ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ವೃಂದಾವಸ್ಥರಾಗಿ 12 ದಿನಗಳು ಕಳೆದಿದೆ. ಪೇಜಾರಶ್ರೀಗಳು ಹುಟ್ಟುಹಾಕಿದ ಎಲ್ಲಾ ಸಂಸ್ಥೆಗಳಲ್ಲಿ ಮಠಗಳಲ್ಲಿ ಶ್ರೀಗಳ ಆರಾಧನೆ ನಡೆದಿದೆ.
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯ ಪ್ರಕಾರ ಉಡುಪಿಯ ಪೇಜಾವರ ಮಠದಲ್ಲಿ ಪವಮಾನ ಹೋಮ, ಪಾರಾಯಣಗಳು ಭಜನೆಗಳು ನೆರವೇರಿದೆ. ಮಧ್ಯಾಹ್ನ ಮಹಾಪೂಜೆ ಸಂದರ್ಭದಲ್ಲಿ ಪೇಜಾವರಶ್ರೀಗಳು ಬಳಸುತ್ತಿದ್ದ ಪವಿತ್ರ ಪಾದುಕೆಗೆ ಅಭಿಷೇಕ ಮತ್ತು ಪೂಜೆ ನೆರವೇರಿತು. ಸಾವಿರಾರು ಮಂದಿ ಪೇಜಾವರಶ್ರೀ ಭಕ್ತರು, ಮಠದ ಆರಾಧಕರು ಆರಾಧನಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪೇಜಾವರ ಮಠದ ಧಾರ್ಮಿಕ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ದೇಶದಲ್ಲಿ ಒಟ್ಟು ಎಂಬತ್ತು ಸಂಸ್ಥೆಗಳಲ್ಲಿ ಕೂಡಾ ವಿಶ್ವೇಶತೀರ್ಥರ ಆರಾಧನೆ ನಡೆಯುತ್ತದೆ. ಶಾಲಾ ಕಾಲೇಜುಗಳಲ್ಲಿ ಅನ್ನಾರಾಧನೆ ನಡೆಯುತ್ತದೆ. ಮಠ ಮತ್ತಿತರ ಧಾರ್ಮಿಕ ಕೇಂದ್ರದಲ್ಲಿ ಪೂಜೆ ಸಹಿತ ಅನ್ನ ಸಂತರ್ಪಣೆ ನಡೆಯುತ್ತದೆ ಎಂದರು.
Advertisement
ವಿಶ್ವೇತೀರ್ಥರ ಮಹಾ ಸಮಾರಾಧನೆ ನಿಮಿತ್ತ ಸಮಾಧಿ ಮಾಡಿದ ವಿದ್ಯಾಪೀಠದಲ್ಲಿ ಅಹೋರಾತ್ರಿ ಕಾರ್ಯಕ್ರಮಗಳಿವೆ. ಬೇರೆ ಕಡೆಗಳಲ್ಲಿ ವಿದ್ವತ್ ಗೋಷ್ಠಿ, ಭಜನೆ, ನುಡಿನಮನಗಳು ಆಯೋಜನೆಯಾಗಿದೆ. ಪೇಜಾವರ ಮಠದ ಛತ್ರಗಳು ದೇಶವ್ಯಾಪಿ ಇದೆ. ಅಲ್ಲೆಲ್ಲಾ ಊಟದ ವ್ಯವಸ್ಥೆಯನ್ನು ಭಕ್ತರಿಗೆ ಮಾಡಲಾಗಿದೆ.
Advertisement