– ನಮಗೆ ಯಾವ ಫ್ರೀನೂ ಬೇಡ.. ರೇಟ್ ಜಾಸ್ತಿ ಮಾಡೋದು ಸರಿಯಲ್ಲ: ಗಂಡಸರ ಪರ ನಿಂತ ಮಹಿಳೆಯರು
ಬೆಂಗಳೂರು: ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಹೀಗೆ ಎಲ್ಲದಕ್ಕೂ ದರ ಹೆಚ್ಚಿಸಿದರೆ, ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರು ಕೂಡ ಪುರುಷರ ಪರ ನಿಂತು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ನಮಗೆ ಫ್ರೀ ಟಿಕೆಟ್ ಬೇಡವೇ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳೆಯರಿಗೆ ಫ್ರೀ ಬಸ್ ಟಿಕೆಟ್ ಕೊಡುವ ಅವಶ್ಯಕತೆಯೇ ಇರಲಿಲ್ಲ. ನಿತ್ಯ ಪ್ರಯಾಣಕ್ಕೆ ತುಂಬಾ ಕಷ್ಟ ಆಗ್ತಿದೆ. ಬಸ್ ವ್ಯವಸ್ಥೆ ಕೂಡ ಕಡಿಮೆ ಆಗಿ, ತುಂಬಾ ರಷ್ ಆಗ್ತಿದೆ. ಕಾಲೇಜು, ಆಫೀಸ್‌ಗೆ ಹೋಗುವವರಿಗೆ ತುಂಬಾ ಸಮಸ್ಯೆ ಆಗ್ತಿದೆ ಎಂದು ಮಹಿಳೆಯೊಬ್ಬರು ಟಿಕೆಟ್ ದರ ಏರಿಕೆಗೆ ಬೇಸರ ಹೊರಹಾಕಿದ್ದಾರೆ. ಮಹಿಳೆಯರಿಗೆ ಫ್ರೀ ಇದ್ದರೂ, ಬೇರೆ ರೀತಿಯಲ್ಲಿ ನಮಗೆ ತೆರಿಗೆ ಹೊರೆ ಹೆಚ್ಚಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಹೆಣ್ಣುಮಕ್ಕಳಿಗೆ ಆ ಭಾಗ್ಯ ಕೊಡ್ತೀವಿ, ಈ ಭಾಗ್ಯ ಕೊಡ್ತೀವಿ ಅಂತಾ ಸರ್ಕಾರದವರು ಎಲ್ಲಾ ಮೋಸ ಮಾಡ್ತಿದ್ದಾರೆ. ಒಂದು ಕಡೆಯಿಂದ ಕೊಟ್ಟು, ಇನ್ನೊಂದು ಕಡೆ ಕೊಟ್ಟಂಗೆ ಮಾಡ್ತಾರೆ. ಹೆಣ್ಣುಮಕ್ಕಳೇನು ಹೊರಗಿನವರಾ? ನಮ್ಮ ಕುಟುಂಬದಲ್ಲೇ ಇರುತ್ತಾರೆ. ಹಾಗಿದ್ಮೇಲೆ, ನಮ್ಮ ಕುಟುಂಬದ ನಾಶವೇ ಇದು. ಇವರು ಮೋಸ ಮಾಡ್ತಾರೆ. ಇದು ಮೋಸದ ಸರ್ಕಾರ ಅಂತಾ ನಮಗೆ ಮೊದಲೇ ಗೊತ್ತಿತ್ತು ಎಂದು ಪ್ರಯಾಣಿಕರೊಬ್ಬರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಹೆಣ್ಣುಮಕ್ಕಳಿಗೆ ಬಸ್ ಫ್ರೀ, ವಿದ್ಯುತ್ ಫ್ರೀ ಅಂತೀರಾ. ಆದರೆ, ಬೇರೆ ಎಲ್ಲದರ ರೇಟ್ ಜಾಸ್ತಿ ಮಾಡ್ತೀರಾ. ಬಡವರ ದುಡ್ಡನ್ನು ಸರ್ಕಾರ ಕೊಳ್ಳೆ ಹೊಡೀತಿದೆ. ಸರ್ಕಾರವೇ ಮೋಸ. ಬಿಜೆಪಿ, ಕಾಂಗ್ರೆಸ್ ಯಾವುದು ಬಂದರೂ ಅಷ್ಟೆ. ಎಲ್ಲಾ ವೇಸ್ಟ್. ಹೆಣ್ಣುಮಕ್ಕಳಿಗೆ ಬಸ್ ಫ್ರೀ ಅಂತಾರೆ. ಆದರೆ, ಗಂಡಸರಿಗೆ ರಾತ್ರೋರಾತ್ರಿ ದರ ಏರಿಸಿದ್ದಾರೆ. ಇದು ಮೋಸ. ಬಡವರಿಗೆ ತುಂಬಾ ಕಷ್ಟ ಆಗ್ತಿದೆ. ಸರ್ಕಾರ ಈ ರೀತಿ ಮಾಡಬಾರದು ಎಂದು ಮಹಿಳಾ ಪ್ರಯಾಣಿಕರೇ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೆ-ಸೆಟ್ 2024 ಫಲಿತಾಂಶ ಪ್ರಕಟ – 6,302 ಅಭ್ಯರ್ಥಿಗಳು ಅರ್ಹ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಸರ್ಕಾರ ಹೆಚ್ಚಳ ಮಾಡಿದೆ. ಶೇ.15 ರಷ್ಟು ಪ್ರಯಾಣ ದರ ಹೆಚ್ಚಿಸಿ ಆದೇಶ ಹೊರಡಿಸಿದೆ.