ನವದೆಹಲಿ: ಭಾರತೀಯ ಮತ್ತು ವಿದೇಶಿ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾದ ಆಗ್ರಾದ ಐತಿಹಾಸಿಕ ಸುಂದರ ತಾಜ್ ಮಹಲ್ ವೀಕ್ಷಣೆಗೆ ಇನ್ನೂ ಮುಂದೆ 3 ಗಂಟೆ ಮಾತ್ರ ಸಮಯಾವಕಾಶ ನಿಗದಿ ಪಡಿಸಲಾಗಿದೆ.
ಹೌದು. ಸುಂದರ ತಾಜ್ ಮಹಲ್ ನೋಡಲು ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಶ್ವೇತವರ್ಣದ ಮನಮೋಹಕ ಶಿಲ್ಪಕಲೆಗೆ ಮನಸೋಲದ ಮಂದಿಯೇ ಇಲ್ಲ. ಆದರೆ ತಾಜ್ ಮಹಲ್‍ನಲ್ಲಿ ಇನ್ನು ಮುಂದೆ ಪ್ರವಾಸಿಗರು 3 ಗಂಟೆಗಳಿಗಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿದೆ. ಆಡಳಿತ ಮಂಡಳಿ ನಿಗದಿಪಡಿಸಿರುವ ಸಮಯವನ್ನೂ ಮೀರಿ ಪ್ರವಾಸಿಗರು ಇಲ್ಲಿ ಹೆಚ್ಚು ಸಮಯ ಕಳೆದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
Advertisement
Advertisement
ತಾಜ್ ಮಹಲ್‍ಗೆ ಪ್ರವಾಸಿಗರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ ಸಮಯ ಕಳೆದವರು, ನಿರ್ಗಮನದ ವೇಳೆ ಹೆಚ್ಚುವರಿ ಹಣ ಪಾವತಿಸಬೇಕು. ಕೆಲ ಪ್ರವಾಸಿಗರು ಮುಂಜಾನೆಯಿಂದ ಸಂಜೆಯವರೆಗೂ ತಾಜ್ ಆವರಣದಲ್ಲೇ ಕಾಲ ಕಳೆಯುತ್ತಿದ್ದರು. ಇದಕ್ಕೆ ಬ್ರೇಕ್ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ.
Advertisement
Advertisement
ಪೂರ್ವ ಮತ್ತು ಪಶ್ಚಿಮದಲ್ಲಿ ಒಟ್ಟು 7 ಪ್ರವೇಶ ದ್ವಾರಗಳು ಹಾಗೂ 5 ನಿರ್ಗಮನ ದ್ವಾರಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದೇಶಿ ಪ್ರವಾಸಿಗರಿಗಾಗಿ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಹಾಗೆಯೇ ಪ್ರವಾಸಿಗರಿಗೆ ಪ್ರವೇಶದ ವೇಳೆ ಕೇವಲ ಮೂರು ಗಂಟೆಯವರೆಗೆ ಮಾತ್ರ ಸೀಮಿತವಿರುವ ಟೋಕನ್ ನೀಡಲಾಗುತ್ತದೆ. ಒಂದು ವೇಳೆ ಪ್ರವಾಸಿಗರು ಇಲ್ಲಿ ಹೆಚ್ಚು ಸಮಯ ಕಳೆಯಬೇಕಾದರೆ ನಿರ್ಗಮನ ಕೌಂಟರ್ ನಲ್ಲಿ ಹಣ ನೀಡಿ ಟೋಕನ್ ರಿಚಾರ್ಜ್ ಮಾಡಿಸಿಕೊಳ್ಳಬೇಕು ಎಂದು ಭಾರತದ ಪುರಾತತ್ವ ಇಲಾಖೆಯ ಅಧೀಕ್ಷಕ ಬಸಂತ್ ಕುಮಾರ್ ತಿಳಿಸಿದ್ದಾರೆ.
ಈ ನಿಯಮದಿಂದ ಪ್ರವಾಸಿಗರಿಗೆ ಬೇಸರವಾಗಿದೆ. ತಾಜ್ ಮಹಲ್‍ನಲ್ಲಿ ಸುಂದರ ಕ್ಷಣಗಳನ್ನು ಕಳೆಯಲು ಪ್ರವಾಸಿಗರು ಬಂದಿರುತ್ತಾರೆ. ಆದರೆ ಅವರ ಖುಷಿಗೆ ಇಲ್ಲಿನ ಆಡಳಿತ ಮಂಡಳಿ ಅಡ್ಡಿಯಾಗುತ್ತಿದೆ. ಈ ನಿಯಮದಿಂದ ಇನ್ನು ಮುಂದೆ ತಾಜ್ ಮಹಲ್‍ಗೆ ಬರುವ ಮುನ್ನ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರವಾಸಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಈ ಬಗ್ಗೆ ವಿದೇಶಿ ಪ್ರವಾಸಿಗರೊಬ್ಬರು ಪ್ರತಿಕ್ರಿಯಿಸಿ, ತಾಜ್ ಮಹಲ್ ವೀಕ್ಷಣೆಗೆ ಬರುವ ವಿದೇಶಿಗರಿಗೆ ಇತರೇ ಪ್ರವಾಸಿಗರಿಗಿಂತ 10 ಪಟ್ಟು ಹೆಚ್ಚು ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ. ಇಲ್ಲಿ ಹೆಚ್ಚು ಸಮಯ ಕಳೆಯುವುದಕ್ಕೆ ಖುಷಿಯಾಗುತ್ತೆ, ಆದರೆ ಈಗ ವೀಕ್ಷಣೆ ಸಮಯವನ್ನು ಸೀಮಿತಗೊಳಿಸಿದ್ದಾರೆ ಎಂದಿದ್ದಾರೆ.