ಸಾಲು ಮರದ ತಿಮ್ಮಕ್ಕ (Saalumarada Thimmakka) ಇಂದು (ನ.14) ನಿಧನ ಹೊಂದಿದ್ದಾರೆ. ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಲುಮರದ ತಿಮ್ಮಕ್ಕ ಇಹಲೋಕ ತ್ಯಜಿಸಿದ್ದಾರೆ. ವೃಕ್ಷಮಾತೆ ತಿಮ್ಮಕ್ಕ ಅವರ ಅಗಲಿಕೆಗೆ ಚಲನಚಿತ್ರ ರಂಗದ ಗಣ್ಯರು ಹಾಗೂ ರಾಜಕೀಯ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಆಂಧ್ರ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ (Pawan Kalyan) ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೃಕ್ಷಮಾತೆಗೆ (Vrukshamathe) ಸಂತಾಪ ಸೂಚಿಸಿದ್ದಾರೆ.
In Andhra Pradesh, we saw those who swore to protect environment ruthlessly cut down trees, destroyed forests and enabled the smuggling of our vital ecological resources for selfish gain. And then, on the other end of the spectrum, we have a humble person whose life was a total… pic.twitter.com/9NoR3DsNFA
— Pawan Kalyan (@PawanKalyan) November 14, 2025
ಮಕ್ಕಳಿಲ್ಲದ ನೋವನ್ನು ಮರೆತು ತಮ್ಮ ಜೀವಿತಾವಧಿಯಲ್ಲಿ 8000ಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ ಸಾಲು ಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ರಾಷ್ಟ್ರೀಯ ನಾಗರಿಕ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಯನ್ನು ಕೂಡ ನೀಡಲಾಗಿತ್ತು. ಇಷ್ಟೇ ಅಲ್ಲ ಬಿಬಿಸಿ ರೇಡಿಯೋ ನಡೆಸಿದ ದೇಶದ ಅತಿ ಮುಖ್ಯವಾದ 100 ಸಾಧಕ ಮಹಿಳೆಯರ ಲಿಸ್ಟ್‌ನಲ್ಲಿ ಸಾಲು ಮರದ ತಿಮ್ಮಕ್ಕ ಕೂಡ ಒಬ್ಬರಾಗಿದ್ದರು. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಸಾಲು ಮರದ ತಿಮ್ಮಕ್ಕ ಅಗಲಿದ ಹಿನ್ನೆಲೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾದ ಬರಹವನ್ನು ಬರೆದುಕೊಂಡಿರುವ ಪವನ್ ಕಲ್ಯಾಣ್, “ಆಂಧ್ರಪ್ರದೇಶದಲ್ಲಿ ಪರಿಸರವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದವರನ್ನು ನಾವು ನೋಡಿದ್ದೇವೆ. ಮರಗಳನ್ನು ನಿರ್ದಯವಾಗಿ ಕಡಿದು, ಕಾಡುಗಳನ್ನು ನಾಶಮಾಡಿ, ಸ್ವಾರ್ಥ ಲಾಭಕ್ಕಾಗಿ ನಮ್ಮ ಪ್ರಮುಖ ಪರಿಸರ ಸಂಪನ್ಮೂಲಗಳ ಕಳ್ಳಸಾಗಣೆಯನ್ನು ಮಾಡಲು ಅನುವು ಮಾಡಿ ಕೊಟ್ಟಿದ್ದನ್ನೂ ಕೂಡ ನಾವು ನೋಡಿದ್ದೇವೆ. ಆದರೆ ಇನ್ನೊಂದು ಕಡೆ, ಪ್ರಕೃತಿಗೆ ಸಂಪೂರ್ಣ ಸಮರ್ಪಣೆಯಾಗಿದ್ದ ವಿನಮ್ರ ವ್ಯಕ್ತಿ – ಸಾಲುಮರದ ತಿಮ್ಮಕ್ಕ, “ಮರಗಳ ತಾಯಿ”ಎಂದು ಸರಳವಾಗಿ ಕರೆಯಲ್ಪಡುವ ಮಹಿಳೆ” ಎಂದು ಹೇಳಿದ್ದಾರೆ.
ಮುಂದುವರೆದು “ಕರ್ನಾಟಕದ ಒಂದು ಸಣ್ಣ ಹಳ್ಳಿಯಿಂದ ಬಂದ ತಿಮ್ಮಕ್ಕ ಮತ್ತು ಅವರ ಪತಿ ಮಕ್ಕಳನ್ನು ಹೊಂದಲು ಸಾಧ್ಯವಾಗದಿದ್ದಾಗ ಗಿಡಗಳನ್ನು ಮಕ್ಕಳಂತೆ ಬೆಳೆಸಲು ಮುಂದಾದರು. ಪರಿಶುದ್ದ ಪ್ರೀತಿ ಮತ್ತು ದೈನಂದಿನ ಶ್ರಮದಿಂದ, 375 ಆಲದ ಮರಗಳು ಸೇರಿದಂತೆ 8000ಕ್ಕೂ ಅಧಿಕ ಮರಗಳನ್ನು ನೆಟ್ಟು ಪೋಷಿಸಿ ಜಗತ್ತಿಗೆ ಉಡುಗೊರೆಯನ್ನು ನೀಡಿದರು”. ತಿಮ್ಮಕ್ಕ ಅವ್ರು ಅಧಿಕಾರ ಅಥವಾ ಸಂಪತ್ತನ್ನು ಯಾವತ್ತು ಹುಡಕಲಿಲ್ಲ. ಅದನ್ನು ಬಯಸುವ ವ್ಯಕ್ತಿ ಕೂಡ ಅವರಾಗಿರಲಿಲ್ಲ ಭೂಮಿ ತಾಯಿಗೆ ಬೇಷರತ್ತಾದ ಪ್ರೀತಿಯನ್ನು ನೀಡುವುದಷ್ಟೇ ಅವರ ಉದ್ದೇಶವಾಗಿತ್ತು. ಎಂದು ಪವನ್ ಕಲ್ಯಾಣ್ ತಿಮ್ಮಕ್ಕ ಅವರಿಗೆ ಸಂತಾಪ ಸೂಚಿಸಿದ್ದಾರೆ.

