ಮಂಗಳೂರು: ಇತ್ತಿಚಿನ ದಿನಗಳಲ್ಲಿ ಸರ್ಕಾರ ಭರವಸೆಯಿಂದ ಕಾದು ಸುಸ್ತಾದ ಜನ ತಮ್ಮ ಗ್ರಾಮ, ಕ್ಷೇತ್ರದ ಕೆಲಸಗಳನ್ನು ತಾವೇ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲೂ ಇಂತದ್ದೇ ಒಂದು ಘಟನೆ ನಡೆದಿದೆ.
ಹೌದು. ಮಂಗಳೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಮಕ್ಕೆ ಒಳಪಡುವ ಉಳಿಯ, ನೇತ್ರಾವತಿ ನದಿಯ ಮಧ್ಯೆ ನೂರು ಎಕರೆಯಷ್ಟು ಇರುವ ಒಂದು ಸಣ್ಣ ಪ್ರದೇಶವಾಗಿದೆ. ಈ ದ್ವೀಪದಲ್ಲಿ ಸುಮಾರು 50 ಮನೆಗಳಿದ್ದು, 200ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಹತ್ತಾರು ವರ್ಷಗಳಿಂದ ಇಲ್ಲೊಂದು ಸೇತುವೆ ನಿರ್ಮಾಣ ಮಾಡಬೇಕೆಂದು ನಡೆಸಿಕೊಂಡು ಬಂದ ಹೋರಾಟಕ್ಕೆ ಬೆಲೆಯೇ ಸಿಕ್ಕಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾವೇ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ.
ಸೇತುವೆ ನಿರ್ಮಾಣದ ಭರವಸೆ:
ಅಡ್ಯಾರ್ ನಿಂದ ಉಳಿಯಕ್ಕೆ ಸೇತುವೆ ನಿರ್ಮಾಣ ಮಾಡುವ ಮೂಲಕ ಸ್ಥಳೀಯ ನಿವಾಸಿಗಳಿಗೆ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ಅನೇಕ ವರ್ಷಗಳಿಂದ ಕ್ಷೇತ್ರದ ಜನಪ್ರತಿನಿಧಿಗಳು ಭರವಸೆಗಳನ್ನು ನೀಡುತ್ತಲೇ ಬಂದಿದ್ದಾರೆ. ಸ್ಥಳೀಯರು ಕೂಡ ಸರ್ಕಾರ ನೀಡಿದ ಭರವಸೆಯನ್ನು ಈಡೇರಿಸುತ್ತದೆ ಎಂದು ಕಾಯುತ್ತಲೇ ಇದ್ದರು. ಆದ್ರೆ ಇದೂವರೆಗೂ ಸೇತುವೆ ನಿರ್ಮಾಣವಾಗಲೇ ಇಲ್ಲ.
ಬಿದಿರಿನ ಸೇತುವೆ ನಿರ್ಮಿಸಿ ಕೈಬಿಟ್ಟರು:
ಭರವಸೆ ಈಡೇರದ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿ ಪ್ರತಿವರ್ಷ ಸುಮಾರು 70 ಸಾವಿರ ಖರ್ಚು ಮಾಡಿ ಬೇಸಿಗೆಯಲ್ಲಿ ಬಿದಿರಿನ ಸೇತುವೆ ನಿರ್ಮಾಣ ಮಾಡಿ ಓಡಾಟ ಮಾಡುತ್ತಿದ್ದರು. ಆದ್ರೆ ಮಳೆಗಾಲದಲ್ಲಿ ಇದರ ಉಪಯೋಗ ಇಲ್ಲವಾಗಿದ್ದು, ಸೇತುವೆ ತೆಗೆದು ಬಿಡುತ್ತಿದ್ದರು. ಈ ಎಲ್ಲಾ ಸಮಸ್ಯೆಗಳಿಂದ ಕಂಗಾಲಾದ ಸ್ಥಳೀಯರು ದ್ವೀಪ ಪ್ರದೇಶ ಬಿಟ್ಟು ಬೇರೆಡೆ ಬಂದು ಜೀವನ ನಡೆಸಲು ಆರಂಭಿಸಿದ್ದರು. ಇದರಿಂದ ಸ್ಥಳೀಯರಿಗೆ ಹಣಕಾಸಿನ ಸಮಸ್ಯೆ ಎದುರಾಯಿತು. ಹೀಗಾಗಿ ಕಳೆದ 3-4 ವರ್ಷಗಳಿಂದ ಸೇತುವೆ ನಿರ್ಮಾಣ ಮಾಡುವ ಕಾರ್ಯವನ್ನು ಕೈ ಬಿಟ್ಟರು. ತದನಂತರ ಗೋಣಿ ಚೀಲಗಳಲ್ಲಿ ಮರಳು ತುಂಬಿ ನದಿಗೆ ಹಾಕುವ ಮೂಲಕ ನಡೆದಾಡಲು ಅನುಕೂಲವಾಗುವಂತೆ ನಿರ್ಮಿಸಿದ್ರು. ಆದ್ರೆ ಇದರಿಂದ ಸ್ಥಳೀಯರಿಗೆ ಅಪಾಯದ ಆತಂಕ ಎದುರಾಯ್ತು. ಹೀಗಾಗಿ ಏನೂ ತೋಚದೆ ಕೈ ಕಟ್ಟಿ ಕುಳಿತರು.
ಸ್ವರ್ಗದ ಕನಸು ತೋರಿದ ಸಿ.ಓ:
ಈ ದ್ವೀಪದ ಬಗ್ಗೆ ಹಲವಾರು ಬಾರಿ ಮಾಧ್ಯಮಗಳಲ್ಲಿ ಪ್ರಸಾರವಾದರೂ ಜನಪ್ರತಿನಿಧಿಗಳು ಮಾತ್ರ ಕ್ಯಾರೇ ಎಂದಿಲ್ಲ. 2 ವರ್ಷದ ಹಿಂದೆ ಅಡ್ಯಾರ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಇದೇ ದ್ವೀಪ ಭಾಗದಲ್ಲಿ ಸರ್ವೇ ನಡೆಸಿದಾಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ರವಿ ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಇದೇ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ಸಭೆ ನಡೆಸಿ ದ್ವೀಪವನ್ನು ಸ್ವರ್ಗವನ್ನಾಗಿ ಮಾಡುವುದಾಗಿ ಹೇಳಿದ್ರು. ಈ ವೇಳೆ ಸ್ಥಳೀಯರು, ನಮಗೆ ಸ್ವರ್ಗಕ್ಕಿಂತ ಮೊದಲು ಸೇತುವೆ ಕಟ್ಟಿಸಿ ಕೊಡಿ ಎಂದು ಹೇಳಿದ್ರು. ಆಗ ರವಿ ಅವರು ಅದರ ವಿಚಾರ ಮಾತನಾಡಬೇಡಿ, ಸೇತುವೆ ನಿರ್ಮಿಸಿ ಕೊಡುವುದಾಗಿ ಭರವಸೆಯನ್ನೂ ನೀಡಿದ್ರು. ಅದಾದ ಬಳಿಕ ಕೆಲ ದಿನ ವಾರಕ್ಕೊಂದು ಬಾರಿ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ದ್ವೀಪಕ್ಕೆ ಭೇಟಿ ನೀಡುತ್ತಿದ್ದರು. ಇದು ಕೇವಲ ಬೆರಳೆಣಿಕೆಯಷ್ಟೇ ದಿನ ನಡೆದು ಹೋಯಿತು.
ಸೇತುವೆ ನಿರ್ಮಿಸಲು ಮುಂದಾದ ಧರ್ಮಗುರು!
ಜನಪ್ರತಿನಿಧಿಗಳ ಭರವಸೆಯ ಕನಸಿನಲ್ಲಿದ್ದ ಸ್ಥಳೀಯರಿಗೆ ಬೆನ್ನೆಲುಬಾಗಿ ಧರ್ಮಗುರು ಫಾ. ಜೆರಾಲ್ಡ್ ನಿಂತರು. ಜನರನ್ನು ಹುರಿದುಂಬಿಸಿ ತಾವೇ ಹಣ ಸಂಗ್ರಹಿಸಿ ಸೇತುವೆ ನಿರ್ಮಾಣ ಮಾಡುವ ಛಲವನ್ನು ಮುಂದಿಟ್ಟರು. ಬೇಸಿಗೆಯಲ್ಲಾದ್ರೂ ಮಹಿಳೆಯರು ಹಾಗೂ ಮಕ್ಕಳು ಯಾವುದೇ ಭಯವಿಲ್ಲದೇ ಓಡಾಡಲು ಕಬ್ಬಿಣದ ಸೇತುವೆ ನಿರ್ಮಾಣ ಮಾಡುವ ವಿಚಾರವನ್ನು ಸ್ಥಳೀಯರ ಮುಂದಿಟ್ಟರು. ಇದಕ್ಕೆ ಸ್ಥಳೀಯರು ಕೂಡ ಸಮ್ಮತಿ ಸೂಚಿಸಿದ್ದು, ತಮ್ಮ ಕೈಲಾದಷ್ಟು ತನು-ಮನ ಹಾಗೂ ಇತರ ರೂಪದಲ್ಲಿ ಸಹಾಯ ಮಾಡಿದ್ರು. ಐಸಿವೈಎಂ ಸದಸ್ಯರ ಜೊತೆಗೂಡಿ ಕೆಲಸ ಮಾಡಿದ ಪರಿಣಾಮ ಇಂದು 800 ಮೀಟರ್ ಉದ್ದದ ಕಬ್ಬಿಣದ ಸೇತುವೆ ಸಂಚಾರಕ್ಕೆ ಯೋಗ್ಯವಾಗಿದೆ.
