ಬಾಗಲಕೋಟೆ: ಪಾರಂಪರಿಕವಾಗಿ ನಡೆಸಿಕೊಂಡು ಬಂದಿದ್ದ ಚಾಲುಕ್ಯ ಉತ್ಸವಕ್ಕೆ ಕಳೆದ ನಾಲ್ಕು ವರ್ಷದಿಂದ ಗರ ಬಡಿದಂತಾಗಿದೆ. ಈ ಕುರಿತು ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರಿಗೆ ಆಸಕ್ತಿಯಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಗೋದಾವರಿಯಿಂದ ನರ್ಮದಾ ನದಿವರೆಗೆ ಕನ್ನಡ ರಾಜ್ಯವನ್ನು ವಿಸ್ತರಿಸಿದ ಕೀರ್ತಿ ಬಾದಾಮಿ ಚಾಲುಕ್ಯರಿಗೆ ಸಲ್ಲುತ್ತದೆ. ಕನ್ನಡಿಗರ ಕೀರ್ತಿ ಪತಾಕೆಯನ್ನು ವಿಶ್ವವ್ಯಾಪಿ ಹಾರಿಸಿದ ರಾಜ ಮನೆತನಗಳಲ್ಲಿ ಬಾದಾಮಿ ಚಾಲುಕ್ಯರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಆದ್ರೆ ಕನ್ನಡಿಗರ ಹೆಮ್ಮೆಯ ಈ ಚಾಲುಕ್ಯರ ಉತ್ಸವ ಇಂದು ಕಣ್ಮರೆಯಾಗ್ತಿದೆ. ದಸರಾ ಬಳಿಕ ರಾಜ್ಯದಲ್ಲಿ ಚಾಲುಕ್ಯ ಉತ್ಸವಕ್ಕೆ ನಾಂದಿ ಹಾಡಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷದಿಂದ ಚಾಲುಕ್ಯ ಉತ್ಸವಕ್ಕೆ ಗರ ಬಡಿದಂತಾಗಿದೆ.
ಅಖಂಡ ವಿಜಯಪುರ ಜಿಲ್ಲೆ ಇದ್ದಾಗ 1986ರಲ್ಲಿ ಪಟ್ಟದಕಲ್ಲು ರಾಷ್ಟ್ರೀಯ ಉತ್ಸವ ಅಂತ ಆರಂಭವಾಗಿತ್ತು. ಪ್ರಾರಂಭದ ಐದಾರು ವರ್ಷಗಳು ಅದೇ ಮೆರುಗು, ಉತ್ಸವ ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಹರಿದು ಬರುತ್ತಿದ್ದರು. ದೊಡ್ಡ ಕಲಾವಿದರು, ರಾಜಕೀಯ ಮುಖಂಡರು ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಸೇರಿ ಶ್ರೀಸಾಮಾನ್ಯರು ಉತ್ಸವದಲ್ಲಿ ಭಾಗಿ ಆಗಿರುತ್ತಿದ್ದರು. ಆದರೆ, ನಂತರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಿಕ್ಕಿ ರಾಷ್ಟ್ರೀಯ ಉತ್ಸವ ಜಿಲ್ಲಾ ಉತ್ಸವವಾಗಿದ್ದು, ಇದೀಗ ಅದೂ ಸಹ ಇಲ್ಲ ಎನ್ನುವಂತಾಗಿರುವುದು ವಿಪರ್ಯಾಸವಾಗಿದೆ.
ಸದ್ಯ ಬಾಗಲಕೋಟೆ ಜಿಲ್ಲೆ ಪ್ರತಿ ವರ್ಷ ಅತಿವೃಷ್ಠಿ ಇಲ್ಲವೇ ಅನಾವೃಷ್ಠಿಗೆ ಸಿಲುಕುವುದು ಸಾಮಾನ್ಯವಾಗಿದೆ. ಹಾಗೆಂದು ಜಿಲ್ಲೆಯಲ್ಲಿ ನಡೆಯುವ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಿಲ್ಲುವುದಿಲ್ಲ. ಆದರೆ, ಚಾಲುಕ್ಯ ಉತ್ಸವಕ್ಕೆ ಮಾತ್ರ ಅದನ್ನು ತೋರಿಸುತ್ತಾ ಬರಲಾಗುತ್ತಿದೆ. ಈ ವರ್ಷವೂ ಸಹ ಅದೇ `ಬರ’ ಉತ್ಸವಕ್ಕೆ ಗರ ಹಿಡಿಯುವ ಸಾಧ್ಯತೆ ಇದ್ದು, ಈವರೆಗೂ ಚಾಲುಕ್ಯ ಉತ್ಸವ ನಡೆಸುವ ಬಗ್ಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಾಗಲಿ ತುಟಿಪಿಟಿಕ್ ಎಂದಿಲ್ಲ. ಇತ್ತ ವಿಪಕ್ಷಗಳು ಸಹ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದರಿಂದ ಚಾಲುಕ್ಯ ಉತ್ಸವಕ್ಕೆ ಮತ್ತೊಮ್ಮೆ ಕರಿನೆರಳು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಅವ್ರನ್ನ ಕೇಳಿದ್ರೆ ಗೊತ್ತಿಲ್ಲಪ್ಪಾ.. ಸರ್ಕಾರದಲ್ಲಿ ನಾನಿದಿನೇನ್ರಿ.. ಆ ಬಗ್ಗೆ ಮಾತಾಡಬೇಕು ಅಂತ ಹಗುರವಾಗಿ ಪ್ರತಿಕ್ರಿಯಿಸುತ್ತಾರೆ ಅಂತ ಸ್ಥಳೀಯರು ತಿಳಿಸಿದ್ದಾರೆ.
2009 ರಿಂದ 2018ರ ಈ ಹತ್ತು ವರ್ಷಗಳ ಅವಧಿಯಲ್ಲಿ ಚಾಲುಕ್ಯ ಉತ್ಸವ ಅಂತ ನಡೆದಿದ್ದು ಮೂರು ಬಾರಿ ಮಾತ್ರ. 2010 ರ ಉತ್ಸವನ್ನು 2011ರ ಫೆಬ್ರವರಿಯಲ್ಲಿ ನಡೆಸಿದರು. ಹಾಗೆಯೇ 2013 ಮತ್ತು 2014ನೇ ಸಾಲಿನ ಉತ್ಸವಗಳನ್ನು ಕ್ರಮವಾಗಿ 14 ಮತ್ತು 15-ಫಬ್ರವರಿ ತಿಂಗಳಲ್ಲಿ ನಡೆಸಲಾಗಿದೆ. ಉಳಿದಂತೆ ಏಳು ವರ್ಷ ಚಾಲುಕ್ಯ ವೈಭವವನ್ನು ಆಚರಿಸಿಯೇ ಇಲ್ಲ. ಇದೀಗ 2015ರಿಂದ ಈ ನಾಲ್ಕು ವರ್ಷ ಉತ್ಸವದ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ.
ಇನ್ನೂ ಅಚ್ಚರಿಯ ವಿಷಯ ಎಂದರೆ ಈ ಹತ್ತು ವರ್ಷದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದು ಇದೇ ಬಾಗಲಕೋಟೆ ಜಿಲ್ಲೆಯ ಶಾಸಕರು. ಬಿಜೆಪಿ ಸರ್ಕಾರದಲ್ಲಿ ಗೋವಿಂದ ಕಾರಜೋಳ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಉಮಾಶ್ರೀ ಸಚಿವರಾಗಿದ್ದರು. ಈ ಇಬ್ಬರೂ ರಾಜ್ಯದ ವಿವಿಧೆಡೆ ನಡೆಯುವ ಉತ್ಸವಗಳಲ್ಲಿ ಭಾಗವಹಿಸಿ ಬರುತ್ತಿದ್ದರೂ ತಮ್ಮದೇ ಜಿಲ್ಲೆಯಲ್ಲಿ ಸೊರಗಿ ಹೋಗುತ್ತಿರುವ ಚಾಲುಕ್ಯ ಉತ್ಸವದ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ ಎನ್ನುವ ಅಪವಾದಗಳೂ ಇವೆ. ಇನ್ನು ಮೈಸೂರು ದಸರಾ ನಡೆಸುವ ಸರ್ಕಾರಕ್ಕೆ ಬರ ಎದುರಾಗಲ್ಲ. ಆದ್ರೆ ಚಾಲುಕ್ಯ ಮತ್ತು ಹಂಪಿ ಉತ್ಸವಗಳನ್ನು ಬಂದಾಗ ಸರ್ಕಾರಕ್ಕೆ ದಿಢೀರನೆ ಬರದ ಛಾಯೆ ಎದುರಾಗುತ್ತೆ. ಇದಕ್ಕೆಲ್ಲ ನಮ್ಮಲ್ಲಿನ ರಾಜಕೀಯ ಮುಖಂಡರ ಇಚ್ಛಾಶಕ್ತಿ ಕೊರತೆ ಇದೆ. ಸಿದ್ದರಾಮಯ್ಯ ಬಾದಾಮಿ ಶಾಸಕರಾದರೂ ಉತ್ಸವ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದು, ಏನೇ ಆಗಲಿ ಚಾಲುಕ್ಯ ಉತ್ಸವ ಈ ಬಾರಿ ನಡೆಸಲೇಬೇಕೆಂದು ಆಗ್ರಹ ಮಾಡುತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಬಾದಾಮಿ. ಇದೇ ಕ್ಷೇತ್ರದ ಚಾಲುಕ್ಯ ಉತ್ಸವ ಮೆರುಗಿಲ್ಲದೆ ಸೊರಗಿದೆ. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಮನಸ್ಸು ಮಾಡಿದ್ರೆ ಮತ್ತೆ ಚಾಲುಕ್ಯ ಉತ್ಸವ ಕಳೆಗಟ್ಟುತ್ತೆ ಅನ್ನೋ ನಂಬಿಕೆಯಲ್ಲಿ ಕ್ಷೇತ್ರದ ಜನರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv