ಪತಿಬೇಕು ಡಾಟ್ ಕಾಮ್ ಚಿತ್ರಕ್ಕೆ ಶೀತಲ್ ಶೆಟ್ಟಿ ನಾಯಕಿಯೂ ಹೌದು, ನಾಯಕನೂ ಹೌದು ಅಂತ ಖುದ್ದು ನಿರ್ದೇಶಕ ರಾಕೇಶ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಶೀತಲ್ ಶೆಟ್ಟಿ ಹೇಳೋ ಪ್ರಕಾರ ಈ ಚಿತ್ರದ ನಿಜವಾದ ನಾಯಕಿ ಭಾಗ್ಯ ಅಂತೆ!
ಭಾಗ್ಯ ಈ ಇಡೀ ಚಿತ್ರದ ಕೇಂದ್ರ ಬಿಂದುವಾಗಿರೋ ಪಾತ್ರ. ಅದು ಕೆಳ ಮಧ್ಯಮವರ್ಗದಿಂದ ಬಂದ ಮೂವತ್ತು ದಾಟಿದ ಹೆಣ್ಣುಮಗಳೊಬ್ಬಳ ಭಾವಕೋಶವನ್ನು ಬಿಚ್ಚಿಡುವ ಪಾತ್ರ. ಅದು ಸಮಸ್ತ ಹೆಣ್ಮಕ್ಕಳ ಮನೋಭೂಮಿಕೆಯನ್ನು ಪ್ರತಿನಿಧಿಸುವ ಪಾತ್ರವೂ ಹೌದು. ಆ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ ಖುಷಿಯಷ್ಟೇ ತಮ್ಮದು ಅನ್ನುವ ಶೀತಲ್ ಶೆಟ್ಟಿ ಒಟ್ಟಾರೆ ಚಿತ್ರದ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಭರವಸೆ ಹೊಂದಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಖ್ಯಾತ ನಿರೂಪಕಿಯಾಗಿದ್ದುಕೊಂಡು ಕನ್ನಡಿಗರೆಲ್ಲರ ಮನ ಗೆದ್ದವರು ಶೀತಲ್ ಶೆಟ್ಟಿ. ವರ್ಷಗಟ್ಟಲೆ ಅದೇ ಕೆಲಸ ಮಾಡಿ ಏಕತಾನತೆ ಕಾಡಿಸಿಕೊಂಡಿದ್ದ ಅವರ ಪಾಲಿಗೆ ಸಿನಿಮಾ ಎಂಬುದು ತಾವು ಬಯಸಿದ ಬದಲಾವಣೆಗೊಂದು ದಾರಿ. ಆ ದಾರಿಯಲ್ಲಿ ಹಂತ ಹಂತವಾಗಿ ಬಹುದೂರ ಸಾಗಿ ಬಂದಿರುವ ಅವರ ಪಾಲಿಗೆ ಪತಿಬೇಕು ಡಾಟ್ ಕಾಮ್ ಚಿತ್ರ ಮಹತ್ವದ ಮೈಲಿಗಲ್ಲು.
ನಟಿಸುವ ನಿರ್ಧಾರ ಮಾಡಿದ ಶೀತಲ್ ಶೆಟ್ಟಿಯವರಿಗೆ ಹೀರೋಯಿನ್ ಆಗಿ ಮಿಂಚುವ ಇರಾದೆ ಇಲ್ಲದಿದ್ದರೂ ಒಂದೊಳ್ಳೆ ಕಥೆ ಹೊಂದಿರೋ ಚಿತ್ರದಲ್ಲಿ ನಟಿಸೋ ಆಸೆಯಂತೂ ಇದ್ದೇ ಇತ್ತು. ನಿರ್ದೇಶಕ ರಾಕೇಶ್ ಮೊದಲ ಸಲ ಬಂದು ಕಥೆ ಹೇಳಿದಾಗ ಆ ಆಸೆ ನೆರವೇರಿದ ಸೂಚನೆ ಪಡೆದುಕೊಂಡಿದ್ದ ಶೀತಲ್‍ಗೆ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿರೋ ಈ ಕ್ಷಣದಲ್ಲೊಂದು ಆತ್ಮತೃಪ್ತಿಯಿದೆಯಂತೆ.
ಈಗಾಗಲೇ ಈ ಚಿತ್ರ ಟ್ರೈಲರ್, ಸಂಭಾಷಣೆ ಮತ್ತು ಹಾಡುಗಳ ಮೂಲಕ ಎಲ್ಲ ವರ್ಗದವರನ್ನೂ ತಲುಪಿಕೊಂಡಿದೆ. ‘ಯಾಕಪ್ಪ ದೇವರೆ ಆಡಿಸ್ತಿ ಕ್ಯಾಬರೆ’ ಹಾಡಂತೂ ಅದೆಷ್ಟೋ ಹೆಣ್ಣು ಜೀವಗಳನ್ನು ಪ್ರಾತಿನಿಧಿಕ ಗೀತೆಯಂತೆಯೇ ಕಾಡಿದೆ. ಅದುವೇ ಹೆಂಗಳೆಯರನ್ನೆಲ್ಲ ಥೇಟರಿನತ್ತಲೂ ಸೆಳೆದುಕೊಳ್ಳೋದು ಖಚಿತ. ಬರೀ ಹೆಣ್ಣುಮಕ್ಕಳು ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಕಚಗುಳಿ ಇಟ್ಟಿರೋ ಈ ಚಿತ್ರ ಶೀತಲ್ ಶೆಟ್ಟಿಯವರ ಪಾಲಿಗೆ ಅತ್ಯಂತ ಮಹತ್ವದ್ದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv