Connect with us

Bengaluru City

ವಿಶ್ವಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯ – ಬೆಂಗಳೂರಿನ ವಿದ್ಯಾಪೀಠದಲ್ಲಿ ವೃಂದಾವನಸ್ಥ

Published

on

– ಶ್ರೀಗಳದ್ದು ಇಚ್ಛಾ ಮರಣಿ ಎಂದ ಪುತ್ತಿಗೆ ಶ್ರೀ
– ಕೊನೆಯಾಸೆಯಂತೆ ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ

ಬೆಂಗಳೂರು: ಮಹಾಸಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಕೃಷ್ಣನಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರಶ್ರೀಗಳ ಅಂತಿಮ ವಿಧಿವಿಧಾನಗಳು ಮಾಧ್ವ ಪರಂಪರೆಗೆ ಅನುಗುಣವಾಗಿ ಮಾಡಲಾಯಿತು.

ನ್ಯಾಷನಲ್ ಕಾಲೇಜು ಮೈದಾನದಿಂದ ಸಂಜೆ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕ ತರಲಾಯಿತು. ಶ್ರೀಗಳಿಗೆ ಶ್ರೀಕೃಷ್ಣನ ದರ್ಶನ ಮಾಡಿಸಲಾಯಿತು. ಪಾರ್ಥಿವ ಶರೀರಕ್ಕೆ ಗೋಪಿಚಂದನ ಮತ್ತು ಮುದ್ರಾಧಾರಣೆಗಳು ನಡೆಯಿತು. ಹೊಸಬಟ್ಟೆ ಉಡಿಸಿ ಅಲಂಕಾರ ಮಾಡಿದ ನಂತರ ಶಿಷ್ಯರು ಕೃಷ್ಣ ಮತ್ತು ರಾಘವೇಂದ್ರ ಸ್ವಾಮೀಜಿಗಳ ಸನ್ನಿಧಾನದಲ್ಲಿ ಪೂಜೆ ಮಾಡಿಸಿದರು.

ಪೂಜೆಯ ಬಳಿಕ ಛತ್ರ ಚಾಮರದೊಂದಿಗೆ ಶ್ರೀಗಳ ಪಾರ್ಥಿವ ಶರೀರವನ್ನು ಬೃಂದಾವನಕ್ಕೆ ತರಲಾಯಿತು. ಈ ವೇಳೆ ಎರಡೂ ಬದಿಗೆ ನಿಂತಿದ್ದ ಭಕ್ತರು ಶ್ರೀಗಳಿಗೆ ಹೂ ಮಳೆ ಸುರಿಸಿದರು. ಬೃಂದಾವನದಲ್ಲಿ ಪೇಜಾವರ ಶ್ರೀಗಳನ್ನು ಜಪಮಾಡುವ ಭಂಗಿಯಲ್ಲಿ ಕೂರಿಸಲಾಯಿತು. ಶ್ರೀಗಳ ದೇಹದ ಎತ್ತರದ ಎರಡುಪಟ್ಟು ಆಳದ ಗುಂಡಿ(11 ಅಡಿ ಆಳ, 8 ಅಡಿ ಉದ್ದ) ತೋಡಿ, ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.

ತೀರ್ಥ ಪ್ರೋಕ್ಷಣೆ ಮಾಡಿದ ಬಳಿಕ ಪಾರ್ಥಿವ ಶರೀರದ ಸುತ್ತಲೂ ವಿವಿಧ ಕ್ಷೇತ್ರಗಳಿಂದ ತಂದ ಮಣ್ಣು, ಕರ್ಪೂರ, ಹತ್ತಿ, ಉಪ್ಪು ಇತ್ಯಾದಿ ತುಂಬಲಾಗಿತ್ತು. ನೆತ್ತಿಯ ಮೇಲಿನ ಭಾಗದಲ್ಲಿ ಒಂದು ತೂತಿರುವ ಪಾತ್ರೆಯಲ್ಲಿ ಸಾಲಿಗ್ರಾಮ ಇತ್ಯಾದಿ ಪೂಜಾ ಪರಿಕರಗಳನ್ನು ಇರಿಸಲಾಗಿತ್ತು. ಬಳಿಕ ಪೂರ್ತಿ ಬೃಂದಾವನವನ್ನು ಮಣ್ಣಿನಿಂದ ಮುಚ್ಚಲಾಯಿತು.

