– ಉಚಿತಗಳ ಮೇಲಿನ ಅವಲಂಬನೆ ಸಮಾಜವನ್ನು ದುರ್ಬಲಗೊಳಿಸುತ್ತಿದೆ ಎಂದ ಕೇಂದ್ರ ಮಾಜಿ ಸಚಿವ
ಭೋಪಾಲ್: ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ, ಬಿಜೆಪಿ ನಾಯಕ ಪ್ರಹ್ಲಾದ್ ಪಟೇಲ್ ಹೇಳಿಕೆ ನೀಡಿದ್ದಾರೆ.
Advertisement
ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ವೀರಾಂಗನಾ ರಾಣಿ ಅವಂತಿಬಾಯಿ ಲೋಧಿ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಬೇಡಿಕೆ ಅರ್ಜಿಗಳನ್ನು ‘ಭಿಕ್ಷಾಟನೆ’ಗೆ ಹೋಲಿಸಿ ವಿವಾದಕ್ಕೆ ಈಡಾಗಿದ್ದಾರೆ.
Advertisement
ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ನಾಯಕರು ಬರುತ್ತಾರೆ, ಅವರಿಗೆ ಅರ್ಜಿಗಳಿಂದ ತುಂಬಿದ ಬುಟ್ಟಿಯನ್ನು ನೀಡಲಾಗುತ್ತದೆ. ಅವರನ್ನು ವೇದಿಕೆಯ ಮೇಲೆ ಹಾರ ಹಾಕಿ, ಅವರ ಕೈಯಲ್ಲಿ ಪತ್ರವನ್ನು ಇಡಲಾಗುತ್ತದೆ. ಇದು ಒಳ್ಳೆಯ ಅಭ್ಯಾಸವಲ್ಲ. ಕೇಳುವ ಬದಲು, ನೀಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಇದು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ. ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.
Advertisement
ಉಚಿತಗಳ ಮೇಲಿನ ಅತಿಯಾದ ಅವಲಂಬನೆಯು ಸಮಾಜವನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತದೆ. ಈ ಭಿಕ್ಷುಕರ ಸೈನ್ಯವು ಸಮಾಜವನ್ನು ಬಲಪಡಿಸುತ್ತಿಲ್ಲ. ಅದು ದುರ್ಬಲಗೊಳಿಸುತ್ತಿದೆ. ಉಚಿತಗಳ ಕಡೆಗಿನ ಆಕರ್ಷಣೆಯು ಧೈರ್ಯಶಾಲಿ ಮಹಿಳೆಯರ ಗೌರವದ ಸಂಕೇತವಲ್ಲ. ನಾವು ಅವರ ಮೌಲ್ಯಗಳಿಗೆ ಅನುಗುಣವಾಗಿ ಬದುಕಬೇಕು ಎಂದು ಕರೆ ನೀಡಿದ್ದಾರೆ.
Advertisement
ಯಾರಾದರೂ ಭಿಕ್ಷೆ ಬೇಡಿದ ಹುತಾತ್ಮರ ಹೆಸರನ್ನು ನೀವು ಹೇಳಬಲ್ಲಿರಾ? ಹಾಗಿದ್ದಲ್ಲಿ, ನನಗೆ ಹೇಳಿ. ನರ್ಮದಾ ಪರಿಕ್ರಮ ಯಾತ್ರಿಕನಾಗಿ, ನಾನು ಭಿಕ್ಷೆ ಬೇಡುತ್ತೇನೆ. ಆದರೆ, ನನಗಾಗಿ ಎಂದಿಗೂ ಬೇಡುವುದಿಲ್ಲ. ಪ್ರಹ್ಲಾದ್ ಪಟೇಲ್‌ಗೆ ಅವರು ಏನನ್ನೂ ನೀಡಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಪಟೇಲ್ ಅವರ ಹೇಳಿಕೆಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ, ಸಚಿವರನ್ನು ಟೀಕಿಸಿದ್ದು, ಅವರ ಹೇಳಿಕೆಗಳು ರಾಜ್ಯದ ಜನರಿಗೆ ಮಾಡಿರುವ ಅವಮಾನ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯ ದುರಹಂಕಾರ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ, ಅವರು ಈಗ ಸಾರ್ವಜನಿಕರನ್ನು ಭಿಕ್ಷುಕರು ಎಂದು ಕರೆಯುತ್ತಿದ್ದಾರೆ. ಇದು ಕಷ್ಟಗಳಿಂದ ಬಳಲುತ್ತಿರುವವರ ಭರವಸೆ ಮತ್ತು ಕಣ್ಣೀರಿಗೆ ಮಾಡಿದ ಅವಮಾನ. ಅವರು ಚುನಾವಣೆಗೆ ಮೊದಲು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ನಂತರ ಅವುಗಳನ್ನು ಪೂರೈಸಲು ನಿರಾಕರಿಸುತ್ತಾರೆ. ಜನರು ಅವರಿಗೆ ನೆನಪಿಸಿದಾಗ, ಅವರು ನಾಚಿಕೆಯಿಲ್ಲದೆ ಅವರನ್ನು ಭಿಕ್ಷುಕರು ಎಂದು ಕರೆಯುತ್ತಾರೆ. ಅವರು ನೆನಪಿಟ್ಟುಕೊಳ್ಳಲಿ, ಶೀಘ್ರದಲ್ಲೇ ಇದೇ ಬಿಜೆಪಿ ನಾಯಕರು ಮತಗಳನ್ನು ಬೇಡಿಕೊಂಡು ಬರುತ್ತಾರೆ ಎಂದು ಪಟ್ವಾರಿ ತೀಕ್ಷ್ಣವಾಗಿ ಟೀಕಿಸಿದ್ದಾರೆ.