ಹಾಸನದಲ್ಲಿ ನೀರಿಲ್ಲದೇ ಗುಳೆ ಹೊರಟ ಗ್ರಾಮಸ್ಥರು

Public TV
2 Min Read
HSN WATER

ಹಾಸನ: ಮಳೆಯಿಲ್ಲ, ಬೆಳೆಯಿಲ್ಲ ಅನ್ನೋ ಕಾರಣಕ್ಕೆ ಗುಳೆ ಹೋಗೋದನ್ನು ನಾವು ಕಂಡಿದ್ದೇವೆ. ಆದ್ರೆ ಹಾಸನ ಜಿಲ್ಲೆಯ ಗ್ರಾಮವೊಂದರಲ್ಲಿ ಕುಡಿಯಲು ಮತ್ತು ಬಳಕೆಗೆ ನೀರಿಲ್ಲ ಅಂತ ಹಳ್ಳಿಯ ಶೇಕಡ 60 ರಿಂದ 70ರಷ್ಟು ಮಂದಿ ಗ್ರಾಮ ಬಿಟ್ಟು ಹೋಗಿದ್ದಾರೆ. ಬೇಲೂರು ತಾಲೂಕಿನ ಬೋವಿಕಾಲೋನಿ ಅನ್ನೋ ಗ್ರಾಮದಲ್ಲಿ ಇಂಥ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ನೀರಿಲ್ಲದೇ ಪಡಬಾರದ ಕಷ್ಟ ಪಡುತ್ತಿರುವ ಪರಿಶಿಷ್ಟರು, ಸರ್ಕಾರದ ಭಾಗ್ಯ ಯೋಜನೆಗಳು ಹೋಗಲಿ, ನಮಗೆ ಮೊದಲು ನೀರು ಕೊಡಿ ಅಂತ ಪರಿ ಪರಿಯಾಗಿ ಬೇಡುತ್ತಿದ್ದಾರೆ.

HSN WATER 4

ಇದು ಶಿಲ್ಪಸೌಂದರ್ಯದ ನೆಲೆವೀಡು, ಹಳೇಬೀಡಿನ ಕೂಗಳತೆ ದೂರದಲ್ಲಿರುವ ನರಸೀಪುರ ಬೋಬಿ ಕಾಲೋನಿ. ಇಲ್ಲಿ ಸುಮಾರು 200 ಕುಟುಂಬಗಳು ವಾಸವಿದ್ದು, ಸುಮಾರು 1 ಸಾವಿರ ಜನಸಂಖ್ಯೆ ಇದೆ. ಇವರೆಲ್ಲರೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ಈ ಗ್ರಾಮಕ್ಕೆಂದೇ ಕೊರೆಸಿದ್ದ ಹಲವು ಕೊಳವೆ ಬಾವಿಗಳು ನೀರಿನ ಅಭಾವದಿಂದ ಬತ್ತಿಹೋಗಿವೆ. ಬೇಲೂರಿನ ಯಗಚಿ ಜಲಾಶಯದಿಂದ ನೀರಿನ ಸಂಪರ್ಕವಿದ್ದರೂ ಅಲ್ಲಿಂದು ನೀರು ಪೂರೈಕೆಯಾಗೋದು ಅಮಾವಾಸ್ಯೆಗೋ, ಹುಣ್ಣಿಮೆಗೋ. ಗ್ರಾಮದಲ್ಲಿ ನೀರಿನ ಸಮಸ್ಯೆ ಹೇಗಿದೆ ಅಂದ್ರೆ ಯಾರಾದ್ರು ಹೊರಗಿನವರು ಬಂದು ಕುಡಿಯಲು ನೀರು ಕೇಳಿದ್ರೂ ಕೂಡ ಮನೆಯಲ್ಲಿ ನೀರಿರೋದಿಲ್ಲ.

HSN WATER 2

ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತೇವೆ ಎಂದು ಹೇಳಿದ್ರೂ ಒಂದು ಟ್ಯಾಂಕ್ ನೀರು ಬಂದರೆ ಮನೆಗೊಂದು ಬಿಂದಿಗೆ ಸಿಗೋದು ಕಷ್ಟ. ನೀರಿನ ಅಭಾವದಿಂದಲೇ ಗ್ರಾಮದ ಶೇ.60 ರಿಂದ 70ರಷ್ಟು ಮಂದಿ ಮನೆಗೆ ಬೀಗ ಜಡಿದು ಊರು ಬಿಟ್ಟು ಮೂಡಿಗೆರೆ, ಮಡಿಕೇರಿ ಕಡೆಗೆ ವಲಸೆ ಹೋಗಿದ್ದಾರೆ. ಇನ್ನೂ ಕೆಲವರು ನಮಗೇ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಎಲ್ಲಿಂದ ತರೋದು ಅಂತ ಮೂಕಪ್ರಾಣಿಗಳನ್ನು ಮಾರಾಟ ಮಾಡಿದ್ದಾರೆ.

ಗ್ರಾಮದಲ್ಲಿ ಉಳಿದಿರುವುದು ವಯೋವೃದ್ಧರು, ಶಾಲೆಗೆ ಹೋಗುವ ಮಕ್ಕಳು, ಬಾಣಂತಿಯರು ಮಾತ್ರ. ಆಗೊಮ್ಮೆ ಈಗೊಮ್ಮೆ ಸ್ಥಳೀಯ ಗ್ರಾಮ ಪಂಚಾಯ್ತಿಯವರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಾರೆ. ಆದರೆ ಅದರಿಂದ ಒಂದು ಮನೆಗೆ 4 ಕೊಡ ನೀರು ಸಿಗೋದು ಕಷ್ಟ. ಇದೇ ಕಾರಣಕ್ಕೆ ಗ್ರಾಮದ ಪಕ್ಕ ಇರೋ ಪಾಚಿಗಟ್ಟಿದ ಕೆರೆ ನೀರನ್ನೇ ಬಳಕೆ ಮಾಡೋದು ಬಡಜನರಿಗೆ ಅನಿವಾರ್ಯವಾಗಿದೆ. ನೀರು ಕೊಡಿ ಸ್ವಾಮಿ ಅಂದ್ರೆ ಒಬ್ಬರತ್ತ ಇನ್ನೊಬ್ಬರು ಬೊಟ್ಟು ಮಾಡುತ್ತಾರೆ. ಕೊರೆಸಿದ್ದ ಕೊಳವೆಬಾವಿಗಳೆಲ್ಲಾ ಸತ್ತು ಹೋಗಿವೆ. ಗ್ರಾಮದ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದ್ರೆ ಸ್ವಚ್ಛಭಾರತ್ ನಿರ್ಮಾಣ ಅಭಿಯಾನ ಯೋಜನೆಯಡಿ ರೇಷನ್ ಕಾರ್ಡ್ ಕಟ್ ಮಾಡುವ ಬೆದರಿಕೆ ಹಾಕಿ ಬಹುತೇಕ ಮನೆಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಬಳಕೆ ಮಾಡಲು ನೀರೇ ಇಲ್ಲ. ಇದರಿಂದಾಗಿ ಬಾಣಂತಿಯರ ಪಾಡಂತೂ ಹೇಳತೀರದ್ದಾಗಿದೆ.

HSN WATER 3

ಶುಚಿಯಾದ ನೀರಿಲ್ಲದ ಕಾರಣ ಗ್ರಾಮದ ಹೆಚ್ಚು ಜನರು ಕಜ್ಜಿ, ತುರಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ನಮಗೇನೂ ಬೇಡ, ಮೊದಲು ನೀರು ಕೊಡಿ ಅನ್ನೋದು ನೊಂದ ಜನರ ಮನವಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *