– ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದ ವಿಶ್ವೇಶತೀರ್ಥರು
ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಹಲವಾರು ಪತ್ರಕರ್ತರು, ವಿದ್ವಾಂಸರು, ಸಾಹಿತಿಗಳು ಸಂದರ್ಶನ ಮಾಡಿದ್ದಾರೆ. ಆದರೆ ಅವರ ಜೀವಿತಾವಧಿಯ ಕಟ್ಟ ಕಡೆಯ ಸಂದರ್ಶನವನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮಾಡಿದ್ದರು.
ಮಕ್ಕಳ ಜೊತೆ ಮಕ್ಕಳಾಗಿ ಬಿಡುತ್ತಿದ್ದ ಪೇಜಾವರ ಸ್ವಾಮೀಜಿಯ ಬಾಲ್ಯ, ಸನ್ಯಾಸಿ ಜೀವನ, ಮುಂದಿನ ಧ್ಯೇಯದ ಬಗ್ಗೆ ಮಕ್ಕಳ ಪ್ರಶ್ನೆ ಯತಿಗಳ ಉತ್ತರ ಇಲ್ಲಿದೆ.
Advertisement
ಮಕ್ಕಳ ಪ್ರಶ್ನೆ: ನಿಮಗೆ ಸನ್ಯಾಸಿಯಾಗುವ ಆಲೋಚನೆ ಹೇಗೆ ಬಂತು?
ಪೇಜಾವರ ಶ್ರೀ ಉತ್ತರ: ನನಗೆ ಸ್ವಾಮಿಯಾಗುವ ಕನಸು ಇರಲಿಲ್ಲ. ಕೃಷ್ಣನಿಗೆ ಪೂಜೆ ಮಾಡಬೇಕೆಂಬ ಆಸೆಯಿತ್ತು. ಮನೆಯಲ್ಲಿ ಪೂಜೆ ಮಾಡುವಾಗ ಅದನ್ನು ತಂದೆ-ತಾಯಿಯಲ್ಲಿ ಹೇಳಿಕೊಂಡಿದ್ದೆ. ಪೇಜಾವರ ಮಠಕ್ಕೆ ಸನ್ಯಾಸಿಯಾಗುತ್ತೇನೆ ಎಂದು ಕನಸು ಮನಸ್ಸಿನಲ್ಲಿ ಎಂದುಕೊಂಡಿರಲಿಲ್ಲ. ಭಗವಂತನ ಇಚ್ಛೆ ಹೀಗಾಗಬೇಕೆಂದು ಇತ್ತೋ ಏನೋ?
Advertisement
Advertisement
ಪ್ರಶ್ನೆ: ಯಾವ ಪುಸ್ತಕ ಬರೆದಿದ್ದೀರಿ? ಸ್ವಾಮೀಜಿ?
ಉತ್ತರ: ನಾನು ಗೀತಸಾರೋದ್ಧಾರ, ನ್ಯಾಯಾಮೃತ ನಿರ್ಣಯ, ತತ್ವಾಂಜಲಿ ಮುಂತಾದ ಪುಸ್ತಕ ಬರೆದಿದ್ದೇನೆ.
Advertisement
ಪ್ರಶ್ನೆ: ನೀವು ಚಿಕ್ಕವರಿದ್ದಾಗ ಆಟ ಆಡಿದ್ದ ನೆನಪು ಮಾಡ್ಕೊಳ್ಳಿ ಸ್ವಾಮೀಜಿ?
ಉತ್ತರ: ಕಬಡ್ಡಿ ಆಡಿದ್ದೆ. ಕಂಬದ ಆಟ, ಟೊಪ್ಪಿ ಆಟಗಳನ್ನು ಆಡಿದ್ದೆ. ಈಗಿನ ಮಕ್ಕಳಿಗೆ ಅದೆಲ್ಲ ಗೊತ್ತಿಲ್ಲ. ಈಗ ಮಕ್ಕಳ ಜಗತ್ತೇ ಬೇರೆ.
ಪ್ರಶ್ನೆ: ಸ್ವಾಮೀಜಿ ಸ್ವಾತಂತ್ರ್ಯ ಮೊದಲು ಹೇಗಿತ್ತು? ಈಗ ಹೇಗಿದೆ.
ಉತ್ತರ: ಸ್ವಾತಂತ್ರ್ಯ ಸಿಗುವ ಮೊದಲು ಇಷ್ಟೆಲ್ಲಾ ಅನುಕೂಲತೆ ಇರಲಿಲ್ಲ. ವಿದ್ಯುತ್, ರಸ್ತೆ, ದೀಪದ ವ್ಯವಸ್ಥೆ ಇರಲಿಲ್ಲ. ಕುಡಿಯಲು ನೀರು ಇರಲಿಲ್ಲ. ಭಾರತದಲ್ಲಿ ಜನ ಆಹಾರವಿಲ್ಲದೆ ಸತ್ತು ಹೋಗುತ್ತಿದ್ದರು. ಬೇಕಾದ ವಸ್ತು, ವಾಹನ ಜನರ ಕೈಗೆ ಸಿಗುತ್ತಿರಲಿಲ್ಲ. ನಾನು ರಥಬೀದಿಯಲ್ಲಿದ್ದೆ. ಎಲ್ಲಾ ಸ್ವಾಮಿಗಳು ಸೇರಿ ಉಪನ್ಯಾಸ ಮಾಡಿದ್ದೆವು. ಸ್ವಾತಂತ್ರ್ಯದ ಮಹತ್ವ ಹೇಳಿದ್ದೆವು. ಮಧ್ಯರಾತ್ರಿ 12 ಗಂಟೆಗೆ ಮಾಡಿದ ಉಪನ್ಯಾಸ ಅದು. ಮೆರವಣಿಗೆ ಎಲ್ಲ ರಥಬೀದಿಗೆ ಬಂದಿತ್ತು. ನಾವು ಸ್ವಾಮಿಗಳು ಖುಷಿಪಟ್ಟಿದ್ದೆವು.
ಪ್ರಶ್ನೆ: ನಾವು ಒಳ್ಳೆ ರೀತಿಯಲ್ಲಿ ಅಧ್ಯಯನ ಮಾಡಲು ಟಿಪ್ಸ್ ಕೊಡಿ ಸ್ವಾಮೀಜಿ.
ಉತ್ತರ: ಅಧ್ಯಯನ ಮಾಡಲು ದೇವರ ಭಕ್ತಿ ಬೇಕು. ಪ್ರಯತ್ನ ಬೇಕು. ಪ್ರಯತ್ನ ಮತ್ತು ದೇವರ ಫಲದಿಂದ ಸಾಧನೆ ಸಾಧ್ಯ. ಗುರುಗಳಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಿ.
ಪ್ರಶ್ನೆ: ನಾವು ಓದಲು ಕುಳಿತಾಗ ಏನೇನೋ ಆಲೋಚನೆ ಬರುತ್ತೆ ಸ್ವಾಮೀಜಿ?
ಉತ್ತರ: ಅಭ್ಯಾಸ ಮಾಡುವಾಗ ಒಂದೇ ವಿಚಾರಕ್ಕೆ ಗಮನ ಕೊಡಬೇಕು. ಆಟದ ಸಮಯಕ್ಕೆ ಆಟ. ಟಿವಿ ನೋಡುವಾಗ ಟಿವಿ. ಎಲ್ಲದಲ್ಲೂ ಲಿಮಿಟ್ ಹಾಕಿಕೊಳ್ಳಲೇಬೇಕು. ಜೀವನದಲ್ಲಿ ಸಮಯ ನಿಗದಿ ಮಾಡಿ. ವಿದ್ಯಾರ್ಥಿಗಳ ಕೆಲಸ ವಿದ್ಯಾರ್ಜನೆ ಮಾಡುವುದು. ಅದಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟರೆ ಮುಂದೆ ಆಯಾಯ ಅವಧಿಗಳಿಗೆ ಉಳಿದದ್ದನ್ನು ಮಾಡಿಕೊಂಡು ಹೋಗಬಹುದು.
ಪ್ರಶ್ನೆ: ಮೋದಿ ಪ್ರಮಾಣವಚನ ಅನುಭವ ಹೇಳಿ?
ಉತ್ತರ: ಎಲ್ಲರೂ ಹೋದಂತೆ ಹೋದೆ. ಅದರಲ್ಲೇನಿದೆ ವಿಶೇಷ, ಆಶೀರ್ವಾದ ಮಾಡಿದೆ ಬಂದೆ ಇಷ್ಟೇ.
ಪ್ರಶ್ನೆ: ಹಸುಗಳ ಮೇಲೆ ಇಷ್ಟೊಂದು ಪ್ರೀತಿ ಯಾಕೆ?
ಉತ್ತರ: ಕಿರಿಯ ಶ್ರೀಗಳು ಗೋಶಾಲೆ ಮಾಡಿದ್ದಾರೆ. ಅವರೇ ಅದನ್ನು ಸಂಪೂರ್ಣ ನೋಡಿಕೊಳ್ಳುತ್ತಾರೆ. ನನಗೆ ಸಮಯವಿದ್ದಾಗ ಅಲ್ಲಿ ಹೋಗಿ ಬರುತ್ತೇನೆ. ಹಸುವಿನ ಜೊತೆ ಮಾತನಾಡಬೇಕು. ಮುಟ್ಟಿ ಮಾತನಾಡಬೇಕು. ಹಸುಗಳಿಗೂ ಮನುಷ್ಯನಿಗೂ ಬಹಳ ಸಂಬಂಧವಿದೆ.
ಪ್ರಶ್ನೆ: ಭಾರತದ ಅಭಿವೃದ್ಧಿ ಹೇಗೆ?
ಉತ್ತರ: ನೀವು ಚೆನ್ನಾಗಿ ಓದಿ. ನಿಮಗೆ ದೊಡ್ಡವರಾದಾಗ ಗೊತ್ತಾಗುತ್ತದೆ. ದೊಡ್ಡವರಾದ ಮೇಲೆ ನಿಮ್ಮ ಅನುಭವಕ್ಕೆ ಬರುತ್ತದೆ.
ಪ್ರಶ್ನೆ: ಸನ್ಯಾಸ ತೆಗೆದುಕೊಳ್ಳುವಾಗ ನಿಮ್ಮ ಗುರುಗಳ ಕಿವಿಮಾತು ಏನಾಗಿತ್ತು?
ಉತ್ತರ: ಮಧ್ವಾಚಾರ್ಯರೇ ಅಷ್ಟಮಠಾಧೀಶರಿಗೆ ಕಿವಿ ಮಾತು ಹೇಳಿದ್ದಾರೆ. ಮುಂದೆಯೂ ಅದೇ ಇರುತ್ತದೆ. ವಿಷ್ಣುವೇ ಸರ್ವೋತ್ತಮ ಎಂದು ನಂಬಬೇಕು. ಅದನ್ನು ಪಸರಿಸುವ ಕಾಯಕ ಮಾಡಬೇಕು. ದೇವರಲ್ಲಿ ಭಕ್ತಿ ಮಾಡಬೇಕು. ಪಾಠ ಪ್ರವಚನ ನಿರಂತರ ಇರಬೇಕು. ಸ್ವಾಮೀಜಿಯಾದವರು ಅಧ್ಯಯನ ಮಾಡಲೇಬೇಕು. ಮಧ್ವಾಚಾರ್ಯರು ಹೇಳಿದ್ದನ್ನೆ ಎಲ್ಲರೂ ಹೇಳುವುದು, ಪಾಲಿಸುವುದು. ಯತಿಗಳು ಹೇಗಿರಬೇಕು ಅದರಂತೆ ನಾವು ನಡೆಯಬೇಕು.
ಇದೇ ವೇಳೆ ಪೇಜಾವರ ಶ್ರೀಗಳು ಸನ್ಯಾಸ ಬೇಕಾ ನಿನಗೆ? ಸ್ವಾಮೀಜಿ ಆಗ್ತೀಯಾ? ಎಂದು ವಿದ್ಯಾರ್ಥಿಗೆ ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿ ಗೊತ್ತಿಲ್ಲ ಸ್ವಾಮೀಜಿ ಎಂದು ಉತ್ತರಿಸಿದ್ದಾನೆ. ಬಳಿಕ ವಿದ್ಯಾರ್ಥಿಗಳು ಪೇಜಾವರ ಶ್ರೀಗಳಿಗೆ ಮತ್ತೆ ಪ್ರಶ್ನೆ ಕೇಳಲು ಶುರು ಮಾಡಿದರು.
ಪ್ರಶ್ನೆ: ನಿಮ್ಮ ಇಷ್ಟದ ಪಾಠ ಯಾವುದು?
