– ಶ್ರೀಗಳು ನನ್ನ ಪಾಲಿಗೆ ಥೇಟ್ ಶ್ರೀಕೃಷ್ಣನಂತಿದ್ದರು
ಉಡುಪಿ: ಹಿಂದೂ ಧರ್ಮದ ಪರಿಚಾರಕ ಪೇಜಾವರ ಶ್ರೀಗಳ ನೆಚ್ಚಿನ ಕಾರು ಚಾಲಕರಾಗಿದ್ದರು ಆರಿಫ್. ಶ್ರೀಗಳ ಜೊತೆ 9 ವರ್ಷದ ಪರಿಚಯವಾದರೂ ಕಳೆದ 4 ವರ್ಷಗಳಿಂದ ಆರಿಫ್ ಶ್ರೀಗಳ ಕಾರಿನ ಚಾಲಕರಾಗಿದ್ದರು. ಎಲ್ಲವೂ ಆರಿಫ್ ಅಂದುಕೊಂಡಂತೆಯೇ ಆಗಿದ್ದರೆ ಆರಿಫ್ ಕನಸು ಈ ಬಾರಿ ನೆರವೇರುತ್ತಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಪೇಜಾವರ ಶ್ರೀಗಳು ನನಗೊಂದು ಮಾತು ಕೊಟ್ಟಿದ್ದರು. ಆದರೆ ಈಗ ಆ ಮಾತು ಮರೆತು ಮೌನವಾಗಿದ್ದಾರೆ ಎಂದು ಶ್ರೀಗಳ ಕಾರು ಚಾಲಕ, ಮುಸ್ಲಿಂ ಯುವಕ ಆರಿಫ್ ಭಾವುಕರಾಗಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ರೀಗಳ ಕಾರು ಚಾಲಕ, ನಾನು ಕಳೆದ ನಾಲ್ಕು ವರ್ಷದಿಂದ ಶ್ರೀಗಳ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಶ್ರೀಗಳು ನನ್ನ ಪಾಲಿಗೆ ಶ್ರೀಕೃಷ್ಣನಂತೆ ಕಾಣುತ್ತಿದ್ದರು. ನನ್ನ ಕುಟುಂಬದ ಜೊತೆ ಆಪ್ತ ಬಾಂಧವ್ಯವೂ ಅವರಿಗಿತ್ತು. ಮುಸ್ಲಿಮರು ಎಂದು ಭೇದಭಾವ ಮಾಡಿಲ್ಲ. ನಿಮ್ಮ ರಕ್ತ ಕೆಂಪು, ನನ್ನ ರಕ್ತ ಕೆಂಪು. ಹೀಗಾಗಿ ಯಾವುದಕ್ಕೂ ಭಯಪಡಬೇಡಿ ಎನ್ನುತ್ತಿದ್ದರು. ಕೋಮು ಗಲಾಟೆಯನ್ನು ಕೂಡ ಅವರು ಮಧ್ಯಪ್ರವೇಶಿಸಿ ಕಡಿಮೆ ಮಾಡುತ್ತಿದ್ದರು ಎಂದು ಶ್ರೀಗಳ ಜೊತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ.
