ಯಾದಗಿರಿ: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ (Iran-Israel War) ಎಫೆಕ್ಟ್, ಈಗ ಯಾದಗಿರಿ (Yadgiri) ಜಿಲ್ಲೆಯ ಜನರ ಅಡುಗೆ ಮನೆಗೆ ಬಿಸಿ ಮುಟ್ಟಿದೆ. ಜಿಲ್ಲೆಯಾದ್ಯಂತ ಕಳೆದ ಹತ್ತು ದಿನಗಳಿಂದ ಗ್ಯಾಸ್ ಸಿಲಿಂಡರ್ (Gas Cylinder) ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ಒಂದು ಗ್ಯಾಸ್ ಸಿಲಿಂಡರ್ಗಾಗಿ ಕಿಲೋ ಮೀಟರ್ಗಟ್ಟಲೆ ಕ್ಯೂ ನಿಲ್ಲುವಂತಾಗಿದೆ.
ಯುದ್ಧದ ಭೀತಿಯಿಂದ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳ್ಳಬಹುದು ಎಂಬ ವದಂತಿ ಹಬ್ಬಿದೆ. ಇದರಿಂದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ಕೊಡೇಕಲ್ ಗ್ರಾಮದ ಅಮರೇಶ್ವರ ಹೆಚ್ಪಿ ಗ್ಯಾಸ್ ಏಜೆನ್ಸಿ ಮುಂದೆ ನೂರಾರು ಗ್ರಾಹಕರು ಜಮಾಯಿಸಿದ್ದಾರೆ. ಸುಡುವ ಬಿಸಿಲನ್ನೂ ಲೆಕ್ಕಿಸದೆ, ವೃದ್ಧರು, ಮಹಿಳೆಯರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಿಲಿಂಡರ್ಗಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ: ಕೆಕೆಆರ್ಗೆ ಶ್ರೀಲಂಕಾ ವೇಗಿ ಎಂಟ್ರಿ – ಸತತ 6 ಸೋಲುಗಳಿಂದ ಕಂಗೆಟ್ಟಿರೋ ತಂಡಕ್ಕೆ ಸಿಗುತ್ತಾ ಬೂಸ್ಟ್?
ಇನ್ನು, ಕೊಡೇಕಲ್ ವ್ಯಾಪ್ತಿಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಇಲ್ಲಿ ಸುಮಾರು 1,030 ಸಿಲಿಂಡರ್ಗಳ ಬೇಡಿಕೆಯಿದೆ. ಆದರೆ ಏಜೆನ್ಸಿಗೆ ಕೇವಲ 342 ಸಿಲಿಂಡರ್ಗಳು ಮಾತ್ರ ಪೂರೈಕೆಯಾಗುತ್ತಿವೆ. ಅಂದರೆ ಬೇಡಿಕೆಯ ಮೂರನೇ ಒಂದು ಭಾಗದಷ್ಟು ಮಾತ್ರ ಗ್ಯಾಸ್ ಸಿಗುತ್ತಿದೆ. ಹೀಗಾಗಿ ಕ್ಯೂ ನಿಂತ ಎಲ್ಲರಿಗೂ ಸಿಲಿಂಡರ್ ಸಿಗುವುದು ಅನುಮಾನ ಎಂಬಂತಾಗಿದೆ. ಕಳೆದ 12 ದಿನಗಳಿಂದ ಗ್ಯಾಸ್ ಪೂರೈಕೆಯಾಗದ ಹಿನ್ನೆಲೆ ಜನರು ಅಡುಗೆ ಮಾಡಲು ಪರದಾಡುತ್ತಿದ್ದಾರೆ. ಇಂದು ಸಿಲಿಂಡರ್ ಬಂದ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಹತ್ತಾರು ದಿನಗಳಿಂದ ಗ್ಯಾಸ್ ಇಲ್ಲದೆ ಕಷ್ಟಪಡುತ್ತಿದ್ದ ಜನರು, ಈಗ ಸಿಲಿಂಡರ್ ಬಂದರೂ ನಮಗೆ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಇತ್ತ ಏಜೆನ್ಸಿ ಮಾಲೀಕರು ಕೂಡ ಪೂರೈಕೆ ಕೊರತೆಯಿಂದ ಗ್ರಾಹಕರನ್ನು ಸಮಾಧಾನಪಡಿಸಲು ಹರಸಾಹಸ ಪಡುವಂತಾಗಿದೆ. ಇದನ್ನೂ ಓದಿ: ಬಲಮುರಿ, ಎಡಮುರಿ ಪ್ರವಾಸಿ ತಾಣಗಳಿಗೆ ನಿಷೇಧ – ಸರ್ಕಾರದ ನಡೆಗೆ ವ್ಯಾಪಾರಿಗಳ ಅಸಮಾಧಾನ