ಕಬ್ಬಿಣದ ಪೈಪ್ ಮತ್ತು ಹಲಗೆ ಬಳಸಿ ಗ್ರಾಮಸ್ಥರೇ ನಿರ್ಮಿಸಿರುವ ಈ ಸೇತುವೆಯ ಸಂಚಾರ ಹಗ್ಗದ ಮೇಲಿನ ನಡಿಗೆಯಂತಿದ್ದು, ವಿಸ್ತಾರವಾಗಿರುವ ನದಿಯನ್ನು ದಾಟುವುದೇ ಸಾಹಸವಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಇದೇ ಹಲಗೆಯಲ್ಲಿ ಸಂಚರಿಸುತ್ತಿದ್ದು, ದುರಂತಕ್ಕೆ ಆಹ್ವಾನ ನೀಡುವಂತಿದೆ. ಕ್ಷೇತ್ರದ ಶಾಸಕ ಯು.ಟಿ ಖಾದರ್ ಸತತ ಮೂರು ಬಾರಿ ಸಚಿವರಾದರೂ, ಸೇತುವೆಯ ಬೇಡಿಕೆ ಇನ್ನೂ ಅವರ ಅವರ ಕಿವಿ ಮುಟ್ಟಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ದೋಣಿಯಲ್ಲಿ ಸಂಚರಿಸುತ್ತಿದ್ದ ಜನರು ಸದ್ಯಕ್ಕೆ ಹಲಗೆಯ ಸೇತುವೆಯಲ್ಲಿ ಸಾಗುತ್ತಿದ್ದಾರೆ. ಆದರೆ, ಯಾವಾಗ ಬೀಳುತ್ತೋ ಅನ್ನುವ ಭಯದಲ್ಲೇ ಜನ ಓಡಾಡುತ್ತಿದ್ದಾರೆ. ಈ ಸೇತುವೆ ಬೇಸಿಗೆಗೆ ಸೀಮಿತವಾಗಿದ್ದು, ಜೂನ್ ವೇಳೆಗೆ ನದಿ ತುಂಬಿದಾಗ ಜನರು ಮತ್ತೆ ದೋಣಿಯನ್ನೇ ಅವಲಂಬಿಸಬೇಕಾಗಿದೆ.
ಕೆಲ ವರ್ಷಗಳಿಂದ ಶಾಲೆ ಬಂದ್:
ಈ ಪ್ರದೇಶದಲ್ಲಿ ಹೆಚ್ಚಾಗಿ ಕ್ರೈಸ್ತರೇ ವಾಸವಾಗಿದ್ದಾರೆ. ಹೀಗಾಗಿ ಕ್ರೈಸ್ತರ ಪ್ರಾರ್ಥನೆಗೆಂದು ಇಲ್ಲಿ ಇಗರ್ಜಿಯೊಂದಿದೆ. ಈ ಹಿಂದೆ ಇಲ್ಲಿ 5ನೇ ತರಗತಿವರೆಗೆ ಸರ್ಕಾರಿ ಶಾಲೆ ಇತ್ತು. ಆದ್ರೆ ಈ ಪ್ರದೇಶ ನೇತ್ರಾವದಿ ನದಿಯ ಮಧ್ಯಭಾಗದಲ್ಲಿರುವುದರಿಂದ ಇದ್ದ ಇಬ್ಬರು ಶಿಕ್ಷಕಿಯರು ಶಾಲೆಗೆ ಬರುವುದು ದೊಡ್ಡ ಸಮಸ್ಯೆಯಾಗಿತ್ತು. ಮಳೆಗಾಲದಲ್ಲಿ ಈ ಶಾಲೆಗೆ ಬರಲು ಮಕ್ಕಳು ಪರದಾಡಬೇಕಾಗಿತ್ತು. ಹೀಗಾಗಿ ಸ್ಥಲೀಯರು ತಮ್ಮ ಮಕ್ಕಳನ್ನು ದ್ವೀಪದಿಂದ ಹೊರಗಿರುವ ಶಾಲೆಗೆ ಸೇರಿಸಿದ್ದಾರೆ. ಆ ಬಳಿಕದಿಂದ ಅಲ್ಲಿನ ಶಾಲೆ ಬಂದ್ ಆಗಿದೆ.
ಅಭಿವೃದ್ಧಿಯಿಂದ ವಂಚಿತವಾಗಲು ಕಾರಣವೇನು?
ಉಳಿಯದಲ್ಲಿ ಹಿಂದಿನಿಂದಲೂ ಕಳ್ಳಭಟ್ಟಿ ಭಾರೀ ಸದ್ದು ಮಾಡುತ್ತಿತ್ತು. ಈ ಮಾಹಿತಿ ಅರಿತು ಅಬಕಾರಿ ಇಲಾಖೆ ದಾಳಿ ಮಾಡಲು ಮುಂದಾಗುವ ಮುನ್ನವೇ ಮಾಹಿತಿ ಸೋರಿಕೆಯಾಗುತ್ತಿತ್ತು. ಒಂದು ವೇಳೆ ಅಧಿಕಾರಿಗಳು ಸಡನ್ ಆಗಿ ಬಂದರೂ ಅವರ ಮೇಲೆ ಹಲ್ಲೆಗಳಾಗುತ್ತಿತ್ತು ಎಂದು ಅಲ್ಲಿಯವರು ಹೇಳುತ್ತಾರೆ. ಈ ಕಾರಣದಿಂದ ಉಳಿಯ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv