ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ಜನರು ಇನ್ನೂ ನಂಬಿಕೆ ಇಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮುಂದುವರಿಯಲಿದೆ ಎಂದು ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಮುರಳೀಧರ್ ರಾವ್ ಪ್ರತಿಕ್ರಿಯೆ ನೀಡಿ, ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನೀರಿಕ್ಷಿತ ಮಟ್ಟ ತಲುಪುತ್ತಿದ್ದೇವೆ. ಎರಡು ರಾಜ್ಯದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. 22 ವರ್ಷಗಳ ಆಡಳಿತ ಜೊತೆಗೆ ಮತ್ತೆ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರ ಬರುತ್ತೆ ಎಂದು ಸಂತಸದಿಂದ ಹೇಳಿದರು.
ಪ್ರಧಾನಿ ಮೋದಿ ಮೇಲೆ ಜನರು ಇನ್ನೂ ನಂಬಿಕೆ ಇಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮುಂದುವರಿಯಲಿದೆ. ಮೋದಿ ಪ್ರತಿಬಾರಿ ಎಲ್ಲಾ ಕಡೆ ಪ್ರಚಾರ ಮಾಡುವಂತೆ ಮಾಡಿದ್ದಾರೆ. ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದವರು. ಅಷ್ಟೇ ಅಲ್ಲದೇ ಅಮಿತ್ ಷಾ ರಾಜ್ಯ ಸಭಾ ಸದಸ್ಯರಾಗಿದ್ದರು. ಆದ್ದರಿಂದ ಅವರು ಪ್ರಚಾರ ಮಾಡುವುದರಲ್ಲಿ ತಪ್ಪಿಲ್ಲ ಎಂದರು.
ನಮ್ಮ ನಿರೀಕ್ಷೆ 150 ಸೀಟುಗಳಾಗಿತ್ತು. ಆದರೆ ನಮ್ಮ ನಿರೀಕ್ಷೆಗಿಂತ ಕಡಿಮೆ ಬರುವ ಸಾಧ್ಯತೆ ಇದೆ. ಮೊದಲು ಪೂರ್ಣ ಫಲಿತಾಂಶ ಬಂದ ಮೇಲೆ ಸ್ಥಾನ ಕಡಿಮೆ ಆಗಲು ಏನು ಕಾರಣ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.