T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

Public TV
2 Min Read
Pak 2

– ಈ ಬಾರಿ ಪಾಕ್‌ ವಿಶ್ವಕಪ್‌ ಗೆಲ್ಲಲಿದೆ, ಇದು ದೇವರ ಇಚ್ಛೆ ಎಂದ ಪಿಸಿಬಿ ಮುಖ್ಯಸ್ಥ

ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. 1 ಕಿಲೋ ಗೋಧಿ ಹಿಟ್ಟಿಗೆ 800 ಪಾಕಿಸ್ತಾನಿ ರೂ.ಗಳು, 1 ರೊಟ್ಟಿಯ ಬೆಲೆ 25 ಪಾಕಿಸ್ತಾನಿ ರೂ. ತಲುಪಿದೆ. ಪೆಟ್ರೋಲ್‌ ದರವಂತು ಹೇಳತೀರದಾಗಿದೆ. ಹೀಗಿದ್ದರೂ ಕ್ರಿಕೆಟ್‌ ಆಟಗಾರರಿಗೆ (Pak Cricketers) ಬಂಪರ್‌ ಬಹುಮಾನ ಘೋಷಿಸಿದೆ.

ಹೌದು. ಜೂನ್‌ ತಿಂಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಗೆದ್ದರೆ ತಂಡದ ಪ್ರತಿ ಆಟಗಾರನಿಗೂ 1 ಲಕ್ಷ US ಡಾಲರ್‌ (ಭಾರತದ ರೂಪಾಯಿ 83.44 ಲಕ್ಷ ರೂ.) ಬಹುಮಾನ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಘೋಷಣೆ ಮಾಡಿದೆ.

ಪಾಕ್‌ ತಂಡವು ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಹೊರಡುವ ಮುನ್ನ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಆಟಗಾರರೊಂದಿಗೆ 2 ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಬಹುಮಾನದ ಮೊತ್ತವನ್ನು ಘೋಷಣೆ ಮಾಡಿದರಲ್ಲದೇ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯುವ ಘನತೆಗೆ ಹೋಲಿಸಿದ್ರೆ, ಈ ಹಣ ಏನೇನು ಅಲ್ಲ. ಆದ್ದರಿಂದ ಟಿ20 ವಿಶ್ವಕಪ್‌ ಗೆದ್ದರೆ ತಂಡದ ಪ್ರತಿಯೊಬ್ಬ ಆಟಗಾರನಿಗೂ 100,000 ಯುಎಸ್‌ ಡಾಲರ್‌ ಬಹುಮಾನ ನೀಡುವುದಾಗಿ ಘೋಷಿಸಿದ್ದೇವೆ ಎಂದು ತಿಳಿಸಿದರು.

pakistan team Shaheen Shah Afridi

ಇದೇ ವೇಳೆ ಆಟಗಾರರಿಗೆ ಖಡಕ್‌ ಸೂಚನೆ ನೀಡಿದ ಪಿಸಿಬಿ ಮುಖ್ಯಸ್ಥ, ಸದ್ಯಕ್ಕೆ ನೀವು ಯಾರ ಬಗ್ಗೆಯೂ ಕಾಳಜಿ ವಹಿಸಬೇಡಿ, ತಂಡಕ್ಕಾಗಿ, ದೇಶಕ್ಕಾಗಿ ಆಡುವ ಬಗ್ಗೆ ಮಾತ್ರ ಗಮನಹರಿಸಿ. ತಂಡದಲ್ಲಿ ಎಲ್ಲಾ ಆಟಗಾರರು ಒಗ್ಗಟ್ಟಾಗಿದ್ದಾರೆ, ವೇಗಿ ಶಾಹೀನ್ ಶಾ ಆಫ್ರಿದಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆಯೂ ನಮಗಿದೆ. ಈ ಸಲ ಟ್ರೋಫಿ ಗೆಲ್ಲಬೇಕು ಎಂಬುದು ದೇವರ ಇಚ್ಚೆ. ಖಚಿತವಾಗಿ ನಮ್ಮ ತಂಡ ಗೆಲುವು ಸಾಧಿಸುತ್ತದೆ. ಈ ದೇಶವು ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಿದೆ. ಅವುಗಳನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು ಎಂದು ಸಲಹೆ ನೀಡಿದರು.

ಇದೇ ವೇಳೆ ವಿಕೆಟ್‌ ಕೀಪರ್‌-ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ ಟಿ20 ಕ್ರಿಕೆಟ್‌ನಲ್ಲಿ 3,000 ರನ್‌ ಪೂರೈಸಿದ್ದರ ನೆನಪಿಗಾಗಿ ಕೆಲ ಆಟಗಾರರಿಗೆ ಪಾಕ್‌ ತಂಡದ ಜೆರ್ಸಿಯನ್ನು ವಿತರಿಸಲಾಯಿತು.

Share This Article