Advertisement
Advertisement
ಅವರಿಗೆ ಎಸಿ ಆಗುತ್ತಿರಲಿಲ್ಲ, ವಿಂಡೋ ಕ್ಲೋಸ್ ಮಾಡಬೇಕಾಗಿತ್ತು. ನಾನು ಸಾಕಷ್ಟು ಬಾರಿ ಅವರಿಗೆ, ಇಷ್ಟು ಸುತ್ತಾಡಬೇಡಿ ವಿಶ್ರಾಂತಿ ಪಡೆದುಕೊಳ್ಳಿ ಎಂದು ಸಲಹೆ ಕೊಡುತ್ತಿದ್ದೆ. ಕೆಲವೊಮ್ಮೆ ಆಯ್ತು ಆರಿಫ್ ಎಂದು ನನ್ನ ಮಾತಿಗೆ ಗೌರವ ಕೊಟ್ಟು ಕೆಲವೊಂದು ಕಾರ್ಯಕ್ರಮವನ್ನು ರದ್ದು ಮಾಡಿದ್ದೂ ಇದೆ. ಶ್ರೀಗಳು ಹಿಂದೂ ಧರ್ಮವನ್ನು ಕಟ್ಟಲು ತುಂಬಾ ಪ್ರಯತ್ನ ಮಾಡುತ್ತಿದ್ದರು. ಬೇರೆ ಧರ್ಮವನ್ನು ಗೌರವಿಸುತ್ತಿದ್ದರು. ಆ ಗುಣವನ್ನು ನೋಡಿ ಹೆಮ್ಮೆಯಾಗುತ್ತಿತ್ತು. ಕೃಷ್ಣ ಮಠಕ್ಕೆ ಯಾವಾಗ ಬೇಕಾದರೂ ಹೋಗುತ್ತಿದ್ದೆವು. ನಮ್ಮನ್ನು ಯಾರೂ ತಡೆಯುತ್ತಿರಲಿಲ್ಲ ಎಂದರು.
Advertisement
ಆರಿಫ್ ಅವರ ಹುಟ್ಟುಹಬ್ಬಕ್ಕೆ ಪ್ರತಿ ಬಾರಿಯೂ ರಕ್ತದಾನ ಶಿಬಿರ ಮಾಡುತ್ತಿದ್ದರು. ನಾಲ್ಕು ವರ್ಷದಿಂದ ಕಾರುಚಾಲಕನಾಗಿ ದುಡಿದ ಆರಿಫ್ ಶ್ರೀಗಳ 90 ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಆಸೆ ಹೊಂದಿದ್ದರು. ಜೊತೆಗೆ ರಕ್ತದಾನ ಶಿಬಿರಕ್ಕೆ ವ್ಯವಸ್ಥೆ ಕೂಡ ಮಾಡಿದ್ದರು. ಸಾಕಷ್ಟು ಮುಸ್ಲಿಂ ಯುವಕರು, ಸಂಘಟನೆಗಳು ಸೇರಿ ಶ್ರೀಗಳ ಹುಟ್ಟುಹಬ್ಬದ ಅದ್ಧೂರಿ ಆಚರಣೆಗೆ ನಿರ್ಧರಿಸಿದ್ದರು.
Advertisement
ಕಾರು ಚಾಲಕ ಆರಿಫ್‍ಗೆ ಶ್ರೀಗಳು ಕೊಟ್ಟಿದ್ದ ಮಾತೇನು?: ಶ್ರೀಗಳ 90ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಕ್ಕೆ ಆಹ್ವಾನ ನೀಡಲು ಹೋಗಿದ್ದೆವು. ಆಹ್ವಾನ ಸ್ವೀಕರಿಸಿದ ಪೇಜಾವರ ಶ್ರೀಗಳು ಈ ಬಾರಿಯ ರಕ್ತದಾನ ಶಿಬಿರಕ್ಕೆ ಬಂದೇ ಬರುತ್ತೇನೆ, ನಾನೇ ಉದ್ಘಾಟನೆ ಮಾಡುತ್ತೇನೆ. ನನ್ನ ಹುಟ್ಟುಹಬ್ಬವನ್ನು ನೀವು ಆಚರಿಸಿದ್ರೆ ಬಾರದೇ ಇರುತ್ತೇನಾ. ಎಲ್ಲೇ ಇದ್ದರೂ ಬಂದೇ ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಶ್ರೀಗಳು ಈಗ ಈ ಮಾತು ಮರೆತು ಮೌನವಾಗಿದ್ದಾರೆ ಎನ್ನುತ್ತಾ ಆರಿಫ್ ಭಾವುಕರಾದರು.