ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಎಲ್ಲಿ ನೋಡಿದರೂ ಹಚ್ಚ ಹಸುರಿನಿಂದ ಕಂಗೊಳಿಸುವ ಪರಿಸರ. ಇದರಿಂದಾಗಿ ಪ್ರಾಣಿ ಪಕ್ಷಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಈ ಖುಷಿಗೆ ನಮ್ಮ ರಾಷ್ಟ್ರ ಪಕ್ಷಿ ನವಿಲು ಗರಿ ಬಿಚ್ಚಿ ಮಾನಸಾರೆ ನರ್ತಿಸಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದೆ. ಗ್ರಾಮದ ನಿವಾಸಿ ಲೋಕೇಶ್ ಗೌಡ ಅವರ ಮನೆಯ ಮುಂದೆ ಜಾನುವಾರುಗಳ ಬಳಿ, ಗಂಡು ನವಿಲು ತನ್ನ ಸೊಬಗನ್ನ ತೋರಿದೆ.
Advertisement
ಇನ್ನೂ ನವಿಲು ತನ್ನ ಸಂತಾನೋತ್ಪತ್ತಿ ಮಾಡಿಕೊಳ್ಳುವ ವೇಳೆ ಈ ರೀತಿಯಲ್ಲಿ ನರ್ತಿಸುವ ಕಾಲ ಇದಾಗಿದೆ. ಸರ್ವೆ ಸಾಮಾನ್ಯವಾಗಿ ಇಂತಹ ಅಪರೂಪದ ದೃಶ್ಯವನ್ನ ಅರಣ್ಯ ಪ್ರದೇಶದಲ್ಲಿ ಹಾಗೂ ಪ್ರಾಣಿ ಪಕ್ಷಿಗಳ ಸಂಗ್ರಹಾಲಯದಲ್ಲಿ ನೋಡಬಹುದು. ಆದರೆ ಕಾಡಿನಿಂದ ಗ್ರಾಮಕ್ಕೆ ಬಂದ ನವಿಲು ನೃತ್ಯ ಮಾಡಿದೆ. ಈ ಅಪರೂಪದ ದೃಶ್ಯ ಕಂಡ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.