– ಏಪ್ರಿಲ್ 10ಕ್ಕೆ ವಿಚಾರಣೆ ಮುಂದೂಡಿಕೆ – ಖುದ್ದು ಹಾಜರಾಗಲು ಸೂಚನೆ
ನವದೆಹಲಿ: ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ (Acharya Balkrishna) ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಕೋರಿದ ಕ್ಷಮೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.
ಭಾರತೀಯ ವೈದ್ಯಕೀಯ ಸಂಸ್ಥೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಹಿಮಕೊಹ್ಲಿ (Hima Kohli) ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಮಂಗಳವಾರವಾದ ಇಂದು ಕೋರ್ಟ್ ಮುಂದೆ ಹಾಜರಾಗಿದ್ದ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ (Baba Ramdev) ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದೆ. ಇದನ್ನೂ ಓದಿ: ಸುಳ್ಳು ಜಾಹೀರಾತು, ಸುಪ್ರೀಂ ಚಾಟಿ ಬಳಿಕ ಕ್ಷಮೆ ಕೋರಿದ ಬಾಬಾ ರಾಮ್‌ದೇವ್
ಕಳೆದ ನವೆಂಬರ್‌ನಲ್ಲಿ ಪತಂಜಲಿ ಸಂಸ್ಥೆ ಪರ ವಕೀಲರು ನ್ಯಾಯಾಲಯದ ಮುಂದೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ತಡೆಯುವುದಾಗಿ ಭರವಸೆ ನೀಡಿದ ಹೊರತಾಗಿಯೂ ಪತಂಜಲಿ ಸಂಸ್ಥೆ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿತ್ತು. ಈ ಹಿನ್ನಲೆ ಕೋರ್ಟ್ ಫೆಬ್ರವರಿ 27 ರಂದು ಪತಂಜಲಿ ಸಂಸ್ಥೆ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರಾದ ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು, ಖುದ್ದು ಹಾಜರಾಗಲು ಸೂಚಿಸಿತ್ತು.
ಮಂಗಳವಾರ (ಏಪ್ರಿಲ್ 2) ಕೋರ್ಟ್ ಮುಂದೆ ಹಾಜರಾದ ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್ ಬೇಷರತ್ ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸಿದರು. ಅಫಿಡೆವಿಟ್ ನಲ್ಲಿ ಜಾಹೀರಾತು ಪ್ರಸಾರಕ್ಕೆ ತಡೆ ನೀಡುವ ಆದೇಶ ನಮ್ಮ ಮಾಧ್ಯಮ ವಿಭಾಗಕ್ಕೆ ತಿಳಿದಿರಲಿಲ್ಲ ಹೀಗಾಗೀ ತಪ್ಪಾಗಿದೆ ಎಂದು ಆಚಾರ್ಯ ಬಾಲಕೃಷ್ಣ ಕ್ಷಮೆ ಕೇಳಿದ್ದರು, ಆದರೆ ಈ ಕಾರಣವನ್ನು ಕೋರ್ಟ್ ನಿರಾಕರಿಸಿತು. ಇದನ್ನೂ ಓದಿ: ಕಾಂಗ್ರೆಸ್‌ಗೆ ಕೇಂದ್ರದಿಂದ ಬಿಗ್ ರಿಲೀಫ್ – ಚುನಾವಣೆ ಮುಗಿಯವರೆಗೂ ತೆರಿಗೆ ವಸೂಲಿ ಇಲ್ಲ
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಈ ವಿಷಯದಲ್ಲಿ ʻಅಜ್ಞಾನವನ್ನು ತೋರಿಸಲುʼ ಸಾಧ್ಯವಿಲ್ಲ ಮತ್ತು ಮಾಧ್ಯಮ ವಿಭಾಗವನ್ನು ʻಸ್ವತಂತ್ರ ದ್ವೀಪʼ ಎಂದು ಪರಿಗಣಿಸಲಾಗುವುದಿಲ್ಲ. ಒಮ್ಮೆ ನ್ಯಾಯಾಲಯಕ್ಕೆ ಭರವಸೆ ನೀಡಿದರೆ ನಂತರ ಅದನ್ನು ಸಂಪೂರ್ಣವಾಗಿ ಪಾಲಿಸಬೇಕು. ಕೆಳ ಹಂತಕ್ಕೆ ನಿರ್ದೇಶಿಸುವುದು ಯಾರ ಕರ್ತವ್ಯ? ಎಂದು ನ್ಯಾಯಮೂರ್ತಿ ಹಿಮ ಕೊಹ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಚಾರ್ಯ ಬಾಲಕೃಷ್ಣ ಪರ ವಕೀಲರು ಇದರಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡರು, ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ನ್ಯಾ. ಹಿಮ ಕೊಹ್ಲಿ, ನಿಮ್ಮ ಪಶ್ಚಾತ್ತಾಪವು ನ್ಯಾಯಾಲಯಕ್ಕೆ ಸಾಕಾಗದೇ ಇರಬಹುದು. ಈಗ ನೀವು ಕ್ಷಮಿಸಿ ಎಂದು ಹೇಳಿದ್ದಕ್ಕೆ, ನಾವು ಕ್ಷಮಿಸಿದ್ದೇವೆ ಅಂತ ಹೇಳಬಹುದು. ಅಂತಹ ವಿವರಣೆಯನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ, ನಿಮ್ಮ ಮಾಧ್ಯಮ ವಿಭಾಗವು ಸ್ವತಂತ್ರ ಇಲಾಖೆಯಲ್ಲ, ಅಲ್ಲವೇ? ನ್ಯಾಯಾಲಯದ ವಿಚಾರಣೆಯಲ್ಲಿ ಏನಾಗುತ್ತಿದೆ ತಿಳಿದಿಲ್ಲ ಎಂದರೆ ಹೇಗೆ? ಈ ರೀತಿ ಸಮಾಧಾನಪಡಿಸುವ ಮಾತುಗಳು ಬೇಡ ಎಂದು ಅಸಮಾಧಾನ ಹೊರಹಾಕಿದರು.
ಬಳಿಕ ಕೋರ್ಟ್ ಮುಂದೆ ಹಾಜರಾಗಿದ್ದ ಯೋಗ ಗುರು ಬಾಬಾ ರಾಮದೇವ್ ಯಾವುದೇ ಅಫಿಡೆವಿಟ್ ಸಲ್ಲಿಸಿದಿರುವುದು ಗಮನಿಸಿದ ಕೋರ್ಟ್ ಇದನ್ನು ಪ್ರಶ್ನಿಸಿತು. ಈ ವಿಷಯವನ್ನು ಅದರ ತಾರ್ಕಿಕ ತೀರ್ಮಾನಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಸ್ಪಷ್ಟಪಡಿಸಿತು. ಇದಕ್ಕೆ ಬಾಬಾ ರಾಮ್‌ದೇವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್, ಕಕ್ಷಿದಾರರು ಭೌತಿಕವಾಗಿ ಕೋರ್ಟ್‌ಗೆ ಹಾಜರಾಗಿದ್ದಾರೆ, ವೈಯಕ್ತಿಕವಾಗಿ ಕ್ಷಮೆಯಾಚಿಸಲು ಸಿದ್ಧರಾಗಿದ್ದಾರೆ. ಅಫಿಡೆವಿಟ್ ಮೂಲಕ ಕ್ಷಮೆ ಕೋರುವುದಾದರೆ ಸಿದ್ಧ ಎಂದು ಹೇಳಿದರು.
ಒದಕ್ಕೆ ಒಪ್ಪದ ಕೋರ್ಟ್, ಸಂಸ್ಥೆಯ ಸಹ ಸಂಸ್ಥಾಪಕರಾಗಿರುವುದರಿಂದ ನ್ಯಾಯಾಲಯದ ಆದೇಶದ ಬಗ್ಗೆ ಅವರಿಗೆ ತಿಳಿದಿಲ್ಲ ಅಂತ ನಂಬೋದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಅವರು ನಮ್ಮ ಆದೇಶದ 24 ಗಂಟೆಗಳ ಒಳಗೆ ಪತ್ರಿಕಾಗೋಷ್ಠಿ ಸಹ ಮಾಡಿದ್ದಾರೆ. ನೀವು ಆದೇಶದ ಬಗ್ಗೆ ತಿಳಿದಿದ್ದೀರಿ ಮತ್ತು ಅದರ ಹೊರತಾಗಿಯೂ ಉಲ್ಲಂಘಿಸಿದ್ದೀರಿ ಎಂದು ನಿಮ್ಮ ನಡುವಳಿಕೆ ತೋರಿಸುತ್ತದೆ ಎಂದು ಹೇಳಿತು. ಇದನ್ನೂ ಓದಿ: ಬಾವನನ್ನು ಗೆಲ್ಲಿಸಲು ಪಣ – ಬೆಂಗಳೂರು ಗ್ರಾಮಾಂತರವನ್ನು ಪ್ರತಿಷ್ಠೆಯಾಗಿ ಹೆಚ್‌ಡಿಕೆ ತೆಗೆದುಕೊಂಡಿದ್ದು ಯಾಕೆ?
ವಾದ-ಪ್ರತಿವಾದದ ಬಳಿಕ ಕೋರ್ಟ್ ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿತು. ಅಲ್ಲದೇ ಮುಂದಿನ ವಿಚಾರಣೆಗೂ ವೈಯಕ್ತಿಕವಾಗಿ ಹಾಜರಾಗಬೇಕು, ಜೊತೆಗೆ ಪತಂಜಲಿ ಸಂಸ್ಥೆ ಮತ್ತು ಅದರ ಆಡಳಿತ ಮಂಡಳಿಗೆ ಕ್ಷಮಾಪಣೆಯನ್ನು ಅಫಿಡವಿಟ್ ಮೂಲಕ ಸಲ್ಲಿಸಲು ಪೀಠ ಆದೇಶಿಸಿತು.