ದುಬೈ: ತನ್ನ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಏಷ್ಯಾ ಕಪ್ (Asia Cup) ಕ್ರಿಕೆಟ್ ಟೂರ್ನಿಯನ್ನೇ ಬಹಿಷ್ಕರಿಸುವುದಾಗಿ ಪಾಕಿಸ್ತಾನ (Pakistan) ಬೆದರಿಕೆ ಹಾಕಿದೆ.
ಭಾರತದ (Team India) ವಿರುದ್ಧದ ಪಂದ್ಯದಲ್ಲಿ ಐಸಿಸಿ(ICC) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ. ಒಂದು ವೇಳೆ ಈ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಟೂರ್ನಿಯನ್ನೇ ಬಹಿಷ್ಕರಿಸುವುದಾಗಿ ಒತ್ತಡ ಹಾಕಿದೆ.
ಟೀಂ ಇಂಡಿಯಾ ನಾಯಕ ಸೂರ್ಯ ಕುಮಾರ್ ಯಾದವ್ (Surya Kumar Yadav) ಟಾಸ್‌ನಲ್ಲಿ ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಅವರ ಕೈಕುಲುಕಲಿಲ್ಲ. ಅಷ್ಟೇ ಅಲ್ಲದೇ ಪಂದ್ಯದ ಕೊನೆಯಲ್ಲೂ ಭಾರತದ ಆಟಗಾರರು ಪಾಕಿಸ್ತಾನದ ತಂಡದ ಆಟಗಾರರ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಇದನ್ನೂ ಓದಿ: ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು – ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ
ಟಾಸ್ ಸಮಯದಲ್ಲಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ನಾಯಕ ಸಲ್ಮಾನ್ ಅಲಿ ಆಘಾ ಅವರ ಬಳಿ ಭಾರತ ತಂಡದ ನಾಯಕನ ಜೊತೆ ಕೈ ಕುಲುಕದಂತೆ ಕೇಳಿಕೊಂಡಿದ್ದರು. ಈ ನಡವಳಿಕೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಪಿಸಿಬಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ ಪಂದ್ಯ ಮುಕ್ತಾಯವಾದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಅಭಿನಂದಿಸಬೇಕು. ಆದರೆ ಈ ನಿಯಮ ಇಲ್ಲಿ ಪಾಲನೆಯಾಗದೇ ಇರುವುದು ಪಾಕ್ ಸಿಟ್ಟಿಗೆ ಕಾರಣವಾಗಿದೆ.
ಸೂರ್ಯಕುಮಾರ್ ಯಾದವ್ ಸಿಕ್ಸ್ ಸಿಡಿಸಿದ ಭಾರತ ತಂಡಕ್ಕೆ ಜಯವನ್ನು ತಂದುಕೊಟ್ಟರು. ಜಯ ಸಿಕ್ಕಿದ ನಂತರ ಸೂರ್ಯ ಮತ್ತು ಶಿವಂ ದುಬೆ ಪಾಕ್ ಆಟಗಾರರ ಕೈ ಕುಲುಕದೇ ನೇರವಾಗಿ ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿದರು. ಇಬ್ಬರು ಕೊಠಡಿ ಪ್ರವೇಶಿಸಿದ ನಂತರ ಬಾಗಿಲು ಹಾಕಲಾಯಿತು. ಭಾರತದ ಆಟಗಾರರು ಕ್ರೀಡಾಂಗಣಕ್ಕೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಪಾಕ್ ಆಟಗಾರರು ಮೈದಾನದಲ್ಲೇ ಇದ್ದರು. ಆದರೆ ಭಾರತದ ಆಟಗಾರರು ಮೈದಾನಕ್ಕೆ ಇಳಿಯದ ಕಾರಣ ಪಾಕ್ ಆಟಗಾರರು ಕೊನೆಗೆ ತಮ್ಮ ಡ್ರೆಸ್ಸಿಂಗ್ ಕೊಠಡಿಗೆ ತೆರಳಿದರು.