ರಾಯಚೂರು: ಮಣ್ಣೆತ್ತಿನ ಅಮವಾಸ್ಯೆಯನ್ನ ಬಿಸಿಲನಗರಿ ರಾಯಚೂರಿನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಷಾಢ ಆರಂಭದಲ್ಲಿ ಅಮವಾಸ್ಯೆ ಬಂದಿರುವುದು ಹಾಗೂ ಗ್ರಹಣ ಇರುವುದರಿಂದ ಈ ಬಾರಿ ಮಣ್ಣೆತ್ತಿನ ಅಮವಾಸ್ಯೆ ವಿಶೇಷವಾಗಿದೆ.
ಸಾರ್ವಜನಿಕರು, ರೈತರು ಮಣ್ಣೆತ್ತುಗಳನ್ನ ಕೊಂಡು ಮನೆ, ಜಮೀನುಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಅಲ್ಲದೆ ಈ ಬಾರಿ ಉತ್ತಮ ಮಳೆಯಾಗಲಿ ಅಂತ ಮಣ್ಣೆತ್ತುಗಳಲ್ಲಿ ಪ್ರಾರ್ಥಿಸಿದ್ದಾರೆ. ಬರಗಾಲದಿಂದ ಬೇಸತ್ತಿರುವ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿ, ಮಣ್ಣೆತ್ತುಗಳ ಪೂಜೆಗೆ ಮಣಿದು ಮಳೆರಾಯ ಊರಿಗೆ ಬರುತ್ತಾನೆ ಎಂದು ನಂಬಿ ಸಡಗರ ಸಂಭ್ರಮದಿಂದ ಮಣ್ಣೆತ್ತಿನ ಅಮವಾಸ್ಯೆಯನ್ನ ಆಚರಿಸಲಾಗುತ್ತಿದೆ.
ಪ್ರತೀ ವರ್ಷಕ್ಕಿಂತ ಈ ವರ್ಷ ಮಣ್ಣೆತ್ತುಗಳ ವ್ಯಾಪಾರ ಕೂಡ ಚೇತರಿಸಿದೆ. ಪ್ರತಿ ಜೋಡಿ ಎತ್ತುಗಳು 60 ರಿಂದ 70 ರೂಪಾಯಿಗೆ ಮಾರಾಟವಾಗುತ್ತಿವೆ. ರಾಯಚೂರು ನಗರದಲ್ಲಿರುವ ಆರೇಳು ಕುಂಬಾರ ಕುಟುಂಬಗಳು ಮಣ್ಣೆತ್ತುಗಳನ್ನ ತಯಾರಿಸಿ ಮಾರಾಟ ಮಾಡುತ್ತಿವೆ. ಪಾರಂಪರಿಕವಾಗಿ ಮಣ್ಣೆತ್ತುಗಳನ್ನ ತಯಾರಿಸುತ್ತ ಬಂದಿದ್ದೇವೆ. ಲಾಭದ ನಿರೀಕ್ಷೆಗಿಂತ ರೈತ ನಂಬಿಕೆ ದೊಡ್ಡದು. ಈ ಬಾರಿ ವ್ಯಾಪಾರ ಚೆನ್ನಾಗಿದೆ ಎಂದು ನಗರದ ಕುಂಬಾರ ಓಣಿಯ ಮಣ್ಣೆತ್ತು ತಯಾರಕ ನಾಗರಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮಣ್ಣೆತ್ತುಗಳನ್ನು ತಯಾರಿಸಿ ಜೋಳದ ಕಾಳು, ಗುಲಗಂಜಿ ಸೇರಿ ಇತರೆ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಮಾರಾಟ ಮಾಡಲಾಗುತ್ತಿದೆ. ಅಮಾವಾಸ್ಯೆಯನ್ನ ಮಣ್ಣೆತ್ತುಗಳ ಪೂಜೆಯ ಮೂಲಕ ರೈತರು ಆಚರಿಸುತ್ತಿದ್ದು, ಜಮೀನಿನಲ್ಲಿ ಮಳೆಬಂದು ಮಣ್ಣೆತ್ತುಗಳು ಎಷ್ಟು ಬೇಗ ಕರಗುತ್ತವೋ ಅಷ್ಟು ರೈತನಿಗೆ ಒಳ್ಳೆಯದು ಎನ್ನುವ ನಂಬಿಕೆಯಿದೆ.