ರೂ ಬಾರದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಶಾಂತಿನಗರ ನಿವಾಸಿಗಳಿಗೆ ಇದೀಗ ಗುಂಡಿ ಕಾಯುವ ಸ್ಥಿತಿ ಎದುರಾಗಿದೆ.
ಶೌಚಾಲಯ ಕಟ್ಟಿಸಿಕೊಳ್ಳದಿದ್ರೆ ಕರೆಂಟ್ ಕಟ್ ಮಾಡ್ತೀವಿ, ರೇಷನ್ ಕಾರ್ಡ್ ಕೊಡಲ್ಲ, ಆಧಾರ್ ಕಾರ್ಡ್ ಕ್ಯಾನ್ಸಲ್ ಮಾಡಸ್ತೀವಿ ಅಂತ ಹೆದರಸಿ ಶೌಚಾಲಯದ ಗುಂಡಿ ತೆಗೆಯುವುದಕ್ಕೆ ನಗರಸಭೆ ಅಧಿಕಾರಿಗಳು ತಿಳಿಸಿದ್ದರು. ಭಯ ಬಿದ್ದು ದಿನಗೂಲಿ ಮಾಡುತ್ತಿದ್ದವರು ಶೌಚಾಲಯದ ಗುಂಡಿ ತೆಗೆಸಿಕೊಂಡಿದ್ದಾರೆ. ಆದ್ರೆ ಶೌಚಾಲಯದ ಗುಂಡಿ ತೆಗೆಸಿ ಅಂತಾ ಹೇಳಿ ಹೋದ ಅಧಿಕಾರಿಗಳು ನಾಲ್ಕು ತಿಂಗಳಾದರೂ ಬಂದಿಲ್ಲ.
Advertisement
Advertisement
ಹಾಗಾಗಿ ತೆಗೆದಿರುವ ಗುಂಡಿಯಲ್ಲಿ ಯಾರಾದ್ರೂ ಬಿದ್ದರೆ ಎಂಬ ಭಯದಿಂದ ಚಿಕ್ಕಮಗಳೂರಿನ ಶಾಂತಿನಗರ ನಿವಾಸಿಗಳು ಇದೀಗ ಕೂಲಿ ಬಿಟ್ಟು ಗುಂಡಿ ಕಾಯುತ್ತಿದ್ದಾರೆ. 4 ತಿಂಗಳ ಹಿಂದೆ ಗುಂಡಿ ತೆಗೆಸಿ 5 ಸಾವಿರ ಕೊಡ್ತೀವಿ, ಆಮೇಲೆ 10 ಸಾವಿರ ಕೊಡ್ತೀವಿ ಅಂತ ಹೇಳಿದ್ದ ಅಧಿಕಾರಿಗಳಿಂದು ಕಾಣೆಯಾಗಿದ್ದಾರೆ. ಇವರು ನಾಲ್ಕು ತಿಂಗಳಿಂದ ಗುಂಡಿ ತೆಗೆಸಿಕೊಂಡು ಅಧಿಕಾರಿಗಳು ಇಂದು-ನಾಳೆ ಬರುತ್ತಾರೆಂದು ದಾರಿ ಕಾಯುತ್ತಿದ್ದಾರೆ.
Advertisement
ಶಾಂತಿನಗರದ 25ಕ್ಕೂ ಹೆಚ್ಚು ಮನೆಗಳ ಮುಂದೆ ಟಾಯ್ಲೆಟ್ ಗುಂಡಿಗಳಿವೆ. ನಗರಸಭೆ ಅಧಿಕಾರಿಗಳ ಮಾತು ಕೇಳಿ ಗುಂಡಿ ತೆಗೆಸಿದೋರು ಇಂದು ಕಾಯುತ್ತಾ ಕುಳಿತಿದ್ದಾರೆ. ಈ ಗುಂಡಿಯೊಳಗೆ ಮಕ್ಕಳು ಬಿದ್ದಿದ್ದಾರೆ, ಕರುಗಳು ಬಿದ್ದಿವೆ. ಇನ್ನೂ ಮಳೆ ಬಂದಾಗ ಕಾಲು ಜಾರಿ ಬಾಣಂತಿಯೊಬ್ಬರು ಬಿದ್ದಿದ್ದಾರೆ. ಅದಕ್ಕಾಗಿ ಮನೆಯಲ್ಲೊಬ್ಬರು ಕೂಲಿ ಬಿಟ್ಟು ಗುಂಡಿ ಕಾಯುವ ಕಾಯಕ ಮಾಡುತ್ತಿದ್ದಾರೆ.
Advertisement
ನಗರಸಭೆ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಕೂಲಿ ಕಾರ್ಮಿಕರು ಬೇಸತ್ತಿದ್ದಾರೆ. ಬಯಲು ಶೌಚ ಮುಕ್ತ ಗ್ರಾಮಕ್ಕಾಗಿ ರಾಜ್ಯ ಸರ್ಕಾರ ಹಣ ನೀಡಿದೆ. ಆದರೆ ಅಧಿಕಾರಿಗಳು ಹೀಗೆ ನಾಲ್ಕೈದು ತಿಂಗಳಿನಿಂದ ಹಣ ನೀಡದೇ ಕಾರ್ಮಿಕರನ್ನು ಅಲೆದಾಡಿಸುತ್ತಿದ್ದಾರೆ.