ಅಂತಿಮ ವಿಧಿವಿಧಾನಕ್ಕೆ ಮುನ್ನ ಕುಶಾಲು ತೋಪು ಸಿಡಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ವಂಚಿತರಾದವರಿಗೆ ಪಾಸ್ ಕೊಟ್ಟು ಶ್ರೀಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು.

ಹರ್ನಿಯಾ ಆಪರೇಷನ್ ನಡೆದಾಗಲೇ ಪೇಜಾವರ ಶ್ರೀಗಳು ತಮ್ಮ ಕೊನೆಯಾಸೆ ಬಿಚ್ಚಿಟ್ಟಿದ್ದರು. ಲಿಖಿತ ರೂಪದಲ್ಲಿ ಕೊನೆಯಾಸೆಯನ್ನು ಶ್ರೀಗಳು ಬರೆದುಕೊಟ್ಟಿದ್ದರು. ಅದೇನಂದರೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಅಂತ ಲಿಖಿತ ರೂಪದಲ್ಲಿ ಬರೆದು ಆಗಾಗ ಕಿರಿಯ ಶ್ರೀಗಳಿಗೆ ಅದನ್ನು ತೋರಿಸುತ್ತಿದ್ದರು. ಜಾಗವನ್ನು ಕೂಡ ಸೂಚಿಸಿ, ಇಲ್ಲೇ ನನ್ನ ಬೃಂದಾವನ ಆಗಬೇಕು ಎಂದು ಶ್ರೀಗಳು ಬರೆದು ಕೊಟ್ಟಿದ್ದರು.

ಬೆಳಗ್ಗೆ ಕೃಷ್ಣೈಕ್ಯ: ಪೇಜಾವರ ಶ್ರೀಗಳನ್ನು ಬೆಳಗ್ಗೆ 6:55ಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮಠಕ್ಕೆ ಕೊಂಡೊಯ್ಯಲಾಯಿತು. ಬಳಿಕ 9:20 ಗಂಟೆ ಹೊತ್ತಿಗೆ ಶ್ರೀಗಳ ಉಸಿರು ಕೃಷ್ಣ ಆತ್ಮ ಸೇರಿತು. ಈ ವೇಳೆ, ಮಠದಲ್ಲಿ “ಗೋವಿಂದ ಗೋವಿಂದ” ಎನ್ನುವ ಘೋಷಣೆ ಮೊಳಗಿಸುವ ಮೂಲಕ ಕೃಷ್ಣೈಕ್ಯರಾದ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. 10:20ಕ್ಕೆ ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಮಠದಿಂದ ಹೊರಕ್ಕೆ ತರಲಾಯಿತು. ಬಳಿಕ ಮದ್ವಸರೋವರಕ್ಕೆ ಕೊಂಡೊಯ್ದು ಪುಣ್ಯಸ್ನಾನ ಮಾಡಿಸಿ, ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಮಾಡಿಸಿ ಮಠದೊಳಗೆ ಆರತಿ ಎತ್ತಿಸಲಾಯಿತು.

ಉಡುಪಿ ನಗರದ ಶ್ರೀಗಳ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಿಸಲಾಯಿತು. ಮಧ್ಯಾಹ್ನ 12:15 ಗಂಟೆಗೆ ಮೃತದೇಹವನ್ನು ಅಜ್ಜರಕಾಡಿನ ಮೈದಾನಕ್ಕೆ ತರಲಾಯಿತು. ಈ ವೇಳೆ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮಧ್ಯಾಹ್ನ 1:30 ಗಂಟೆಯ ವರೆಗೂ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಬಳಿಕ 1.40ಕ್ಕೆ ಬೆಂಗಳೂರಿನತ್ತ ಏರ್‍ಲಿಫ್ಟ್ ಮಾಡಲಾಯಿತು.

