– ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ
– ಸಿಎಂ ತವರು ಜಿಲ್ಲೆಯಲ್ಲೇ ಅವ್ಯವಸ್ಥೆ
ಶಿವಮೊಗ್ಗ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸರ್ಕಾರಿ ಇಲಾಖೆಗಳ ಅವ್ಯವಸ್ಥೆ ಹೇಳತೀರದಾಗಿದೆ. ಅದರಲ್ಲೂ ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ(ಆರ್‌ಟಿಒ) ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರು ವಾರಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಕಚೇರಿಗೆ ಒಟ್ಟು 47 ಮಂದಿ ಸಿಬ್ಬಂದಿ ಬೇಕು ಆದರೆ ಇಲ್ಲಿರೋದು ಮಾತ್ರ ಕೇವಲ 6 ಮಂದಿ.
ಹೌದು. ಶಿವಮೊಗ್ಗದ ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಮಿತಿಮೀರಿದೆ. 45 ಮಂದಿ ಕರ್ತವ್ಯ ಸಲ್ಲಿಸಬೇಕಾದ ಜಾಗದಲ್ಲಿ ಕೇವಲ 6 ಮಂದಿ ಮಾತ್ರ ಇದ್ದಾರೆ. ಇದರಿಂದ ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನೂತನ ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ವಾಹನಗಳ ದಾಖಲೆಗಳನ್ನು ಸರಿ ಮಾಡಿಸಿಕೊಳ್ಳಲು ಹಾಗೂ ಡಿಎಲ್ ಮಾಡಿಸಿಕೊಳ್ಳಲು ಆರ್‌ಟಿಒ ಕಚೇರಿಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದೆ. ಸಿಎಂ ಯಡಿಯೂರಪ್ಪ ಅವರ ತವರಿನಲ್ಲೇ ಜನರ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದ್ದು, ಇಲ್ಲಿನ ಅಧಿಕಾರಿಗಳು ಕೂಡ ತಮ್ಮ ಅಸಹಾಯಕ ಪರಿಸ್ಥಿತಿ ತೋರ್ಪಡಿಸುತ್ತಿದ್ದಾರೆ.
ಕೇವಲ ಆರ್‌ಟಿಒ ಕಚೇರಿ ಮಾತ್ರವಲ್ಲ ದೂರದ ಮಲವಗೊಪ್ಪ ಬಡಾವಣೆಯಲ್ಲಿರುವ ಡಿಎಲ್ ಟೆಸ್ಟ್ ಕಚೇರಿ ಮತ್ತು ಟ್ರ್ಯಾಕ್‍ನಲ್ಲಿಯೂ ಇದೇ ಸಮಸ್ಯೆಯಿಂದ ಜನರು ಹೈರಾಣಾಗಿ ಹೋಗಿದ್ದಾರೆ. ವಾಹನ ನೋಂದಣಿ, ಡಿಎಲ್‍ಗಾಗಿ ದಿನವಿಡಿ ಕಾದು ಕಾದು ಜನ ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಪ್ರತಿದಿನ ಜಟಾಪಟಿ ನಡೆಯುತ್ತಲೇ ಇದೆ.
5 ಬ್ರೇಕ್ ಇನ್ಸ್‌ಪೆಕ್ಟರ್ ಹುದ್ದೆಗಳಲ್ಲಿ 4 ಹುದ್ದೆಗಳು ಖಾಲಿ ಇವೆ. ಇರುವ ಒಬ್ಬರು ಕಳೆದ ಒಂದು ವಾರದಿಂದ ಜ್ವರ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಯಂ ಆರ್‌ಟಿಒ ಅಧಿಕಾರಿ ಇಲ್ಲದೇ ಇರುವ ಒಬ್ಬರೇ ಅಧಿಕಾರಿ ಮಂಗಳೂರು ಮತ್ತು ಶಿವಮೊಗ್ಗ ಕಚೇರಿ ನೋಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಮಂಗಳೂರಿನ ಆರ್‌ಟಿಒ ಅಧಿಕಾರಿ ವಾರದಲ್ಲಿ ಎರಡು ದಿನ ಇಲ್ಲಿಗೆ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಚೇರಿ ಒಂದರಲ್ಲೇ ಬ್ರೇಕ್ ಇನ್ಸ್‌ಪೆಕ್ಟರ್ ಗಳನ್ನು ಹೊರತುಪಡಿಸಿದರೆ ಸುಮಾರು 35ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಸಾರ್ವಜನಿಕರು ಒಂದು ಚಲನ್ ಪಡೆಯಲು ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸ್ ಇಲಾಖೆ ಸಂಚಾರ ನಿಯಮ ಉಲ್ಲಂಘನೆಯಡಿ, ಭಾರೀ ದಂಡ ವಿಧಿಸುತ್ತಿರುವುದರಿಂದ ಬಚಾವಾಗಲು ಜನ ತಮ್ಮ ವಾಹನಗಳ ದಾಖಲೆಗಳನ್ನು ಸರಿಮಾಡಿಸಿಕೊಳ್ಳಲು ಆರ್‌ಟಿಒ ಕಚೇರಿಗೆ ಬರುತ್ತಿದ್ದಾರೆ. ಆದರೆ ಕಚೇರಿಯಲ್ಲಿಯೇ ಸಾಕಷ್ಟು ಸಮಸ್ಯೆಗಳು ಇವೆ. ಹೀಗಾಗಿ ಸಿಎಂ ಅವರು ಈ ಬಗ್ಗೆ ಗಮನ ಹರಿಸಿ ಈ ಕೂಡಲೇ ಸಿಬ್ಬಂದಿ ಕೊರತೆ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕಿದೆ.