ಬೆಂಗಳೂರು: ರಾಜ್ಯದ ಜನತೆ ಬಿಜೆಪಿಗೆ ಬೆಂಬಲ ಸೂಚಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿಗೆ ಬೆಂಬಲ ನೀಡಿರುವ ಜನರಿಗೆ ಅಭಿನಂದನೆಗಳು. ಬಿಜೆಪಿ ರಾಜ್ಯದಲ್ಲಿ ಮುನ್ನಡೆ ಸಾಧಿಸುತ್ತಿರುವುದು ಖುಷಿಯ ವಿಚಾರ. ಜೊತೆಗೆ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್ ಮುನಿಯಪ್ಪ ಹೀನಾಯ ಸೋಲು ಅನುಭವಿಸಿರುವುದು ಇನ್ನೊಂದು ಸಂತೋಷದ ವಿಚಾರವಾಗಿದೆ. ಇದು ರಾಜ್ಯದ ಜನತೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿರುವುದನ್ನು ತಿಳಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೋದಿ ವಿರುದ್ಧ ಏಕವಚನದಲ್ಲಿ, ದುರಂಹಕಾರದಲ್ಲಿ ಮಾತಾನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮುಖಭಂಗ ಆಗಿದೆ. ರಾಜ್ಯ ಹಾಗೂ ದೇಶದ ಜನರ ಬಳಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಜನತೆ ಬಿಜೆಪಿಗೆ ಶೇ.54 ರಷ್ಟು ಮತ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇದು ದಾಖಲೆ. ರಾಜ್ಯದ 24 ಕ್ಷೇತ್ರಗಳನ್ನ ಬಿಜೆಪಿ ಮುನ್ನಡೆ ಸಾಧಿಸಿದೆ. ಅದರಲ್ಲೂ ಕರಾವಳಿ ಭಾಗದ ಜನರಿಗೆ ವಿಶೇಷ ಅಭಿನಂದನೆ ತಿಳಿಸುತ್ತೇನೆ. ಆಡಳಿತ ರೂಢ ಮೈತ್ರಿ ಸರ್ಕಾರದ ಭ್ರಷ್ಟಚಾರ, ವರ್ಗಾವಣೆ ದಂಧೆ, ರೈತರ ಸಾಲ ಮನ್ನಾದ ಸುಳ್ಳು ಭರವಸೆಗೆ ಈಗ ಉತ್ತರ ಸಿಕ್ಕಿದೆ ಎಂದು ಟಾಂಗ್ ನೀಡಿದರು.
ರಾಜ್ಯದ ಎರಡು ಕ್ಷೇತ್ರದಲ್ಲಿ ಉಪ-ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಚಿಂಚೊಳಿಯಲ್ಲಿ ಬಿಜೆಪಿ ಗೆದ್ದಿದೆ, ಆದರೆ ಕುಂದಗೋಳ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಹಿನ್ನಡೆಯಾಗಿದೆ ಎಂದರು.
ಮಂಡ್ಯದಲ್ಲಿ ಸುಮಲತಾ ಗೆಲುವು ನಮಗೆ ಸಂತಸ ತಂದಿದೆ. ನೂರಾರು ಕೋಟಿ ಖರ್ಚು ಮಾಡಿ, ಹಣ ಬಲ ತೋರಿದ ಸಿಎಂ ಕುಮಾರಸ್ವಾಮಿ ಅವರಿಗೆ ಮಂಡ್ಯ ಜನ ಬುದ್ಧಿ ಕಲಿಸಿದ್ದಾರೆ. ಇದಕ್ಕಾಗಿ ಮಂಡ್ಯ ಜನರಿಗೆ ವಿಶೇಷ ಧನ್ಯವಾದಗಳು. 24 ಕ್ಷೇತ್ರದಲ್ಲಿ ಗೆದ್ದಷ್ಟೇ ಖುಷಿ ಸುಮಲತಾ ಗೆಲುವಿನಿಂದ ಆಗಿದೆ ಎಂದು ಸಂತೋಷವನ್ನು ಹಂಚಿಕೊಂಡರು.
ಮೈತ್ರಿ ಸರ್ಕಾರ ಬೀಳಿಸುವ ವಿಚಾರವಾಗಿ ಮತನಾಡಿ, ಈಗ ಏನು ಹೇಳಲ್ಲ. ಈಗ ಅವರೇ ತೀರ್ಮಾನ ಮಾಡಬೇಕಿದೆ. ಯಾರ ಮೇಲೂ ಒತ್ತಡ ಹಾಕಲ್ಲ, ನಾನು ಕಾಯುತ್ತೇನೆ. ಅವರ ಆಡಳಿತಕ್ಕೆ ಈಗ ಉತ್ತರ ಸಿಕ್ಕಿದೆ. ಎಚ್. ವಿಶ್ವನಾಥ್, ರೋಷನ್ ಭೇಗ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಅವರು ಯಾರೂ ನನ್ನ ಸಂಪರ್ಕ ಮಾಡಿಲ್ಲ. ಅದರ ಬಗ್ಗೆ ನಾನು ಏನೂ ಹೇಳಲ್ಲ. ನಾನು ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ನಾನು ಈಗ ಏನೂ ಮಾತನಾಡಲ್ಲ ಎಂದರು. ಬಳಿಕ ಮತ್ತೆ ಚುನಾವಣೆಗೆ ಹೋಗುತ್ತೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯ ಕೇಂದ್ರ ನಾಯಕರು ಹೇಳಿದಂತೆ ಕೇಳುವೆ. ಅವರ ಅಭಿಪ್ರಾಯಕ್ಕೆ ನಾನು ಬದ್ಧ ಎಂದು ತಿಳಿಸಿದರು.