ಉತ್ತರ: ವೇದಾಂತ ಬಹಳ ಮುಖ್ಯ. ಸಾಹಿತ್ಯ ಇಷ್ಟವೇ. ಆದರೆ ವೇದಾಂತದಷ್ಟು ಯಾವುದೂ ಇಷ್ಟವಿಲ್ಲ. ಮಧ್ವಾಚಾರ್ಯರ ಸಿದ್ಧಾಂತವೇ ವೇದಾಂತ.
ಪ್ರಶ್ನೆ: ವಿದ್ಯಾಪೀಠ ಆರಂಭಿಸಲು ಸ್ಫೂರ್ತಿ ಹೇಗೆ ಬಂತು?
ಉತ್ತರ: ಸಮಾಜದಲ್ಲಿ ವಿದ್ವಾಂಸರ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲ ವರ್ಷ ಕಳೆದರೆ ಪಂಡಿತರಿಲ್ಲದ ಸ್ಥಿತಿ ಬರಬಹುದು. ಪಾಠ ಮಾಡುವವರು ಇಲ್ಲದ ಸ್ಥಿತಿ ಬರಬಹುದು ಎಂಬ ಆತಂಕ ಇತ್ತು. ಬಹಳ ಶ್ರಮವಹಿಸಿ ವಿದ್ಯಾಪೀಠ ಮಾಡಿದ್ದೇನೆ. ಎಲ್ಲರ ಶ್ರಮವಿದೆ. ಜನರ ಸಹಕಾರ, ವಿದ್ಯಾರ್ಥಿಗಳ ಉತ್ಸಾಹವೂ ಮುಖ್ಯ. ಮುಂದೆಯೂ ವಿದ್ಯಾಪೀಠಕ್ಕೆ ಅಲ್ಲಿನ ವಿದ್ಯಾರ್ಜನೆಗೆ ನಿಮ್ಮ ಉತ್ಸಾಹದ ಸಹಕಾರ ಅಗತ್ಯ. ನೀವೆಲ್ಲ ಸಹಾಯ ಮಾಡಬೇಕು. ಈಗ ಒಳ್ಳೆದು ಮಾಡಿ ಕಲಿಯಿರಿ.
ಪ್ರಶ್ನೆ: ಮುಂದಿನ ಯೋಜನೆ ಏನು?
ಉತ್ತರ: ರೆಸಿಡೆನ್ಶಿಯಲ್ ಸ್ಕೂಲ್ ಮಾಡಬೇಕೆಂಬ ಆಸೆಯಿದೆ. ಇಂಗ್ಲಿಷ್ ಮೀಡಿಯಂ ಕಡೆ ಜನರ ಆಸಕ್ತಿ ಇದೆ. ಸಂಸ್ಕೃತ, ಸಿದ್ಧಾಂತ, ಧರ್ಮ ಎಲ್ಲವನ್ನೂ, ಆನಂದತೀರ್ಥ ವಿದ್ಯಾಲಯ ಮತ್ತು ವಾಸುದೇವ ಗುರುಕುಲದ ಮೂಲಕ ಮುಂದಿನ ಮಕ್ಕಳಿಗೆ ಕೊಡಬೇಕು. ಎಲ್ಲಾ ಧರ್ಮದ ಮಕ್ಕಳಿಗೂ ಧಾರ್ಮಿಕ ಜ್ಞಾನ ಬರಬೇಕೆಂಬುದು ಉದ್ದೇಶ ಇದೆ. ಲೌಕಿಕ ವಿದ್ಯೆಯ ಜೊತೆ ಧಾರ್ಮಿಕ ವಿದ್ಯೆ ಮಕ್ಕಳಿಗೆ ಅತಿ ಅಗತ್ಯ.
ಮಕ್ಕಳು ಪ್ರಶ್ನೆಗೆ ಉತ್ತರಿಸಿದ ನಂತರ ಇಂದಿಗೆ ಸಾಕು. ಮುಂದಿನ ಬಾರಿ ಮತ್ತೆ ನಮ್ಮ ಮಾತುಕತೆ ಮುಂದುವರಿಸೋಣ ಎಂದ ಪೇಜಾವರಶ್ರೀ ಹರಿಪಾದ ಸೇರಿದ್ದಾರೆ. ಕಟ್ಟ ಕಡೆಯ ಸಂದರ್ಶನ ಈಗ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.