ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಜೊತೆ ಮದುವೆಯಾದ (Marriage) ವಿಡಿಯೋವನ್ನು ತೆಲುಗು ನಟ ನರೇಶ್ (Naresh) ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ “ಒಂದು ಪವಿತ್ರ ಬಂಧ.. ಎರಡು ಮನಸುಗಳು.. ಮೂರು ಮುಳ್ಳುಗಳು.. ಏಳು ಪಾದಗಳು” ಎಂದು ಬರೆದುಕೊಂಡಿದ್ದಾರೆ. ಈ ಪದಗಳೇ ಹಲವು ಚರ್ಚೆಗಳನ್ನು ಹುಟ್ಟು ಹಾಕಿವೆ. ಹೊಸ ವರ್ಷದ ದಿನದಂದು ಪವಿತ್ರಾ ಕೆನ್ನೆಗೆ ಮುತ್ತಿಡುವ ಹಾಗೂ ತಮ್ಮ ಮದುವೆ ವಿಚಾರವನ್ನು ಹಂಚಿಕೊಂಡು ವಿಡಿಯೋವೊಂದನ್ನು ನರೇಶ್ ಪೋಸ್ಟ್ ಮಾಡಿದ್ದರು. ಇದೀಗ ಮದುವೆಯಾದ ವಿಡಿಯೋವನ್ನೇ ಹಂಚಿಕೊಂಡಿದ್ದಾರೆ.
ಅಧಿಕೃತವಾಗಿ ರಮ್ಯಾ ಅವರೊಂದಿಗೆ ನರೇಶ್ ಡಿವೋರ್ಸ್ ಪಡೆದಿಲ್ಲ. ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯನ್ನು ಆಗುವಂತಿಲ್ಲ. ಆದರೆ, ಸಿನಿಮಾ ದೃಶ್ಯದಲ್ಲೇ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರಂತೆ ನರೇಶ್. ಇಂದು ಹಂಚಿಕೊಂಡಿರುವ ವಿಡಿಯೋ ಸಿನಿಮಾವೊಂದರ ದೃಶ್ಯವಾಗಿದ್ದರೂ, ಅಧಿಕೃತ ಮದುವೆ ಎನ್ನುವಂತೆಯೇ ಶಾಸ್ತ್ರಗಳನ್ನು ಮಾಡಲಾಗಿದೆಯಂತೆ. ಹಾಗಾಗಿ ಮುಂದೊಂದು ದಿನ ಇದು ನಿಜವಾದ ದೃಶ್ಯವಾದರೂ ಅಚ್ಚರಿ ಪಡಬೇಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಪವಿತ್ರಾ ಲೋಕೇಶ್ ಮೇಲೆ ಒಲವಿರುವ ಕುರಿತು ನರೇಶ್ ಈ ಹಿಂದೆ ಹಲವಾರು ಬಾರಿ ಹೇಳಿದ್ದಾರೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ನರೇಶ್ ಪತ್ನಿ ರಮ್ಯಾ ಆರೋಪ ಕೂಡ ಮಾಡಿದ್ದರು. ಅಲ್ಲದೇ, ಹೊಸ ವರ್ಷದ ದಿನದಂದು ತಾವು ಮದುವೆ ಆಗಲಿದ್ದೇವೆ ಎಂದು ಸ್ವತಃ ನರೇಶ್ ಅವರು ವಿಡಿಯೋವೊಂದನ್ನು ಹಾಕುವ ಮೂಲಕ ಹೇಳಿದ್ದರು. ಈಗ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡಿ ತಲೆಗೆ ಹುಳು ಬಿಟ್ಟಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ‘ಕಬ್ಜ’ ಹವಾ : ಬಾಲಿವುಡ್ ನಲ್ಲಿ ಉಪೇಂದ್ರ, ಸುದೀಪ್ ರೋಡ್ ಶೋ
ಮೂಲಗಳ ಪ್ರಕಾರ ಪವಿತ್ರಾ ಮತ್ತು ಲೋಕೇಶ್ ಅವರ ಲವ್ ಸ್ಟೋರಿಯನ್ನೇ ಸಿನಿಮಾ ಮಾಡಲಾಗುತ್ತಿದೆ. ಆ ಸಿನಿಮಾದಲ್ಲಿ ಪವಿತ್ರಾ ನಾಯಕಿ, ನರೇಶ್ ನಾಯಕ. ಇಬ್ಬರ ಬದುಕಿನಲ್ಲಿ ನಡೆದ ಘಟನೆಗಳನ್ನೇ ಚಿತ್ರಕಥೆಯಾಗಿಸಿದ್ದಾರಂತೆ ನಿರ್ದೇಶಕರು. ಆ ಸಿನಿಮಾದಲ್ಲಿ ಇಬ್ಬರೂ ಮದುವೆ ಆಗುವ ಸನ್ನಿವೇಶ ಕೂಡ ಇದೆಯಂತೆ. ಸದ್ಯ ಹರಿಬಿಟ್ಟಿರುವ ವಿಡಿಯೋ ಕೂಡ ಸಿನಿಮಾದ ದೃಶ್ಯವೆಂದು ಹೇಳಲಾಗುತ್ತಿದೆ.
ನರೇಶ್ ಹಂಚಿಕೊಂಡಿರುವ ಮದುವೆ ವಿಡಿಯೋಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ನೆಗೆಟಿವ್ ಕಾಮೆಂಟ್ ಗಳು ಕೂಡ ಬಂದಿವೆ. ಗೊಂದಲ ಆಗುವಂತೆ ನರೇಶ್ ಬರೆದುಕೊಂಡಿದ್ದರಿಂದ ‘ಇದು ರಿಯಲ್ ಸ್ಟೋರಿನಾ? ರೀಲ್ ಸ್ಟೋರಿನಾ?’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದು ಇಬ್ಬರೂ ಮಾಡುತ್ತಿರುವ ಹುಚ್ಚಾಟ ಎಂದೂ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅವರಿಬ್ಬರೇ ಉತ್ತರ ಕೊಡಬೇಕಿದೆ. ಮುಂದಿನ ದಿನಗಳಲ್ಲಿ ಈ ವಿಡಿಯೋ ಅಸಲಿ ಬಣ್ಣವನ್ನು ಅವರೇ ಬಯಲು ಮಾಡಬಹುದು.