ಮಂಡ್ಯ: ಮುಸ್ಲಿಂ ದರ್ಗಾದ ಗೋರಿಯೊಂದರಲ್ಲಿ ವಿಚಿತ್ರ ವಿಸ್ಮಯಕಾರಿ ಅನುಭವವಾಗ್ತಿದೆ. ದರ್ಗಾದಲ್ಲಿ ಒಟ್ಟು ಮೂರು ಗೋರಿಗಳಿವೆ. ಅದರಲ್ಲಿ ಎರಡು ಗೋರಿಗಳಲ್ಲಿ ಉಸಿರಾಟದ ಅನುಭವವಾಗ್ತಿದೆ ಎಂದು ಹೇಳಲಾಗುತ್ತಿದೆ. ಗೋರಿಯ ಮೇಲೆ ಹೊದಿಸಿರುವ ಚಾದರ್ ಅಲೆಯ ರೀತಿ ಮೇಲೆ ಕೆಳಗೆ ಅಲುಗಾಡುತ್ತಿದೆ.
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಹೊಳೆ ಬೀದಿಯಲ್ಲಿರುವ ಹಜರತ್ ಶಮನ್ ಷಾ ಇದೀಗ ವಿಸ್ಮಯಕ್ಕೆ ಕಾರಣವಾಗಿದೆ. ಗೋರಿಯ ಮೇಲೆ ಹೊದಿಸಿರುವ ಚಾದರದಲ್ಲಿ ಚಲನೆ ಕಂಡು ಬಂದಿದ್ದು ಸಮುದ್ರದಲ್ಲಿ ಬರುವ ಅಲೆಯ ರೀತಿ ಚಾದರ್ ಮೇಲೆ-ಕೆಳಗೆ ಚಲಿಸುತ್ತಿದೆ. ಕಳೆದ ಮೂರು ದಿನಗಳಿಂದ ಈ ರೀತಿಯ ಅನುಭವವಾಗಿದ್ರೂ ಇಂದು ಚಾದರ್ ಹೆಚ್ಚಿನ ಪ್ರಮಾಣದಲ್ಲಿ ಮೇಲೆ ಕೆಳಗೆ ಚಲಿಸಲಾರಂಭಿಸಿದೆ.
ಈ ವಿಷಯ ಕ್ಷಣಮಾತ್ರದಲ್ಲಿ ಮದ್ದೂರು ಪಟ್ಟಣಾದ್ಯಂತ ಪಸರಿಸಿದ್ದು, ಜನರು ದರ್ಗಾದಲ್ಲಿ ನಡೆಯುತ್ತಿರುವ ಪವಾಡ ನೋಡಲು ಬರುತ್ತಿದ್ದಾರೆ. ಹಜರತ್ ಶಮನ್ ಷಾ ದರ್ಗಾಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ವಿಸ್ಮಯ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.
ದರ್ಗಾದಲ್ಲಿರುವ ಗೋರಿಯ ಮೇಲಿನ ಚಾದರ್ ಅಲುಗಾಡುತ್ತಿರುವುದು ಎಲ್ಲರ ಕುತೂಹಲ ಕೆರಳಿಸಿ ಜನಸಾಗರವೇ ಹರಿದು ಬರುವಂತೆ ಮಾಡಿದೆ. ಆದರೆ ಚಾದರ್ ಅಲುಗಾಟದ ಹಿಂದೆ ಏನಾದರೂ ವೈಜ್ಞಾನಿಕ ಕಾರಣ ಇದೆಯಾ ಎಂಬುದು ತಿಳಿಯಬೇಕಿದೆ.