– ಲಾಕ್‍ಡೌನಿಂದ ಗುಜರಾತ್‍ನಲ್ಲಿ ಸಿಲುಕಿಕೊಂಡಿದ್ದ ತಂದೆ
– ಸಾಮಾಜಿಕ ಜಾಲತಾಣಗಳಲ್ಲಿ ಹರಿಡಾಡುತ್ತಿದ್ದ ಫೋಟೋಗಳಿಂದ ಪ್ರಕರಣ ಪತ್ತೆ
ಪಾಟ್ನಾ: ಐವರು ಕಾಮುಕರು ಸೇರಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸೆಗಿ, ಆಕೆಯ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಅಮಾನವೀಯ ಕೃತ್ಯ ಬಿಹಾರ್ ನಲ್ಲಿ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಬಾಲಕಿಯ ಫೋಟೋಗಳನ್ನು ನೋಡಿದ ‘ಸೈಬರ್ ಸೇನಾನಿ’ ತಂಡ ಈ ಬಗ್ಗೆ ಪೊಲೀಸರಿಗೆ ದೂರು ನೀಡಿತ್ತು. ಹೀಗಾಗಿ ಏಪ್ರಿಲ್ 24ರಂದು ನಡೆದಿದ್ದ ಗ್ಯಾಂಗ್ ರೇಪ್ ಬೆಳಕಿಗೆ ಬಂದಿದ್ದು, ಐವರ ಪೈಕಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
Advertisement
Advertisement
ಲಾಕ್‍ಡೌನ್ ಹಿನ್ನೆಲೆ ಕೆಲಸಕ್ಕೆ ಗುಜರಾತ್ ನ ಅಹಮದಾಬಾದ್‍ಗೆ ಹೋಗಿದ್ದ ಬಾಲಕಿಯ ತಂದೆ ಅಲ್ಲಿಯೇ ಸಿಲುಕಿಕೊಂಡಿದ್ದರು. ಹೀಗಾಗಿ ಬಾಲಕಿ ಕುಟುಂಬಕ್ಕೆ ಸಹಾಯ ಆಗಲಿ ಎಂದು ಕೆಲಸಕ್ಕೆ ಹೋಗುತ್ತಿದ್ದಳು. ಏಪ್ರಿಲ್ 24ರಂದು ರಾತ್ರಿ ಕೆಲಸ ಮುಗಿಸಿಕೊಂಡು ಬಾಲಕಿ ಮನೆಗೆ ಬರುತ್ತಿದ್ದ ವೇಳೆ ಇಬ್ಬರು ಆಕೆಯನ್ನು ಅಡ್ಡಗಟ್ಟಿ ಮಾವಿನ ತೋಟಕ್ಕೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಗೆ ತಮ್ಮ ಮೂವರು ಸ್ನೇಹಿತರನ್ನು ಕರೆದು ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
Advertisement
Advertisement
ಮಾವಿನ ತೋಟದಲ್ಲಿ ಕಾಮುಕರು ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದಲ್ಲದೇ ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದರು. ಅಲ್ಲದೇ ಈ ಬಗ್ಗೆ ಯಾರಿಗೂ ಹೇಳಬೇಡ ಎಂದು ಹೆದರಿಸಿ, ಬಾಲಕಿ ಬಳಿ ಪ್ರಮಾಣ ಮಾಡಿಸಿಕೊಂಡಿದ್ದರು. ಕಾಮುಕರ ದುಕೃತ್ಯಕ್ಕೆ ಹೆದರಿದ ಬಾಲಕಿ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ. ತಂದೆ ಅಹಮದಾಬಾದ್‍ನಲ್ಲಿ ಸಿಲುಕಿಕೊಂಡಿದ್ದ ಕಾರಣಕ್ಕೆ ಬಾಲಕಿ ತನ್ನ ತಾಯಿ, ಅಜ್ಜ, ಅಜ್ಜಿ ಜೊತೆಗೆ ವಾಸವಾಗಿದ್ದಳು. ಹೀಗಾಗಿ ಬಾಲಕಿ ಕೀಚಕರ ಬಗ್ಗೆ ಬಾಯಿಬಿಡದೆ ಸುಮ್ಮನ್ನಿದ್ದಳು.
ಆದರೆ ಕೃತ್ಯವೆಸೆಗಿದ ಆರೋಪಿಗಳು ಬಾಲಕಿಯ ಬೆತ್ತಲೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಫೋಟೋಗಳನ್ನು ನೋಡಿದ ‘ಸೈಬರ್ ಸೇನಾನಿ’ ತಂಡ ಪೊಲೀಸರ ಗಮನಕ್ಕೆ ತಂದಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನುವುದು ತಿಳಿದಿದೆ. ಹೀಗಾಗಿ ಬಾಲಕಿಯನ್ನು ಪತ್ತೆ ಹಚ್ಚಿ ಆಕೆಯ ಹೇಳಿಕೆ ಹಾಗೂ ತಾಯಿಯ ಹೇಳಿಕೆಗಳನ್ನು ಪಡೆದು, ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡರು.
ಹಾಗೆಯೇ ಶುಕ್ರವಾರ ರಾತ್ರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಓರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.