ಉಡುಪಿ: ಜೀವನ ಪರ್ಯಂತ ಪೇಜಾವರ ಶ್ರೀಗಳು ಶ್ರೀಕೃಷ್ಣನ ಸೇವೆ ಮಾಡಿದ್ದಾರೆ. ಅವರನ್ನು ಕೃಷ್ಣಪರಮಾತ್ಮನೇ ಉಳಿಸಿಕೊಳ್ಳಲಿ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ಸಚಿವ ಕೆ.ಎಸ್ ಈಶ್ಚರಪ್ಪ ಪ್ರಾರ್ಥಿಸಿದ್ದಾರೆ.
ಉಡುಪಿಯ ಮಣಿಪಾಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳ ಜೀವನವೇ ನಮಗೆ ಆದರ್ಶ. ವೈದ್ಯರು 48 ಗಂಟೆ ಗಡುವು ಕೊಟ್ಟಿದ್ದಾರೆ. ಶ್ರೀಗಳು ನಿರಂತರ ಶ್ರೀಕೃಷ್ಣನ ಸೇವೆ ಮಾಡಿದವರು, ಕೃಷ್ಣ ಪೇಜಾವರ ಶ್ರೀಗಳನ್ನು ಉಳಿಸಿಕೊಳ್ಳಬೇಕು. ಅವರು ಜಾತಿ ಮೀರಿ ಕೆಲಸ ಮಾಡಿದ್ದಾರೆ. ಶ್ರೀಳು ದೇವರಿಗೆ ಸಮಾನ. ಅವರನ್ನು ಕಾಪಾಡಪ್ಪ ಅಂತ ಭಗವಂತನಲ್ಲಿ ಮಾತ್ರ ಕೇಳಿಕೊಳ್ಳುತ್ತೇನೆ ಎಂದರು.
ಪೇಜಾವರ ಶ್ರೀಗಳು ಹತ್ತಾರು ವರ್ಷ ಬದುಕಿ ಬಾಳಬೇಕು. ಭಗವಂತನ ಬಳಿ ಪ್ರಾರ್ಥಿಸಲೆಂದೇ ಉಡುಪಿಗೆ ಬಂದಿದ್ದೇನೆ. ನಮಗೆ ಅವರ ಮಾರ್ಗದರ್ಶನ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು.
ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಇಂದು ಮುಂಜಾನೆ 5 ಗಂಟೆಗೆ ಶ್ರೀಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಡಾ. ಸುಧಾ ವಿದ್ಯಾಸಾಗರ್ ನೇತೃತ್ವದ ಐವರು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಚಿಕಿತ್ಸೆಗೆ ಪೇಜಾವರ ಶ್ರೀಗಳು ಸ್ಪಂದಿಸುತ್ತಿದ್ದು, 24 ಗಂಟೆಗಳ ಕಾಲ ನಿಗಾ ವಹಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೇರಿ ಹಲವರು ಶ್ರೀಗಳ ಆಪ್ತರಿಗೆ ಕರೆ ಮಾಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಶನಿವಾರ ಉಡುಪಿಗೆ ತೆರಳಿ ಪೇಜಾವರರ ಆರೋಗ್ಯ ವಿಚಾರಿಸಲಿದ್ದಾರೆ. ಗೃಹಸಚಿವ ಅಮಿತ್ ಶಾ ಕೂಡ ನಾಳೆ ಮಣಿಪಾಲಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಪುತ್ತಿಗೆ ಮತ್ತು ತರಳಬಾಳು ಶ್ರೀಗಳು, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ ಹಲವು ಗಣ್ಯರು ಆಸ್ಪತ್ರೆ ಭೇಟಿ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಕೆಎಂಸಿ ಆಸ್ಪತ್ರೆ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. 88 ವರ್ಷ ವಯಸ್ಸಿನ ಶ್ರೀಗಳು ನಿನ್ನೆಯಷ್ಟೇ 4 ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಇತ್ತೀಚಿಗಷ್ಟೇ ತಿರುಪತಿ ಮತ್ತು ಉತ್ತರ ಭಾರತ ಪ್ರವಾಸಕ್ಕೂ ಹೋಗಿ ಬಂದಿದ್ದರು.