Connect with us

Chikkamagaluru

ಮಲೆನಾಡಿಗೆ ನಕ್ಸಲ್ ಪ್ಯಾಕೇಜ್, ನೀರಾವರಿ ಕ್ರಾಂತಿ, ದೇವಾಲಯಗಳ ಜೀರ್ಣೋದ್ಧಾರ

Published

on

ಚಿಕ್ಕಮಗಳೂರು: ಶರಣಾಗತಿ ನಕ್ಸಲರಿಗೆ ನೀಡುವ ಶರಣಾಗತಿ ಪ್ಯಾಕೇಜ್‍ಗೆ ಪೇಜಾವರ ಶ್ರೀಗಳೇ ಕಾರಣಕರ್ತರು.

ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರಿನಲ್ಲಿ ದಿಢೀರ್ ಉದ್ಭವವಾದ ರಕ್ತಸಿಕ್ತ ನಕ್ಸಲ್ ಚಳವಳಿ ಕಾರಾವಳಿ-ಮಲೆನಾಡಗರನ್ನು ಬೆಚ್ಚಿ ಬೀಳಿಸಿತ್ತು. ಮಲೆನಾಡಿಗರು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆಗ ಕರಾವಳಿ-ಮಲೆನಾಡಿನ ಅರಣ್ಯವಾಸಿಗಳ ಆಂತರಿಕ ಹಾಗೂ ಬೌದ್ಧಿಕ ಭಯವನ್ನು ಹೊಗಲಾಡಿಸಲು ಪೇಜಾವರರು ಆಳವಾದ ಅಧ್ಯಯನಕ್ಕೆ ಇಳಿದಿದ್ದರು.

ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 70 ಗ್ರಾಮ ಪಂಚಾಯಿತಿಯ ಜನರೊಂದಿಗೆ ನಿಂತಿದ್ದರು. ಮಲೆನಾಡಿಗೆ ಮರಣಶಾಸನವಾಗಿದ್ದ ಕುದುರೆಮುಖ ನ್ಯಾಷನಲ್ ಪಾರ್ಕ್ ವಿರುದ್ಧ ಬಡವರ ಬೆನ್ನಿಗಿದ್ದರು. ನಕ್ಸಲ್ ಎನ್‍ಕೌಂಟರ್‍ಗಳಿಂದ ಬೆಚ್ಚಿ ಬಿದ್ದಿದ್ದ ಮಲೆನಾಡಿಗರು ಪ್ರತಿ ದಿನ ಆತಂಕದ ಬದುಕು ಸಾಗಿಸುತ್ತಿದ್ದರು. ಆ ಭಾಗದ ಶಾಂತಿ ಸ್ಥಾಪನೆಗೆ ಪೇಜಾವರ ಶ್ರೀಗಳು ಪಣ ತೊಟ್ಟಿದ್ದರು. ಸ್ವತಃ ಪಾದಯಾತ್ರೆ ಮೂಲಕ ಜನರಲ್ಲಿ ಧೈರ್ಯ ತುಂಬಿದ್ದರು. ಚಿಕ್ಕಮಗಳೂರಿನ ಕೆರೆಕಟ್ಟೆ, ಮುಂಡಗಾರು, ಮೆಣಸಿನ ಹಾಡ್ಯ ಸೇರಿದಂತೆ ನಾಲ್ಕು ಜಿಲ್ಲೆಯ 70 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಜನರಿಗೆ ಧೈರ್ಯ ತುಂಬಲು ನಡೆಸಿದ ಪಾದಯಾತ್ರೆಯಲ್ಲಿ ಶ್ರೀಗಳು ಯಶಸ್ವಿ ಕೂಡ ಆಗಿದ್ದರು.

