ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಜಯ – ನಂ.1 ಪಟ್ಟಕ್ಕೇರಿದ ಪಂಜಾಬ್‌ ಕಿಂಗ್ಸ್‌

Public TV
3 Min Read
Punjab 1

ಜೈಪುರ: ಜೋಶ್ ಇಂಗ್ಲಿಸ್ (Josh Inglis), ಪ್ರಿಯಾಂಶ್‌ ಆರ್ಯ (Priyansh Arya) ಶತಕದ ಜೊತೆಯಾಟ ನೆರವಿನಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಂ.1 ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. 11 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಪಂಜಾಬ್‌ ಕಿಂಗ್ಸ್‌ (Punjab Kings) ಇದೇ ಮೊದಲಬಾರಿಗೆ ನಂ.1 ಸ್ಥಾನದೊಂದಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

Mumbai Indians 1

ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ (Mumbai Indians) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 184 ರನ್‌ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಪಂಜಾಬ್‌ 18.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 187 ರನ್‌ ಚಚ್ಚಿ ಗೆಲುವು ಸಾಧಿಸಿತು. ಈ ಪಂದ್ಯದ ಮುಕ್ತಾಯದೊಂದಿಗೆ ಉಭಯ ತಂಡಗಳೂ 18ನೇ ಆವೃತ್ತಿಯ ಲೀಗ್‌ ಸುತ್ತಿನ  ಪಂದ್ಯಗಳನ್ನು ಮುಕ್ತಾಯಗೊಳಿಸಿದವು.

MI vs PBKS

ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ ಪಂಜಾಬ್‌ 4.2 ಓವರ್‌ಗಳಲ್ಲಿ 34 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 2ನೇ ವಿಕೆಟ್‌ಗೆ ಜೋಶ್‌ ಇಂಗ್ಲಿಸ್‌ ಹಾಗೂ ಪ್ರಿಯಾಂಶ್‌ ಆರ್ಯ ಶತಕದ ಜೊತೆಯಾಟ ನೆರವಿನಿಂದ ಸುಲಭ ಗೆಲುವಿನತ್ತ ಮುನ್ನಡೆಯಿತು. 2ನೇ ವಿಕೆಟಿಗೆ ಈ ಜೋಡಿ 59 ಎಸೆತಗಳಲ್ಲಿ 109 ರನ್‌ ಗಳಿಸಿತು. ಈ ವೇಳೆ ಸ್ಪೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಪ್ರಿಯಾಂಶ್‌ ಆರ್ಯ 35 ಎಸೆತಗಳಲ್ಲಿ 2 ಸಿಕ್ಸರ್‌, 9 ಬೌಂಡರಿ ಸಹಿತ 62 ರನ್‌ ಸಿಡಿಸಿ ಔಟಾಗುತ್ತಿದ್ದಂತೆ ಜೋಶ್‌ ಇಂಗ್ಲಿಷ್‌ ಆರ್ಭಟ ಮುಂದುವರಿಸಿದರು. ಇದಕ್ಕೆ ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಸಾಥ್‌ ನೀಡಿದ್ರು.

MI vs PBKS 2

ಇಂಗ್ಲಿಷ್‌ 48 ಎಸೆತಗಳಲ್ಲಿ 73 ರನ್‌ (42 ಎಸೆತ, 3 ಸಿಕ್ಸರ್‌, 9 ಬೌಂಡರಿ) ಚಚ್ಚಿದ್ರೆ, ಶ್ರೇಯಸ್‌ ಅಯ್ಯರ್‌ 16 ಎಸೆತಗಳಲ್ಲಿ ಅಜೇಯ 26 ರನ್‌, ನೇಹಾಲ್‌ ವಧೇರ ಅಜೇಯ 2 ರನ್‌ ಗಳಿಸಿ ಗೆಲುವಿನ ದಡ ಸೇರಿಸಿದ್ರು.

Mumbai Indians 1

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆಯಲು ವಿಫಲವಾಯಿತು. ಮೊದಲ ವಿಕೆಟ್​ಗೆ ರೋಹಿತ್​-ರ‍್ಯಾನ್‌ ರಿಕಲ್ಟನ್ ಜೋಡಿ 45 ರನ್​ಗಳ ಜೊತೆಯಾಟ ನೀಡಿತು. ರಿಕಲ್ಟನ್‌ 20 ಎಸೆತಗಳಲ್ಲಿ​ 5 ಬೌಂಡರಿಗಳ ಸಹಿತ 27 ರನ್​ಗಳಿಸಿ ಔಟಾದರು. ರೋಹಿತ್ ಶರ್ಮಾ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಮತ್ತೆ ವಿಫಲರಾದರು. ರೋಹಿತ್‌ ಶರ್ಮಾ 21 ಎಸೆತಗಳಲ್ಲಿ 24 ರನ್​ಗಳಿಸಿ ಔಟಾದರು. ನಂತರ ಬಂದ ತಿಲಕ್ ವರ್ಮಾ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಸ್ಪೋಟಕ ಪ್ರದರ್ಶನ ನೀಡುತ್ತಿದ್ದ ವಿಲ್ ಜಾಕ್ಸ್ ಕೂಡ 8 ಎಸೆತಗಳಲ್ಲಿ 17 ರನ್​ಗಳಿಸಿ ಔಟ್ ಆದರು.

Punjab Kings 2

ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ್ದ ಮುಂಬೈಗೆ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಚೇತರಿಕೆ ನೀಡಿದರು. ಇವರಿಬ್ಬರು 5ನೇ ವಿಕೆಟ್ ಜೊತೆಯಾಟದಲ್ಲಿ 23 ಎಸೆತಗಳಲ್ಲಿ 44 ರನ್​ಗಳಿಸಿದರು. ಪಾಂಡ್ಯ 15 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸೇರಿ 26 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಹಾಗೂ ನಮನ್ ಧೀರ್ ಜೋಡಿ 6ನೇ ವಿಕೆಟ್ ಜೊತೆಯಾಟದಲ್ಲಿ 17 ಎಸೆತಗಳಲ್ಲಿ 31 ರನ್​ ಸೇರಿಸಿದರು. ನಮನ್ 12 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 20 ರನ್​ಗಳಿಸಿದರು. ಕೊನೆಯವರೆಗೂ ಹೋರಾಡಿದ ಸೂರ್ಯಕುಮಾರ್ ಯಾದವ್ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ಸಹಿತ 57 ರನ್​ಗಳಿಸಿ ಕೊನೆಯ ಎಸೆತದಲ್ಲಿ ಅರ್ಷ್‌ದೀಪ್‌ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.

Rohit Sharma

ಪಂಜಾಬ್ ಕಿಂಗ್ಸ್ ಪರ ಅರ್ಷ್‌ದೀಪ್‌ ಸಿಂಗ್, ಮಾರ್ಕೊ ಜಾನ್ಸನ್, ವೈಶಾಕ್ ವಿಜಯಕುಮಾರ್ ತಲಾ 2 ವಿಕೆಟ್‌ ಕಿತ್ತರೆ, ಹರ್ಪ್ರೀತ್‌ ಬ್ರಾರ್ 1 ವಿಕೆಟ್‌ ಪಡೆದರು.

Share This Article