ನವದೆಹಲಿ: ಯೋಗ ಗುರು ಹಾಗೂ ಪತಂಜಲಿ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಬಾಬಾ ರಾಮ್‌ದೇವ್ (Baba Ramdev) ಅವರು ಸುಪ್ರೀಂ ಕೋರ್ಟ್ (Supreme Court) ಚಾಟಿ ಬೀಸಿದ ಬಳಿಕ ಬೇಷರತ್ ಕ್ಷಮೆಯಾಚಿಸಿದ್ದಾರೆ.
ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಪತಂಜಲಿ (Patanjali) ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಏಕೆ ಪ್ರಾರಂಭಿಸಬಾರದು? ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಸಂಸ್ಥೆಯು ಕ್ಷಮೆಯಾಚಿಸಿದೆ. ಇದನ್ನೂ ಓದಿ: INDIA ಗೆದ್ದರೆ ಮೇಕೆದಾಟು ಯೋಜನೆಗೆ ತಡೆ: ಪ್ರಣಾಳಿಕೆಯಲ್ಲಿ ಡಿಎಂಕೆ ಘೋಷಣೆ
ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧವನ್ನು ವಿಧಿಸಿತ್ತು. ಅಲ್ಲದೇ ತಪ್ಪುದಾರಿಗೆಳೆಯುವ ಜಾಹೀರಾತು ನೀಡಿದ್ದಕ್ಕಾಗಿ ಅದರ ಸಂಸ್ಥಾಪಕರಾದ ರಾಮ್‌ದೇವ್ ಮತ್ತು ಬಾಲಕೃಷ್ಣ (Acharya Balkrishna) ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ, 2 ವಾರಗಳ ಅವಧಿಯಲ್ಲಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಕೋರ್ಟ್ ಎಚ್ಚರಿಕೆ ನೀಡಿದ 2 ದಿನಗಳಲ್ಲಿ ಸಂಸ್ಥೆ ಕ್ಷಮೆ ಕೋರಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗದ ಮೊರೆ ಹೋದ ಬಿಜೆಪಿ
ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆಯ ಬಳಿಕ ಆಚಾರ್ಯ ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇಶದ ಕಾನೂನಿನ ಬಗ್ಗೆ ಪತಂಜಲಿ ಸಂಸ್ಥೆಗೆ ಅಪಾರವಾದ ಗೌರವವಿದೆ. ಕೋರ್ಟ್‌ಗೆ ಕಂಪನಿಯು ಬೇಷರತ್ ಕ್ಷಮೆಯಾಚಿಸುತ್ತದೆ. ಪತಂಜಲಿ ಸಂಸ್ಥೆಯು ಭವಿಷ್ಯದಲ್ಲಿ ಇಂತಹ ಜಾಹೀರಾತುಗಳನ್ನು ನೀಡುವುದಿಲ್ಲ. ಮುಂದೆ ನೀಡುವ ಜಾಹೀರಾತುಗಳು ಕಾನೂನಿನ ಅನ್ವಯವಾಗಿ ಇರುತ್ತವೆ. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಸೇವಿಸುವ ಮೂಲಕ ದೇಶದ ಜನ ಆರೋಗ್ಯದಿಂದ ಇರಲಿ ಎಂಬುದಷ್ಟೇ ನಮ್ಮ ಜಾಹೀರಾತಿನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
ಏನಿದು ಕೇಸ್?
ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಪತಂಜಲಿ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹಿಮಕೊಹ್ಲಿ ನೇತೃತ್ವದ ದ್ವಿ ಸದಸ್ಯ ಪೀಠ, ರಾಮ್‌ದೇವ್ ಮತ್ತು ಪತಂಜಲಿ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ-1954ರ ಸೆಕ್ಷನ್-3 ಮತ್ತು 4 ಅನ್ನು ಪ್ರಾಥಮಿಕವಾಗಿ ಉಲ್ಲಂಘಿಸಿದ್ದಾರೆ ಎಂದು ಟೀಕಿಸಿತ್ತು. ತಾತ್ಕಾಲಿಕವಾಗಿ ಪತಂಜಲಿ ಜಾಹೀರಾತು ನಿರ್ಬಂಧಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಸುಪ್ರೀಂ ಕೋರ್ಟ್ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆ ಸುಪ್ರೀಂ ಕೋರ್ಟ್ ಗರಂ ಆಗಿ, ನಮ್ಮ ಆದೇಶಗಳನ್ನು ನಿರ್ಲಕ್ಷ್ಯಿಸಿದ್ದೀರಿ. ಈ ಹಿನ್ನಲೆ ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಕೋರ್ಟ್ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿತ್ತು. ಪತಂಜಲಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್ ರೊಹ್ಟಗಿ ರಾಮದೇವ್ ಪ್ರಕರಣಕ್ಕೆ ಹೇಗೆ ಸಂಬಂಧಿಸಿದ್ದಾರೆ, ಅವರಿಗೆ ಯಾಕೆ ಸಮನ್ಸ್? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನೀವೂ ವಿಚಾರಣೆ ಹಾರಾಗುತ್ತಿದ್ದೀರಿ, ಹಾಜರಾಗಬೇಕು ಎಂದಷ್ಟೆ ಹೇಳಿತು.
ನಂತರ ಮುಕುಲ್ ರೋಹ್ಟಗಿ ಅವರು ಕಾನೂನು ಉಲ್ಲಂಘನೆ ನ್ಯಾಯಾಲಯದ ನಿಂದನೆ ಅಲ್ಲ ಮತ್ತು ತೆರೆದ ನ್ಯಾಯಾಲಯದಲ್ಲಿ ಹಾಜರಾಗುವ ಅವಶ್ಯಕತೆ ಏನಿದೆ ಎಂಬುದನ್ನು ಆದೇಶದಲ್ಲಿ ದಾಖಲಿಸಬೇಕು ಎಂದು ಹೇಳಿದರು. ಆದರೆ ನ್ಯಾಯಾಲಯ ಮಣಿಯದೇ ರಾಮ್‌ದೇವ್ ಖುದ್ದು ಹಾಜರಾಗಬೇಕು, ಇಲ್ಲದಿದ್ದರೆ, ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.