ದಿನದಿಂದ ದಿನಕ್ಕೆ ನಕ್ಸಲ್ ಚಟುವಟಿಕೆ ಗರಿಗೆದರಿದಾಗ ಸರ್ಕಾರದ ಮುಂದಿದ್ದದ್ದು ಎರಡೇ ಆಯ್ಕೆ. ಒಂದು ಎನ್‍ಕೌಂಟರ್, ಮತ್ತೊಂದು ಬಂಧಿಸಿ ಜೈಲಿಟ್ಟುವುದು. ಸರ್ಕಾರ ಕೂಡ ನಕ್ಸಲ್ ಸಮಸ್ಯೆ ಹಿಮ್ಮೆಟ್ಟಲು ಮುಂದಾಗಿತ್ತು. ಆಗ ಅವರಿಗೂ ಬದುಕಲು ಅವಕಾಶ ನೀಡಿ ಎಂದು ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರಕ್ಕೆ ಸಲಹೆ ನೀಡಿದ್ದು ಇದೇ ಪೇಜಾವರ ಶ್ರೀಗಳು. ಇವರ ಸಲಹೆಯ ಫಲದಿಂದ ದೇಶದಲ್ಲೇ ಮೊದಲ ಬಾರಿಗೆ ನಕ್ಸಲ್ ಪ್ಯಾಕೇಜ್ ಜಾರಿಗೆ ಬಂತು. ಶರಣಾಗುವ ನಕ್ಸಲರಿಗೆ ಸರ್ಕಾರ ನೀಡುವ ಪ್ಯಾಕೇಜಿಗೆ ಪೇಜಾವರರೇ ಕಾರಣಕರ್ತರಾದರು. ಕರ್ನಾಟಕದ ಬಳಿಕ ತಮಿಳುನಾಡು ಸರ್ಕಾರ ದೇಶದ ಎರಡನೇ ರಾಜ್ಯವಾಗಿ ಈ ಯೋಜನೆಯನ್ನ ಜಾರಿಗೆ ತಂದಿತು.

ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಮಲೆನಾಡಿನ ಭಾಗದಲ್ಲಿ 28ಕ್ಕೂ ಹೆಚ್ಚು ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಿದ ಕೀರ್ತಿ ಪೇಜಾವರ ಶ್ರೀಗಳಿಗೆ ಸಲ್ಲುತ್ತದೆ. ಎಲ್ಲ ದೇವಾಲಯಗಳು ನಕ್ಸಲ್ ಪ್ರದೇಶದ್ದೆ. ಕೊಪ್ಪ ತಾಲೂಕಿನ ವರ್ಲೆ ಗ್ರಾಮದಲ್ಲಿ ಕುಮಾರಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ದೇವಸ್ಥಾನವನ್ನು ಅಗೆದು ದೇವರ ಮೂರ್ತಿಯನ್ನು ತೆಗೆದಾಗ ಅಲ್ಲಿ ಪೇಜಾವರರಿಗೆ ಸುಮಾರು 400 ವರ್ಷದ ಹಳೆಯ ಚಿನ್ನದ ನಾಣ್ಯ ಸಿಕ್ಕಿತ್ತು.

ಸರ್ಕಾರ ಮಾಡಬೇಕಾದ ಕೆಲಸವನ್ನು ಪೇಜಾವರರೇ ಮಾಡಿದ್ದರು. ನಾಲ್ಕು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾವಿರಾರು ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಹೆಮ್ಮೆ ಪೇಜಾವರರದ್ದು. ಬಡ ಜನರ ಅಭಿವೃದ್ಧಿ, ಗ್ರಾಮಗಳ ಬೆಳವಣಿಗೆ, ಮಕ್ಕಳ ವಿದ್ಯಾಭ್ಯಾಸ, ಹಳ್ಳಿಗರ ಆರೋಗ್ಯ ಸೇರಿದಂತೆ ನೂರಾರು ಧರ್ಮಕಾರ್ಯ ಮಾಡಿದ್ದಾರೆ. ಇದೀಗ ಅವರ ಸಾವಿನಿಂದಾಗಿ ಮಲೆನಾಡಿಗೂ ಪೇಜಾವರರಿಗೂ ಇದ್ದ ಆತ್ಮೀಯತೆಯ ಕೊಂಡಿ ಕಳಚಿ ಬಿದ್ದಂತಾಗಿದೆ. ಅವರ ಹೆಜ್ಜೆ ಗುರುತುಗಳು ಮಲೆನಾಡಿಗರ ಅದರಲ್ಲೂ ಕುಗ್ರಾಮಗಳ ದಲಿತರ ಮನೆ-ಮನದಲ್ಲಿ ಎಂದೆಂದಿಗೂ ಚಿರಸ್ಥಾಯಿ.

Click to comment

Leave a Reply

Your email address will not be published. Required fields are marked *