ಉಡುಪಿ: ಅಷ್ಟಮಠಗಳ ಹಿರಿಯ ಯತಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ 88 ವರ್ಷಗಳನ್ನು ಪೂರೈಸಿ 89ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಶ್ರೀಗಳಿಗೆ ಪುಷ್ಪಾಭಿಷೇಕ ಸಲ್ಲಿಸಲಾಯಿತು.
ಪೇಜಾವರ ಶ್ರೀಗಳ 89ನೇ ವರ್ಷದ ಹುಟ್ಟುಹಬ್ಬದ ಶುಭದಿನದಂದು ಮಠದ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀಗಳಿಗೆ ಪುಷ್ಪಾಭಿಷೇಕ ಮಾಡುವ ಮೂಲಕ ಗೌರವಿಸಿ ಶುಭಕೋರಿದ್ದಾರೆ. ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಕಮಲ ಪೀಠದಲ್ಲಿ ಕೂರಿಸಿ, ಶಾಲು-ಹಾರ ಹಾಕಿ ಪುಷ್ಪಾಭಿಷೇಕ ಮಾಡಲಾಯಿತು.
ಪೇಜಾವರ ಶ್ರೀಗಳ ಮೇಲೆ ಹೂವಿನ ಸುರಿಮಳೆಗೈದು ನೂರು ಕಾಲ ಆರೋಗ್ಯದಿಂದ ಇರಿ ಎಂದು ಪಲಿಮಾರು ಸ್ವಾಮೀಜಿ ಹಾರೈಸಿದರು. ಹಾಗೆಯೇ ಹಿರಿಯ ಶ್ರೀಗಳ ಪಾಂಡಿತ್ಯ, ಅವರು ಸಮಾಜಮುಖಿ ಕಾರ್ಯದಿಂದಲೇ ಉಳಿದ ಪೀಠಾಧಿಪತಿಗಳಿಗೆ ಮಾರ್ಗದರ್ಶಕ ಎಂದು ಹಾಡಿ ಹೊಗಳಿದರು. ಈ ಶುಭವೇಳೆಯಲ್ಲಿ ವೇದಿಕೆಯಲ್ಲಿದ್ದ ವಿದ್ವಾಂಸರು, ಸ್ವಾಮೀಜಿ ಶಿಷ್ಯರು, ಹಿರಿಯರು ಹಿರಿಯ ಮಠಾಧೀಶರಿಗೆ ಹುಟ್ಟು ಹಬ್ಬಕ್ಕೆ ಶುಭಕೋರಿದರು.
ಈ ಸಂದರ್ಭ ಮಾತನಾಡಿದ ಪೇಜಾವರ ಶ್ರೀಗಳು ನಾನು ಈ ಸನ್ಮಾನ, ಗೌರವ ಪ್ರೀತಿಗೆ ಅರ್ಹನೆ? ಇದೆಲ್ಲವನ್ನು ಮಾಡಿಸಿಕೊಳ್ಳುವ ಗುಣಗಳು ನನ್ನಲ್ಲಿವೆಯೇ ಎಂದು ಅಂತರಂಗದಲ್ಲಿ ಪ್ರಶ್ನೆ ಮಾಡುವ ಕಾಲ ಇದು. ನಿಮ್ಮ ಈ ಪ್ರೀತಿ, ಗೌರವ ನನ್ನ ಹೃದಯ ಕಮಲವನ್ನು ಅರಳಿಸಿದೆ. ಈ ಗೌರವವನ್ನು ಶ್ರೀಕೃಷ್ಣ ಮುಖ್ಯಪ್ರಾಣದ ಪಾದದ ಕೆಳಗೆ ಅರ್ಪಿಸುವುದಾಗಿ ಹೇಳಿ ಸಂತೋಷ ಹಂಚಿಕೊಂಡರು.