ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಹಾಗೂ ಎ7 ಆರೋಪಿ ಅನುಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.
ಪವಿತ್ರಾಗೌಡ ಪರ ಟಾಮಿ ಸೆಬಾಸ್ಟಿಯನ್, ಅನುಕುಮಾರ್ ಪರವಾಗಿ ಹಿರಿಯ ವಕೀಲ ರಾಮಸಿಂಗ್ ವಾದ ಮಂಡಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಸಂಜೆ 4:30ರ ವೇಳೆಗೆ ಇಬ್ಬರ ಅರ್ಜಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿತು. ಇದನ್ನೂ ಓದಿ: MUDA Scam | ಸಿಎಂ ಸಿದ್ದರಾಮಯ್ಯಗೆ ಮತ್ತೆ ರಿಲೀಫ್ – ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ!
ಇದೇ ಆಗಸ್ಟ್ 19ರಂದು ಪವಿತ್ರಾಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಆ.28 ರಂದು ವಿಚಾರಣೆ ನಡೆಸಿದ್ದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿತ್ತು. ಶನಿವಾರ ಮತ್ತೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ನಿರಾಕರಿಸಿತು. ಇದನ್ನೂ ಓದಿ: ಕೈಕೊಟ್ಟ ಎಂಜಿನ್ – ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ಕೋಲ್ಕತ್ತಾದಲ್ಲಿ ತುರ್ತು ಭೂಸ್ಪರ್ಶ
ಎಸ್‌ಪಿಪಿ ವಾದ ಏನಿತ್ತು?
ಪವಿತ್ರಾಗೌಡ ಅರ್ಜಿ ವಿಚಾರಣೆ ವೇಳೆ ಪ್ರಬಲ ವಾದ ಮಂಡನೆ ಮಾಡಿದ ಎಸ್‌ಪಿಪಿ ಪ್ರಸನ್ನಕುಮಾರ್ (SPP Prasannakumar), ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಆಕ್ಷೇಪಿಸಿದರು. ಮಹಿಳೆಯಾದರೂ ಜಾಮೀನು ಕೊಡಬಾರದು ಅಂತ ಕೇರಳ ಹಾಗೂ ಕೋಲ್ಕತ್ತಾ ಹೈಕೋರ್ಟ್ (Kolkata Highcoutt) ಆದೇಶಗಳನ್ನು ಉಲ್ಲೇಖಿಸಿದರು. ಮಹಿಳೆಯರಿಗೆ ವಿಶೇಷ ಅವಕಾಶ ಯಾಕೆ ಕೊಡಬೇಕು? ಕೇರಳದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಹಾಕಿದ ಬಳಿಕವೂ ಜಾಮೀನು ನೀಡಿಲ್ಲ, ಆದ್ರೆ ಈ ಪ್ರಕರಣದಲ್ಲಿ ಇನ್ನೂ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ. ಆದ್ದರಿಂದ ಮಹಿಳೆ ಎಂಬ ಕಾರಣಕ್ಕೆ ಪವಿತ್ರಾಗೌಡಗೆ ಜಾಮೀನು ನೀಡಬಾರದು. ಏಕೆಂದರೆ `ಕೋಲ್ಡ್ ಬ್ಲಡೆಡ್ ಮರ್ಡರ್’ ಕೇಸ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ ಎಂದು ವಾದಿಸಿದರು.
ಮುಂದುವರಿದು, ಪವಿತ್ರಾಗೌಡ ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಇತರೆ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯ ಮಾಹಿತಿಯನ್ನ ಕೋರ್ಟ್ ಕೊಟ್ಟಿದ್ದೇವೆ. ಕೊಲೆ ಮಾಡುವ ಉದ್ದೇಶದಿಂದ ರೇಣುಕಾಸ್ವಾಮಿಯನ್ನ ಅಪಹರಣ ಮಾಡಲಾಗಿದೆ. ನಂತರ ಆರೋಪಿಗಳು ತೀವ್ರ ಹಲ್ಲೆ ಮಾಡಿ ಕೊಲೆಮಾಡಿದ್ದಾರೆ. ಆರೋಪಿ ಕೇಶವಮೂರ್ತಿ ಕೂಡ ಕೇವಲ ಸಾಕ್ಷಿ ನಾಶ ಮಾಡಿಲ್ಲ, ಈ ಪ್ರಕರಣದಲ್ಲಿ ಆತನದ್ದು ಬಹುಮುಖ್ಯವಾದ ಪಾತ್ರ ಇದೆ. ತನಿಖೆ ಸಹ ಇನ್ನು ಮುಕ್ತಾಯ ಆಗಿಲ್ಲ. ಹೀಗಾಗಿ ಯಾವ ಆರೋಪಿಗಳಿಗೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ಇದನ್ನೂ ಓದಿ: ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯ – ‘ಕೈ’ ನಾಯಕರಿಂದ ‘ರಾಜಭವನ ಚಲೋ’
ಎಸ್‌ಪಿಪಿ ವಾದದ ಪ್ರಮುಖ ಅಂಶಗಳು?
* ಪವಿತ್ರಗೌಡ ಶೆಡ್‌ಗೆ ಹೋಗಿಯೇ ಇಲ್ಲ ಅಂತಾರೆ,
* ಆದರೆ, ಪವಿತ್ರಗೌಡರನ್ನು ದರ್ಶನ್ ಕರೆದೊಯ್ಯುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
* ಆಕೆಯ ಚಪ್ಪಲಿಯಲ್ಲಿ ರಕ್ತದ ಕಲೆ ಪತ್ತೆಯಾಗಿದೆ, ಎಫ್‌ಎಸ್‌ಎಲ್ ವರದಿಯಲ್ಲೂ ದೃಢಪಟ್ಟಿದೆ.
* ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲಾಗಿದೆ, ಇದರಿಂದ 39 ಕಡೆ ಗಾಯ ಆಗಿದೆ.
* ರೇಣುಕಾಸ್ವಾಮಿಯ ಎದೆ ಪಕ್ಕೆಲುಬು ಮುರಿದಿದೆ, ಶ್ವಾಸಕೋಶ ಡ್ಯಾಮೇಜ್ ಆಗಿದೆ.
* ಘಟನಾ ಸ್ಥಳದಲ್ಲಿ ಆರೋಪಿಗಳ ಇರುವಿಕೆ ಬಗ್ಗೆ ಸಾಕ್ಷ್ಯ ಇದೆ.
* ಕೋಲ್ಡ್ ಬ್ಲಡೆಡ್ ಮರ್ಡರ್‌ನಲ್ಲಿ ಪವಿತ್ರಾಗೌಡ ಭಾಗಿಯಾಗಿದ್ದಾರೆ.
* ತನಿಖೆ ಇನ್ನೂ ಮುಕ್ತಾಯ ಆಗಿಲ್ಲ, ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದೆಂದು ಆಕ್ಷೇಪ.
ಪವಿತ್ರಾಗೌಡ ಪರ ವಕೀಲರ ವಾದ ಏನು?
* ಪವಿತ್ರಾಗೌಡ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಅನ್ನೋದು ಕಪೋಲಕಲ್ಪಿತ
* ದರ್ಶನ್ ಪವಿತ್ರಾಗೌಡ ಮನೆಗೆ ಹೋಗಿ ಕರೆದೊಯ್ದಿದ್ರು ಅಷ್ಟೇ
* ಹೀಗಿರುವಾಗ ಇದರಲ್ಲಿ ಪವಿತ್ರಾಗೌಡ ಅವರ ಸಂಚು ಏನಿದೆ..?
* ಎದೆಗೆ ಪೆಟ್ಟುಬಿದ್ದ ಕಾರಣ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ
* ಹೀಗಾಗಿ ಪವಿತ್ರಾಗೌಡ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿಲ್ಲ
* ಪವಿತ್ರಾಗೌಡ ವಿರುದ್ಧ ಗಂಭೀರ ಆರೋಪ ಇಲ್ಲ.. ಆದ್ದರಿಂದ ಬೇಲ್ ಕೊಡಬೇಕು ಅಂತ ಮನವಿ ಮಾಡಿದರು.