ಅಹಮದಾಬಾದ್: ಜೋರಾಗಿ ಮಳೆ ಬಂದ್ರೆ ನಗರಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳೋದು ಹೆಚ್ಚು. ಗುಜರಾತ್‍ನ ಸೂರತ್‍ನಲ್ಲಿ ಭಾರೀ ಮಳೆಯಿಂದ ದೈತ್ಯ ಮರವೊಂದು ಧರೆಗುರುಳಿದ್ದು, ಇಬ್ಬರು ಪಾದಚಾರಿಗಳು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಸ್ತೆ ಪಕ್ಕದಲ್ಲೇ ಇದ್ದ ಬೃಹತ್ ಮರ ನಿಧಾನವಾಗಿ ಬುಡಸಮೇತ ರಸ್ತೆ ಮೇಲೆ ಬಿದ್ದಿದೆ. ಇದೇ ವೇಳೆ ಆ ರಸ್ತೆಯಲ್ಲಿ ಇಬ್ಬರು ನಡೆದುಕೊಂಡು ಹೋಗ್ತಿದ್ದು, ಇನ್ನೇನು ಮರ ಬಿತ್ತು ಎನ್ನುವಷ್ಟರಲ್ಲಿ ಅವರು ಮುಂದೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಸಿಟಿವಿ ದೃಶ್ಯದ ಮತ್ತೊಂದು ಕೋನದಿಂದ ನೋಡಿದ್ರೆ ಮರದ ತುದಿ ಚಲಿಸುತ್ತಿದ್ದ ಆಟೋ ಮೇಲೆ ಬೀಳೋದನ್ನ ಕಾಣಬಹುದು. ನಂತರ ಆಟೋ ಹಿಮ್ಮುಖವಾಗಿ ಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವಿಡಿಯೋ ನೋಡಿ ಹೇಳಬಹುದು. ಅಲ್ಲದೆ ಮರದ ಕೆಳಗೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು ಜಖಂ ಆಗಿವೆ.