ವಿಶೇಷ ಹೆಲಿಕಾಕ್ಟರ್ ಮೂಲಕ 1:38 ಆದಿ ಉಡುಪಿ ಹೆಲಿಪ್ಯಾಡ್ ನಿಂದ ಬೆಂಗಳೂರಿಗೆ ರವಾನಿಸಲಾಯ್ತು. ಕೊನೆಗೂ ತನ್ನ ಎರಡನೇ ಆಸೆಯ್ನೂ ಪೇಜಾವರ ಶ್ರೀಗಳು ಪೂರೈಸಿದರು. ವೃಂದಾವನವೂ ಶ್ರೀಗಳ ಇಚ್ಛೆಯಂತೆಯೇ ನಡೆದಿದೆ. ಇದಕ್ಕೆ ಹೇಳಿದ್ದು ಪೇಜಾವರಶ್ರೀ ಹಠವಾದಿ ಅಂತ. ಒಟ್ಟಿನಲ್ಲಿ ನಾಡು ಕಂಡ ಹಿರಿಯ ಸಂತ ಕಣ್ಮರೆಯಾಗುವುದು ಎಲ್ಲರಿಗೂ ಬೇಸರ ತಂದಿದೆ.

ಇಚ್ಛಾ ಮರಣಿ: ಶ್ರೀಗಳಿಗೆ ಸಾವು ಸನ್ನಿಹಿತವಾಗುತ್ತಿದೆ ಎನ್ನುವುದು ಗೊತ್ತಿತ್ತು ಎನ್ನುವಂತೆ ಕೊನೆ ದಿನಗಳಲ್ಲಿ ತಮ್ಮಿಷ್ಟದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಡಿಸೆಂಬರ್ 17ಕ್ಕೆ ತಿರುಪತಿಗೆ ತೆರಳಿ ದರ್ಶನ ಪಡೆದಿದ್ದರು. 18ರಂದು ಬೆಂಗಳೂರಿನ ವಿದ್ಯಾಪೀಠಕ್ಕೆ ಬಂದಿದ್ದರು. 19ರಂದು ಹಾಸನದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಹುಟ್ಟೂರು ರಾಮಕುಂಜ ತೆರಳಿ ಅಲ್ಲಿಂದ ಪಾಜಕಕ್ಕೆ ಹೋಗಿದ್ದರು. ಅಲ್ಲಿ ಸಂಜೆ 15 ನಿಮಿಷಗಳ ಕಾಲ ಗುರುಕುಲದಲ್ಲಿ ಪ್ರವಚನ ನೀಡಿದ್ದರು. ಅಷ್ಟೊತ್ತಿಗೆ ಶ್ರೀಗಳ ಆರೋಗ್ಯ ಏರುಪೇರಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪೇಜಾವರ ಶ್ರೀಗಳು ಇಚ್ಛಾ ಮರಣಿ ಎನ್ನುವ ಮಾತು ಕೇಳಿಬಂದಿದೆ. ಯಾಕಂದರೆ ಅಷ್ಠ ಮಠಗಳಲ್ಲಿ ಒಂದಾದ ಪುತ್ರಿಗೆ ಮಠದ ಸುಗುಣೇಂದ್ರ ಶ್ರೀಗಳು ಮಾತನಾಡಿ, ಪೇಜಾವರ ಶ್ರೀಗಳು ಮಂತ್ರಾಲಯದಲ್ಲಿ ನನಗೆ ಸಿಕ್ಕಿದ್ದರು. 23ರ ನಂತರ ಸದ್ಯಕ್ಕೆ ವಿದೇಶಕ್ಕೆ ಹೋಗಬೇಡಿ ಎಂದಿದ್ದರು. ಯಾಕೆ ಎಂದು ಕೇಳಿದಕ್ಕೆ ಶ್ರೀಗಳು ನಸು ನಕ್ಕಿದ್ದರು. ಶ್ರೀಗಳಿಗೆ ಮೊದಲೇ ಮುನ್ಸೂಚನೆ ಇತ್ತು ಅನ್ನಿಸುತ್ತಿದೆ. ಹಾಗಾಗಿ ನಾನು ವಿದೇಶಕ್ಕೆ ಹೋಗಿಲ್ಲ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *