Connect with us

Districts

ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

Published

on

ಉಡುಪಿ: ರಾಷ್ಟ್ರಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗಿ ಎಂಟು ದಿನಗಳು ಕಳೆದಿದೆ. ಉಡುಪಿಯಲ್ಲಿ ಶ್ರೀಗಳ ನುಡಿನಮನ, ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿದೆ.

ವಿಶ್ವೇಶತೀರ್ಥರೇ ಕಟ್ಟಿಸಿದ ಮಠದ ರಾಜಾಂಗಣದಲ್ಲಿ ಶ್ರೀಗಳಿಗೆ ಉಡುಪಿಯ ಜನತೆ, ಜನಪ್ರತಿನಿಧಿಗಳು, ಗಣ್ಯರ ಕಡೆಯಿಂದ ನುಡಿನಮನ ನಡೆದಿದೆ. ನುಡಿನಮನ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

ಸಾರ್ವಜನಿಕರ ಒತ್ತಾಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಶ್ರೀಗಳನ್ನು ಮಹಾತ್ಮನಿಗೆ ಹೋಲಿಸಿದರು. ಪೇಜಾವರ ಶ್ರೀಗಳ ಜೀವನವೇ ಒಂದು ಪಾಠ. ಅವರ ಪ್ರವಚನ ಅನುಸರಿಸುವ ಅಗತ್ಯವಿಲ್ಲ. ಅವರ ಜೀವನ ಪದ್ಧತಿ ಮತ್ತು ಬದ್ಧತೆ ಅನುಕರಣೆ ಮಾಡಿದರೆ ಸಾಕು ಎಂದರು.

ಪೇಜಾವರ ಶ್ರೀಗಳು ಜನಮಾನಸದಲ್ಲಿ ಉಳಿಯಬೇಕು. ಅಷ್ಟ ಮಠದ ಶ್ರೀಗಳು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಸ್ಮಾರಕ ನಿರ್ಮಾಣ, ಅದರ ರೂಪುರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಪೇಜಾವರ ಶ್ರೀಗಳನ್ನು ಪಡೆದ ಉಡುಪಿ ಧನ್ಯ. ಅವರನ್ನು ಕಳೆದುಕೊಂಡು ಎಲ್ಲಾ ಕ್ಷೇತ್ರಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ನುಡಿನಮನ ಅರ್ಪಿಸಿದರು.

ಸಾವಿರಾರು ಜನ ವಿಶ್ವೇಶತೀರ್ಥ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪೇಜಾವರ ಶ್ರೀಗಳ ಸ್ಮಾರಕ ಕೃಷ್ಣ ಮಠದಲ್ಲಿ ಸ್ಥಾಪನೆಯಾಗಬೇಕೋ, ಉಡುಪಿಯ ನಗರ ಪ್ರದೇಶದಲ್ಲಿ ಸ್ಥಾಪನೆ ಮಾಡಬೇಕೋ ಎಂಬ ಚರ್ಚೆ ಶುರುವಾಗಿದೆ. ಸ್ಮಾರಕ ನಿರ್ಮಾಣ ಮಾಡಬೇಕಾ ಅಥವಾ ಬೃಂದಾವನ ನಿರ್ಮಾಣ ಆಗಬೇಕಾ ಎಂಬ ಬಗ್ಗೆ ಕೂಡಾ ಚರ್ಚೆಗಳು ನಡೆಯುತ್ತಿವೆ.

Click to comment

Leave a Reply

Your email address will not be published. Required fields are marked *