ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 8-10 ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿವೆ. ಕುಸಿದು ಬಿದ್ದ ಮನೆಗಳಿಗೆ ಸರ್ಕಾರದಿಂದ ಪರಿಹಾರದ ಮೊತ್ತ ಪಡೆಯಲು ಜನರು ಅಡ್ಡ ದಾರಿ ಹಿಡಿದಿದ್ದಾರಾ? ಹೀಗೊಂದು ಅನುಮಾನ ಕಾಡಲು ತಹಶೀಲ್ದಾರ್ ಅವರು ಬರೆದಿರುವ ಪತ್ರವೇ ಸಾಕ್ಷಿಯಾಗಿದೆ.
ಹೌದು, ಪರಿಹಾರದ ಹಣ ಪಡೆಯುವ ಸಲುವಾಗಿ ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ. ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಸೊರಬ ತಹಶೀಲ್ದಾರ್ ಶೋಭಲಕ್ಷ್ಮಿ ಅವರು ಕೆಳ ಹಂತದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಮನೆ ಬೀಳದಿದ್ದರೂ ಪರಿಹಾರದ ಹಣ ಪಡೆಯುವ ಸಲುವಾಗಿ ಜನರೇ ಮನೆಯನ್ನು ಕೆಡವಲು ಮುಂದಾಗಿದ್ದಾರಾ? ಪರಿಹಾರದ ಹಣ ಪಡೆಯುವ ಸಲುವಾಗಿ ಸಾರ್ವಜನಿಕರು ಉದ್ದೇಶ ಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ ಎಂದು ತಹಶೀಲ್ದಾರ್ ಅವರು ಪತ್ರದ ಮೂಲಕ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಇದನ್ನೂ ಓದಿ: ಸರ್ಕಾರಿ ಇಲಾಖೆಯ ಪತ್ರ ವ್ಯವಹಾರಗಳು ಕನ್ನಡದಲ್ಲೇ ಆಗಬೇಕು: ಟಿ.ಎಸ್.ನಾಗಾಭರಣ
ಈ ಹಿಂದೆ ಮಳೆಗೆ ಸಂಪೂರ್ಣ ಮನೆ ಹಾನಿಯಾಗಿದ್ದರೆ 95 ಸಾವಿರ ರೂ. ಪರಿಹಾರ ಇತ್ತು. ಇದೀಗ ಸರ್ಕಾರ ಪರಿಹಾರದ ಮೊತ್ತವನ್ನು 95 ಸಾವಿರ ರೂ.ನಿಂದ 5 ಲಕ್ಷ ರೂ.ಗೆ ಏರಿಕೆ ಮಾಡಿದೆ. ಭಾಗಶಃ ಮನೆ ಹಾನಿಯಾಗಿದ್ದರೆ 5,200 ರೂ. ಪರಿಹಾರ ಇತ್ತು. ಅದನ್ನು ಇದೀಗ 50 ಸಾವಿರ ರೂ.ಗೆ ಏರಿಕೆ ಮಾಡಿದೆ.
ಪರಿಹಾರದ ಮೊತ್ತ ಏರಿಕೆ ಆಗಿದ್ದೆ ಅಡ್ಡ ದಾರಿಗೆ ಕಾರಣವಾಯ್ತಾ? ಅಥವಾ ಸಾರ್ವಜನಿಕರ ಅಡ್ಡ ದಾರಿ ಹಿಂದೆ ಅಧಿಕಾರಿಗಳ ಕೈವಾಡ ಏನಾದ್ರೂ ಇದೆಯಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದನ್ನೂ ಓದಿ: ಶಿರಾಡಿ ಘಾಟ್‍ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ – ಘನ ವಾಹನಗಳಿಗೆ ನಿರ್ಬಂಧ ಮುಂದುವರಿಕೆ