-ಮಾಡೋಕೆ ಕೆಲಸವಿಲ್ಲದೆ ಗುಳೆ ಹೊರಟಿದೆ ಕೂಲಿ ಕಾರ್ಮಿಕ ವರ್ಗ
-ಮೇವಿಲ್ಲದೆ ಕಂಗಾಲಾಗಿವೆ ಜಾನುವಾರುಗಳು
ವಿರೇಶ್ ದಾನಿ
ಬಳ್ಳಾರಿ: ಗಣಿ ಜಿಲ್ಲೆ ಈಗ ಅಕ್ಷರಶಃ `ಬರ’ ಪೀಡಿತ ಜಿಲ್ಲೆಯಾಗಿ ಮಾರ್ಪಡಾಗಿದೆ. ಹಿಂದೆಂದೂ ಕಾಣದ ಭೀಕರ ಕ್ಷಾಮ ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಎದುರಾಗಿದೆ. ಒಂದೆಡೆ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶಗಳಲ್ಲಿ ನೀರು, ಮೇವು, ಉದ್ಯೋಗಕ್ಕಾಗಿ ಪರದಾಟ ಕಂಡು ಬರುತ್ತಿದ್ದರೆ ಇನ್ನೊಂದೆಡೆ ಬೇಸಿಗೆಯಲ್ಲಿ ಬಿರು ಬಿಸಿಲಿನ ತಾಪದ ಜೊತೆಗೆ ದಾಹವೂ ಹೆಚ್ಚಾಗಿದೆ. ಇನ್ನು ಸತತ 3 ವರ್ಷಗಳ ಬರದಿಂದಾಗಿ ರೈತರ ಬದುಕು ಅಕ್ಷರಶಃ ಅತಂತ್ರವಾಗಿದೆ. ಸಾಕಷ್ಟು ಸಂಖ್ಯೆಯ ಕೃಷಿ ಕಾರ್ಮಿಕರು ಹಾಗೂ ರೈತ ಸಮೂಹ ಈಗ ನಗರ ಪ್ರದೇಶದತ್ತ ಕೆಲಸ ಅರಸಿ ಗುಳೆ ಹೊರಟಿದ್ದಾರೆ.
Advertisement
Advertisement
ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಶ್ರಿತ ತಾಲೂಕುಗಳಾದ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಹೂವಿನಹಡಗಲಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಹೊಸಪೇಟೆ, ಸಿರುಗುಪ್ಪ, ಬಳ್ಳಾರಿ ತಾಲೂಕುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯ ಎಲ್ಲ ಕೆರೆ-ಕಟ್ಟೆಗಳು ನೀರಿಲ್ಲದೆ ಸಂಪೂರ್ಣವಾಗಿ ಖಾಲಿಯಾಗಿವೆ. ಇನ್ನು ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಕೇವಲ 4 ಟಿಎಂಸಿ ಮಾತ್ರ ಡೆಡ್ ಸ್ಟೋರೇಜ್ ನೀರು ಸಂಗ್ರಹವಿರುವುದರಿಂದ ಜಿಲ್ಲೆಯಲ್ಲಿ ಈ ಬಾರಿ ಕುಡಿಯುವ ನೀರಿನ ಅಭಾವ ತ್ರೀವಗೊಂಡಿದೆ.
Advertisement
ಸಂಡೂರು ತಾಲೂಕಿನಲ್ಲಿ 30ಕ್ಕೂ ಅಧಿಕ ಕೆರೆಗಳಿದ್ದು, ಚೋರುನೂರು, ಬೊಮ್ಮಘಟ್ಟ ಸೇರಿ ಬೆರಳೆಣಿಕೆ ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರಿದೆ. ಉಳಿದಂತೆ ಬಹುತೇಕ ಕೆರೆಗಳು ಬತ್ತಿಹೋಗಿವೆ. ಸಿರಗುಪ್ಪ ತಾಲೂಕಿನ 31 ಕೆರೆಗಳಲ್ಲಿ ಸಿರಿಗೇರಿ, ಕರೂರು, ರಾರಾವಿ, ಹಳೇಕೋಟೆ ಗ್ರಾಮದ ಕೆರೆಗಳು ಹೊರತುಪಡಿಸಿ ಇನ್ನುಳಿದವುಗಳಲ್ಲಿ ಕೊಂಚ ನೀರು ಸಂಗ್ರಹವಿದೆ.
Advertisement
ಶೇ.35 ರಷ್ಟು ಮಳೆ ಅಭಾವ: ಜಿಲ್ಲೆಯಲ್ಲಿ ಕಳೆದ ಮುಂಗಾರು ಹಾಗೂ ಹಿಂಗಾರು ಮಳೆ ಪ್ರಮಾಣವು ವಾಡಿಕೆಗಿಂತಲೂ ಶೇ.35 ರಷ್ಟು ಕಡಿಮೆ ದಾಖಲಾಗಿದೆ. ಮುಂಗಾರು ಹಂಗಾಮಿನಲ್ಲಿ 1.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಕೃಷಿ ಬೆಳೆ ಹಾನಿಯಾಗಿ ಸುಮಾರು 139.98 ಕೋಟಿ ರೂ. ನಷ್ಟವಾಗಿದೆ. 7947 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆ ಹಾನಿಯಿಂದಾಗಿ 709.91 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮುಂಗಾರು ಬೆಳೆ ಹಾನಿ ಪರಿಹಾರ ನೀಡಲು ಜಿಲ್ಲೆಯ 1.53 ಲಕ್ಷ ರೈತರನ್ನು ಗುರುತಿಸಲಾಗಿದೆ. ಇನ್ನು ಹಿಂಗಾರು ಹಂಗಾಮಿನ ಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಕೃಷಿಯಲ್ಲಿ 1.41 ಲಕ್ಷ ಹೆಕ್ಟೇರ್ ಗುರಿಯಲ್ಲಿ 29657 ಹೆಕ್ಟೇರ್ ಹಾಗೂ ತೋಟಗಾರಿಕೆಯಲ್ಲಿ 3602 ಹೆಕ್ಟೇರ್ ಪೈಕಿ 932 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತುಂಗಭದ್ರ ಜಲಾಶಯವನ್ನು ಅವಲಂಬಿಸಿರುವ ಜಿಲ್ಲೆಯ ರೈತರು ಭತ್ತ, ಕಬ್ಬು ನಾಟಿ ಮಾಡುವುದೇ ಹೆಚ್ಚು. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ ಬೆಳೆಗೂ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇನ್ನು 2ನೇ ಬೆಳೆಯ ಮಾತಂತೂ ಇಲ್ಲವಾಗಿದೆ.
ಖಾರವಾದ ಮಿರ್ಚಿ: 2ನೇ ಬೆಳೆ ಬಿತ್ತನೆಗೆ ನೀರಿನ ಅಭಾವದ ಹಿನ್ನೆಲೆಯಲ್ಲಿ ಸಿರುಗುಪ್ಪ ಮತ್ತು ಬಳ್ಳಾರಿ ತಾಲೂಕಿನ ಬಹುತೇಕ ರೈತರು ಈ ಬಾರಿ ಮೆಣಸಿನಕಾಯಿ ಬೆಳೆಯನ್ನು ಹೆಚ್ಚಾಗಿ ಬೆಳೆದರು. ಉತ್ತಮ ಇಳುವರಿಯೂ ಬಂತು. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದಾಗಿ ರೈತರ ಪಾಲಿಗೆ ಮಿರ್ಚಿಯಂತೂ ಬಲು ಖಾರವಾಗಿಯೇ ಪರಿಣಮಿಸಿದೆ. ಹೀಗಾಗಿ ಮೆಣಸಿನಕಾಯಿ ಬೆಳೆ ಬೆಳೆದ ರೈತರಿಗೆ ಈ ಭಾರಿ ಮೆಣಸಿನಕಾಯಿ ಅಕ್ಷರಶಃ ಖಾರವಾಗಿ ಬಿಟ್ಟಿದೆ.
625 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ: ಜಿಲ್ಲೆಯಾದ್ಯಂತ ಈ ವರ್ಷ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, 625 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಪೈಕಿ ಬಳ್ಳಾರಿ ತಾಲೂಕಿನ 59, ಹೂವಿನಹಡಗಲಿಯ 65, ಹ.ಬೊ.ಹಳ್ಳಿಯ 99, ಹೊಸಪೇಟೆಯ 66, ಕೂಡ್ಲಿಗಿಯ 145, ಸಂಡೂರಿನ 93 ಹಾಗೂ ಸಿರುಗುಪ್ಪ ತಾಲೂಕಿನ 98 ಗ್ರಾಮಗಳು ಸೇರಿವೆ. ಖಾಸಗಿ ಮಾಲೀಕರಿಂದ 73 ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಜಿಲ್ಲಾಡಳಿತ ನೀರು ಪೂರೈಸುತ್ತಿದ್ದು ಪ್ರತಿಯೊಂದಕ್ಕೆ ಮಾಸಿಕ 7-9 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಆದ್ರೂ ಜಿಲ್ಲೆಯಲ್ಲಿ ಜನರಿಗೆ ಸರಿಯಾಗಿ ಕುಡಿಯೋಕೆ ನೀರು ಸಿಗದೆ ಹಾಹಾಕಾರ ತೀವ್ರಗೊಂಡಿದೆ.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹವು ತಳ ಮುಟ್ಟಿರುವುದರಿಂದ ಕಾಲುವೆಗಳಿಗೆ ನಿಗದಿತ ಅವಧಿಗಿಂತ ಮುಂಚಿತವಾಗಿ ನೀರಿನ ಹರಿವು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸುಮಾರು 400-500 ಅಡಿಯಷ್ಟು ಆಳವಾಗಿ ಬೋರವೆಲ್ ಕೊರೆದರೂ ನೀರು ಸಿಗದಂತಾಗಿದೆ. ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಂತೂ ಸಾವಿರ ಅಡಿಯಷ್ಟು ಆಳವಾಗಿ ಬೊರವೆಲ್ ಕೊರೆದರೂ ನೀರು ಸಿಗದಿರುವುದು ಜನರನ್ನು ಆತಂಕಕ್ಕೆ ಈಡು ಮಾಡಿದೆ.
10-15 ದಿನಕ್ಕೊಮ್ಮೆ ನೀರು ಬಂದ್ರೆ ಪುಣ್ಯ: ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ ಪರಿಣಾಮ ಬಳ್ಳಾರಿ ಮಹಾನಗರದ ಜನರಿಗೆ ಸರಿಯಾಗಿ ನೀರು ಸಿಗದಂತಾಗಿದೆ. ಡ್ಯಾಂನಲ್ಲಿ ನೀರು ಕಡಿಮೆಯಾಗಿರುವುದರಿಂದ ಬಿಸಿಲಿನ ಬಿಸಿಯೊಂದಿಗೆ ನೀರಿನ ದಾಹ ಇದೀಗ ಬಳ್ಳಾರಿ ನಗರದ ಸಾರ್ವಜನಿಕರಿಗೆ ಮುಟ್ಟಿದೆ. ನಗರದ ಎಲ್ಲ 35 ವಾರ್ಡ್‍ಗಳಲ್ಲೂ 10-12 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಅದೂ ಕೆಲ ನಿಮಿಷಗಳಿಗೆ ಮಾತ್ರ ನೀರು ಪೊರೈಕೆಯಾಗುತ್ತಿರುವುದರಿಂದ ಜನರು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಗಿದೆ.
ಜಲಾಶಯದ ಪಕ್ಕದಲ್ಲೇ ಇರುವ ಹೊಸಪೇಟೆ ನಗರದಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. 2-3 ದಿನಕ್ಕೊಮ್ಮೆ ಸರದಿ ಪ್ರಕಾರ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದಂತೆ ಜಿಲ್ಲೆಯ ಸಿರಗುಪ್ಪ, ಕಂಪ್ಲಿ, ಕುರುಗೋಡು, ಕೂಡ್ಲಿಗಿ, ಹಡಗಲಿ, ಸಂಡೂರು, ಕುರೇಕುಪ್ಪ, ಕಮಲಾಪುರ, ಹ.ಬೊ.ಹಳ್ಳಿ, ತೆಕ್ಕಲಕೋಟೆ, ಕೊಟ್ಟೂರು, ಕುಡತಿನಿ, ಮರಿಯಮ್ಮನಹಳ್ಳಿ ಸೇರಿದಂತೆ ಬಹುತೇಕ ನಗರ ಪ್ರದೇಶಗಳಲ್ಲಿನ ಸ್ಥಿತಿ ಭಿನ್ನವಾಗಿಲ್ಲ.
ಸಂಡೂರು ತಾಲೂಕಿನ ಬಂಡ್ರಿ, ಸಿ.ಕೆ.ಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊಳವೆ ಬಾವಿಗಳಿದ್ದರೂ ನೀರಿಲ್ಲ. ನೀರಿದ್ದರೆ ಪೈಪ್ ಲೈನ್ ಜೋಡಣೆಯಾಗಿಲ್ಲ. ಎರಡೂ ಇದ್ದರೂ ವಿದ್ಯುತ್ ಸಂಪರ್ಕವಿಲ್ಲದ ಸ್ಥಿತಿ. ತೋರಣಗಲ್, ವಿಠಲಾಪುರ ಸೇರಿ ತಾಲೂಕಿನ ಬಹುತೇಕ ಗ್ರಾಮಸ್ಥರಿಗೆ ಫ್ಲೋರೈಡ್‍ಯುಕ್ತ ನೀರೇ ಗತಿ. ಕೂಡ್ಲಿಗಿ ತಾಲೂಕಿನ ಕಾನಾಮಡುಗು, ಹೊಸಹಳ್ಳಿ, ಹುಡೇಂ, ಕಡೇಕೊಳ್ಳ, ನಿಂಬಳಗೆರೆ, ರಾಂಪುರ, ದೂಪದಹಳ್ಳಿ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ, ಹಿರೆ ಮಲ್ಲನಕೆರೆ, ಸೋಗಿ, ಹಕ್ಕಂಡಿ, ಹೊಳಗುಂದಿ, ಬಸರಹಳ್ಳಿ ತಾಂಡ, ಕಾಲ್ವಿ ತಾಂಡ, ಎಂ.ಕಲ್ಲಹಳ್ಳಿ, ಕೆಂಚಮ್ಮನಹಳ್ಳಿ, ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ.
ಕಳೆದ ಜುಲೈ ತಿಂಗಳಿಂದಲೇ ಟ್ಯಾಂಕರ್ ನೀರು: ಸಂಡೂರು ತಾಲೂಕಿನ ಅಂತಾಪುರ, ಕೊಡಾಲು, ಕೊರಚರಹಟ್ಟಿ, ಚಿಕ್ಕಂತಾಪುರಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಕಳೆದ ಜುಲೈ ತಿಂಗಳಿಂದಲೇ ಈ ಗ್ರಾಮದ ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿ ಖಾಸಗಿ ಬೋರ್‍ವೆಲ್‍ಗಳಿಂದ ನೀರು ಖರೀದಿಸಲಾಗಿತ್ತಾದರೂ ಬೋರ್‍ಗಳಲ್ಲೂ ನೀರು ಕಡಿಮೆಯಾಗಿದ್ದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಅಂತರ್ಜಲ ಮಟ್ಟ ಕುಸಿತ: ಮಳೆ ಅಭಾವದಿಂದಾಗಿ ಅಂತರ್ಜಲ ಮಟ್ಟವು ನೂರಾರು ಅಡಿ ಆಳಕ್ಕೆ ಕುಸಿದಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ಕೂಡ್ಲಿಗಿ ತಾಲೂಕುಗಳಲ್ಲಿ 500 ರಿಂದ 700 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಭುಜಂಗನಗರದಲ್ಲಿ ಕಳೆದ ಮೇ ತಿಂಗಳಿಂದ ಬಳಕೆ ಮಾಡಿರುವ ಕೆಲವು ಖಾಸಗಿ ಬೋರ್‍ವೆಲ್‍ನವರಿಗೆ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಖಾಸಗಿ ಬೋರ್‍ವೆಲ್‍ನವರು ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ. ಜಿಲ್ಲೆಯ ಸುಮಾರು 212 ಗ್ರಾಮಗಳ ಜನರು ಫ್ಲೋರೈಡ್‍ಯುಕ್ತ ನೀರನ್ನೇ ಸೇವಿಸುವ ಅನಿವಾರ್ಯತೆ ಎದುರಾಗಿದೆ.
ಮೇವಿಗೂ ಬರ: ಅಚ್ಚರಿ ಎಂದರೆ ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಮೇವಿನ ಸಮಸ್ಯೆ ಎದುರಾಗಿದೆ. ಮೇವಿಲ್ಲದೇ ಜಾನುವಾರು ಕಸಾಯಿಖಾನೆ ಸೇರುತ್ತಿವೆ. ಸಮಸ್ಯಾತ್ಮಕ ಪ್ರದೇಶದಲ್ಲಿ ಮೇವಿನ ಬ್ಯಾಂಕ್ ಇಲ್ಲವೇ ಗೋಶಾಲೆ ಸ್ಥಾಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ಪಶು ಸಂಗೋಪನಾ ಇಲಾಖೆ ಮಾಹಿತಿಗಳ ಪ್ರಕಾರ ಮೇವಿನ ಸಮಸ್ಯೆ ಎಲ್ಲಿಯೂ ಇಲ್ಲ. ಜಿಲ್ಲೆಯಲ್ಲಿ 4.84 ಲಕ್ಷ ಜಾನುವಾರುಗಳಿದ್ದು, 7.09 ಲಕ್ಷ ಟನ್ ಮೇವು ಸಂಗ್ರಹವಿದೆ. ಲಭ್ಯವಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಾರ 16,956 ಟನ್ ಮೇವಿನ ಅವಶ್ಯಕತೆ ಇದೆ. ಪ್ರಸ್ತುತ 42 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಆದರೆ ಮುಂದಿನ ದಿನಗಳಲ್ಲಿ 131 ಗ್ರಾಮಗಳಲ್ಲಿ ಮೇವಿನ ಕೊರತೆ ಎದುರಾಗಬಹುದಾಗಿದ್ದು, 13,103 ಟನ್ ಮೇವಿನ ಅಗತ್ಯವಿದೆ ಎಂದು ಪಶು ಸಂಗೋಪನಾ ಇಲಾಖೆ ಅಂದಾಜಿಸಿದೆ.
20.92 ಲಕ್ಷ ಮಾನವ ದಿನಗಳ ಸೃಷ್ಟಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರ್ಷ 2.23 ಲಕ್ಷ ಜಾಬ್ ಕಾರ್ಡ್ ವಿತರಿಸಲಾಗಿದ್ದು, 20.92 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಅರಣ್ಯ, ತೋಟಗಾರಿಕೆ, ರೇಷ್ಮೆ, ಕೃಷಿ ಮತ್ತು ಜಲಾನಯನ, ಪಶುಸಂಗೋಪನೆ, ಮೀನುಗಾರಿಕೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ, ನೆಲ್ಕುದ್ರಿ, ತಂಬ್ರಹಳ್ಳಿ, ಕೋಗಳಿ, ಅಲಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಮಾನವ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ಜನರು ಗುಳೆ ಹೋಗುವುದು ಮಾತ್ರ ನಿಂತಿಲ್ಲ.
125 ಕೋಟಿ ಬರ ಪರಿಹಾರ ಪ್ರಸ್ತಾವನೆ: ಕೇಂದ್ರ ಬರ ಅಧ್ಯಯನ ತಂಡವೂ ಈಚೆಗೆ ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದೆ. ತಂಡದ ಎದುರಿಗೆ ರೈತರು ತಮ್ಮ ಗೋಳನ್ನೂ ತೋಡಿಕೊಂಡಿದ್ದಾರೆ. ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ. ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೆತ್ತಿಕೊಳ್ಳಲು 125 ಕೋಟಿ ರೂ. ಅನುದಾನ ಬೇಡಿಕೆಯನ್ನು ಜಿಲ್ಲಾಡಳಿತ ಕೇಂದ್ರ ತಂಡಕ್ಕೆ ಸಲ್ಲಿಸಿದೆ.
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹಿಂಗಾರು ಬೆಳೆ ಹಾನಿಗೆ 813.88 ಲಕ್ಷ ರೂ., ದೊಡ್ಡ ರೈತರ ಬೆಳೆಗೆ 201.38 ಲಕ್ಷ ರೂ.ಗಳನ್ನು ಇನ್‍ಪುಟ್ ಸಬ್ಸಿಡಿಗಾಗಿ, ಮೇವು ದಾಸ್ತಾನಿಗೆ 382 ಲಕ್ಷ ರೂ., ಗೋಶಾಲೆ ನಿರ್ವಹಣೆಗೆ 800 ಲಕ್ಷ ರೂ., ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ 2150 ಲಕ್ಷ ರೂ., ನಗರ ನೀರು ಸರಬರಾಜುಗೆ 1975 ಲಕ್ಷ ರೂ., ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಪುನಶ್ಚೇತನಕ್ಕಾಗಿ 6,200 ಲಕ್ಷ ರೂ. ಹೀಗೆ ಒಟ್ಟು 12,522.31 ಲಕ್ಷ ರೂ. ಅನುದಾನವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಈ ಮನವಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎಂಬುದು ಕಾದು ನೋಡಬೇಕಿದೆ.