ಬೆಂಗಳೂರು: ಹೊಸದಾಗಿ ಬಳ್ಳಾರಿಗೆ (Ballari) ನಿಯೋಜನೆಗೊಂಡಿದ್ದ ಎಸ್‌ಪಿ ಪವನ್ ನಿಜ್ಜೂರು ಪಾರ್ಟಿ ಮೂಡ್‌ನಲ್ಲಿದ್ದ ಕಾರಣ ಅವರನ್ನು ಸರ್ಕಾರ ಅಮಾನತು (Suspend) ಮಾಡಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ನಿವಾಸದ ಮುಂದೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್ ನಿಜ್ಜೂರು ಅವರನ್ನು ಸರ್ಕಾರ ಶುಕ್ರವಾರ ರಾತ್ರಿ ಅಮಾನತು ಮಾಡಿ ಆದೇಶ ಪ್ರಕಟಿಸಿತ್ತು.
ಸರ್ಕಾರದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ರಾಜಕಾರಣಿಗಳು ಮಾಡುವ ತಪ್ಪಿಗೆ ಪೊಲೀಸರಿಗೆ ಶಿಕ್ಷೆ ಎಂಬ ಟೀಕೆಗಳು ಬರತೊಡಗಿದವು. ಆದರೆ ಈಗ ಅಮಾನತಿಗೆ ನಿಜವಾದ ಕಾರಣ ಲಭ್ಯವಾಗಿದೆ. ಇದನ್ನೂ ಓದಿ: ಗಣಿ ನಾಡು ಬಳ್ಳಾರಿಯಲ್ಲಿ `ರಕ್ತಸಿಕ್ತ’ ರಾಜಕೀಯ – ಜನಾರ್ದನ ರೆಡ್ಡಿ ಮನೆಯಲ್ಲಿ ಮತ್ತೊಂದು ಬುಲೆಟ್ ಪತ್ತೆ!

ಯಾಕೆ ಅಮಾನತು?
ಜ.1 ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ (Pavan Nejjuru) ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಶೋಭಾರಾಣಿ ಅವರು ತಮ್ಮ ಸಿಬ್ಬಂದಿಗೆ ಪಾರ್ಟಿ ನೀಡಿದ್ದರು. ಈ ಪಾರ್ಟಿಯಲ್ಲಿ ಪವನ್ ನಿಜ್ಜೂರು ಮದ್ಯ ಸೇವಿಸಿದ್ದರು. ಇದನ್ನೂ ಓದಿ: ಬಳ್ಳಾರಿ ಗಲಾಟೆ ವೇಳೆ ಫೈರಿಂಗ್ ಕೇಸ್ – ಸತೀಶ್ ರೆಡ್ಡಿ ಖಾಸಗಿ ಗನ್‌ಮ್ಯಾನ್‌ಗಳು ನಾಪತ್ತೆ
ಕೊನೆಗೆ ರಾತ್ರಿ ಪವನ್ ನೆಜ್ಜೂರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪವನ್ ಅವರು ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಉಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಅತಿಯಾದ ಕುಡಿತದಿಂದ ನಿಯಂತ್ರಣ ಕಳೆದುಕೊಂಡಿದ್ದರಿಂದ ಮಾಧ್ಯಮಗಳ ಮುಂದೆ ಪವನ್ ಬಾರದಂತೆ ಹಿರಿಯ ಅಧಿಕಾರಿಗಳು ನೋಡಿಕೊಂಡಿದ್ದರು.
ಬಳ್ಳಾರಿ ರೇಂಜ್ ಡಿಐಜಿ ಆಗಿರುವ ವರ್ತಿಕಾ ಕಟಿಯಾರ್ ಈ ಎಲ್ಲಾ ವಿಚಾರಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವಿಚಾರ ಸರ್ಕಾರದ ಗಮನಕ್ಕೆ ಬಂದ ಬೆನ್ನಲ್ಲೇ ಅವರನ್ನು ಅಮಾನತು ಮಾಡುವ ನಿರ್ಧಾರ ಕೈಗೊಂಡಿದೆ.

