ಬೆಂಗಳೂರು: ಉಡುಪಿಯ ಪೇಜಾವರ ಶ್ರೀಗಳು ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠದಲ್ಲಿ ಶ್ರೀ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದಾರೆ. ಇಂದಿನಿಂದ ಭಕ್ತರು ಶ್ರೀಗಳ ಬೃಂದಾವನ ದರ್ಶನ ಮಾಡಬಹುದು ಎಂದು ಪೂರ್ಣ ಪ್ರಜ್ಞಾ ವಿದ್ಯಾಪೀಠದ ಕಾರ್ಯದರ್ಶಿ ಕೇಶವ ಚಾರ್ಯ ತಿಳಿಸಿದ್ದಾರೆ.
ಭಾನುವಾರ ಉಡುಪಿ ಭಾಗದ ಮಧ್ವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಿದೆ. ರಾತ್ರಿಪೂರ್ತಿ ಅವರ ಬೃಂದಾವನ ಪ್ರವೇಶ ಆಗಿದ್ದು, ರಾತ್ರಿ ಪೂರ್ತಿ ಭಜನೆ-ಆರಾಧನೆ ನಡೆದಿದೆ. ಹೀಗಾಗಿ ಇಂದಿನಿಂದ ಶ್ರೀಗಳ ಬೃಂದಾವನ ದರ್ಶನ ಮಾಡಬಹುದು. ಇದನ್ನೂ ಓದಿ: ವಿಶ್ವಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯ – ಬೆಂಗಳೂರಿನ ವಿದ್ಯಾಪೀಠದಲ್ಲಿ ವೃಂದಾವನಸ್ಥ
ಪೇಜಾವರ ಶ್ರೀಗಳ ಬೃಂದಾವನ ಪ್ರವೇಶದ ಬಳಿಕ ಮಾತನಾಡಿದ ಕೇಶವ ಚಾರ್ಯ, ಇಂದಿನಿಂದ ಪ್ರತಿನಿತ್ಯ ಪಾಯಶ್ಚಿತ ಹೋಮ, ಪವಿತ್ರಯಾಗ, ಪುಷ್ಪಾರ್ಣ ಯಾಗ, ಇತ್ಯಾದಿ ಶಾಂತಿ ಹೋಮಗಳು ಮತ್ತು ಯಾಗಗಳು ನಡೆಯಲಿವೆ. 12ನೇ ದಿನಕ್ಕೆ ವಿಶೇಷ ಮಹಾಸಮಾರಾಧನೆ ನಡೆಯುತ್ತೆ. ಪರಮಪೂಜ್ಯ ವಿಶ್ವ ಪ್ರಸನ್ನ ಅವರ ನೇತೃತ್ವದಲ್ಲಿ ಅವರ ಆದೇಶದಂತೆ ಸತ್ಕಾರ್ಯಗಳು ನಡೆಯಲಿವೆ.
ಇಂದಿನಿಂದ ಭಕ್ತಾದಿಗಳು ಪೇಜಾವರ ಶ್ರೀಗಳ ಬೃಂದಾವನ ದರ್ಶನ ಮಾಡಲಿಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ಬೃಂದಾವನ ನಿರ್ಮಾಣ ಮಾಡೋದಕ್ಕೆ ಒಂದೂವರೆ ವರ್ಷ ಬೇಕಾಗಿತ್ತೆ. ಇದು ತಾತ್ಕಾಲಿಕ ಬೃಂದಾವನವಾಗಿದ್ದು, ಪ್ರತಿದಿನ ಪೂಜೆ ಪುನಸ್ಕಾರಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.