Connect with us

Davanagere

ಜನ ಕೆಲ್ಸ ಮಾಡೋರನ್ನ ಮರೆತಿದ್ದಾರೆ, ನನ್ನನ್ನೂ ಸಹ ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ರು : ಸಿದ್ದರಾಮಯ್ಯ

Published

on

– ಮತ ಎಣಿಕೆಯ ದಿನ ಫಲಿತಾಂಶ ನೋಡಿ ದಿಗ್ಭ್ರಮೆಯಾಯ್ತು,
– ಬಾದಾಮಿ ಜನ ಕೈ ಹಿಡಿಲಿಲ್ಲವೆಂದಿದ್ದರೆ, ನಾನು ಇಲ್ಲಿವರೆಗೂ ಬರುತ್ತಿರಲಿಲ್ಲ

ದಾವಣಗೆರೆ: ಕೆಲಸ ಮಾಡುವವರನ್ನು ಜನರು ಮರೆತಿದ್ದಾರೆ. ಜನರಿಗೆ ಸೇವೆ ಮಾಡಿದ ನನ್ನನ್ನೂ ಸಹ ಚುನಾವಣೆಯಲ್ಲಿ ಸೋಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದಲ್ಲಿ ನಡೆದ ದಿವಂಗತ ಮಾಜಿ ಶಾಸಕ ಎಂ.ಪಿ.ರವೀಂದ್ರರವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಜನ ಕೆಲಸ ಮಾಡುವವರನ್ನು ಮರೆಯುತ್ತಿದ್ದಾರೆ. ಚುನಾವಣೆಗಳಲ್ಲಿ ಏನನ್ನು ನೋಡಿ ಜನ ಮತ ಹಾಕುತ್ತಿದ್ದಾರೆ ಎನ್ನುವುದು ನನಗೆ ತಿಳಿಯುತ್ತಿಲ್ಲ. ಕಳೆದ ಬಾರಿಯ ಕಾಂಗ್ರೆಸ್ ಸರ್ಕಾರ ನಾಡಿನ ಜನತೆಗೆ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿತ್ತು. ಕರ್ನಾಟಕ ರಾಜ್ಯ ರಾಜಕೀಯ ಇತಿಹಾಸದಲ್ಲೇ ನಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು ಇದೂವರೆಗೂ ಯಾರು ಮಾಡಿಲ್ಲ. ನಾನು ಚುನಾವಣೆಯಲ್ಲಿ ಸೋಲುತ್ತೇನೆ ಎನ್ನುವ ಪ್ರಶ್ನೆ ನನ್ನ ಕನಸ್ಸಿನಲ್ಲೂ ಬಂದಿರಲಿಲ್ಲ. ಆದರೆ ಚಾಮುಂಡೇಶ್ವರಿಯಲ್ಲಿ ನನ್ನನ್ನೇ ಸೋಲಿಸಿದರು ಎಂದು ಹೇಳಿದರು.

ಮತ ಎಣಿಕೆ ದಿನ ದಿನ ಚಾಮುಂಡೇಶ್ವರಿಯ ಫಲಿತಾಂಶವನ್ನು ನೋಡಿ, ಕ್ಷಣಕಾಲ ನಾನೇ ದಿಗ್ಭ್ರಮೆಗೊಳಗಾಗಿದ್ದೆ. ಒಂದು ವೇಳೆ ಬಾದಾಮಿ ಕ್ಷೇತ್ರದ ಜನ ನನ್ನ ಕೈ ಹಿಡಿಯದೇ ಇದ್ದರೆ ನಾನು ಇಲ್ಲಿಯವರೆಗೂ ಬರಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ಮೂಲಕ ಬಾದಾಮಿ ಕ್ಷೇತ್ರದ ಮತದಾರರನ್ನು ವಂದಿಸಿದರು.

ಇದೇ ವೇಳೆ ದಿವಂಗತ ಎಂ.ಪಿ.ರವೀಂದ್ರರವರ ಕುರಿತು ಮಾತನಾಡಿ, ರವೀಂದ್ರ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿದ್ದರು. ಸದಾ ಅಭಿವೃದ್ಧಿ ಮಾಡುವ ಕನಸನ್ನು ಹೊಂದಿದ್ದರು. ಇವರ ತಂದೆ ಎಂ.ಪಿ. ಪ್ರಕಾಶ್ ಕೂಡ ಉತ್ತಮ ಸಾಹಿತಿ, ಹಾಡುಗಾರ ಹಾಗೂ ಉತ್ತಮ ಆಡಳಿತಗಾರರಾಗಿದ್ದರು. ಇವರೂ ಸಹ ತಂದೆಯ ಕೆಲವು ಗುಣಗಳನ್ನು ಬೆಳೆಸಿಕೊಂಡಿದ್ದರು. ಹರಪ್ಪನಹಳ್ಳಿಯನ್ನು 371 ಜೆ ಕಲಂಗೆ ಸೇರಿಸಲು ಹೋರಾಟ ನಡೆಸಿದ್ದರು ಎಂದರು.

ಇಷ್ಟೆಲ್ಲ ಹೋರಾಟ ಮಾಡುತ್ತಿರುವಾಗಲೇ ಏಕಾಏಕಿ ಚುನಾವಣೆಗೆ ನಿವೃತ್ತಿ ಘೋಷಿಸಿದ್ದರು. ಆಗ ನಾನು ಅವರಿಗೆ ಕರೆ ಮಾಡಿ, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿದ್ದೆ. ಆಗ ಅವರು ಹರಪ್ಪನಹಳ್ಳಿಯನ್ನು 371ಜೆ ಕಲಂಗೆ ಸೇರಿಸಿ, ಆಗ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ಅವರ ಮಾತಿನಂತೆ ನಾನು ಹರಪ್ಪನಹಳ್ಳಿ ತಾಲೂಕನ್ನು 371ಜೆ ಕಲಂಗೆ ಸೇರಿಸಿದ್ದೆ. ರವೀಂದ್ರ ಹೇಳಿದ್ದ ಎಲ್ಲಾ ಕೆಲಸಗಳನ್ನು ನಾನು ಮಾಡಿದ್ದೆ. ಆದರೆ ಈ ಜನ ಕೆಲಸ ಮಾಡಿದವರನ್ನೇ ಮರೆಯುತ್ತಿದ್ದಾರೆ. ಕೆಲಸ ಮಾಡಿದ್ದಕ್ಕೆ ಕೂಲಿ ಕೊಡಿ ಎಂದರೆ ಅದನ್ನು ಸಹ ಜನರು ನೀಡಲಿಲ್ಲ. ಈಗ ಆರು ತಿಂಗಳಾದರೂ ತಾಲೂಕಿನಲ್ಲಿ ಯಾವುದಾದರೂ ಅಭಿವೃದ್ಧಿ ಕೆಲಸಗಳು ನಡೆದಿವೆಯೇ ಎಂದು ಪ್ರಶ್ನಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *