ಆಂಟಿಗುವಾ: ಆಸ್ಟ್ರೇಲಿಯಾದ (Australia) ಸ್ಟಾರ್ ಕ್ರಿಕೆಟರ್ ಪ್ಯಾಟ್ ಕಮ್ಮಿನ್ಸ್ ಟಿ20 ವಿಶ್ವಕಪ್‍ನಲ್ಲಿ (T20 World Cup 2024) ಮತ್ತೊಮ್ಮೆ ಬೌಲಿಂಗ್‍ನಲ್ಲಿ ಮಿಂಚಿದ್ದಾರೆ. ಜೂ.20 ರಂದು ನಡೆದ ಸೂಪರ್-8 ಪಂದ್ಯದಲ್ಲಿ ಬಾಂಗ್ಲಾ (Bangladesh) ತಂಡದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ 17 ವರ್ಷಗಳ ಬಳಿಕ ಈ ಸಾಧನೆಗೈದ ಆಸ್ಟ್ರೇಲಿಯಾದ 2ನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಸ್ಟೇಡಿಯಂನಲ್ಲಿ ನಡೆದ 4ನೇ ಸೂಪರ್ 8 ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಮಾಡಿದ ಬಾಂಗ್ಲಾದೇಶದ ತಂಡ 140 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ತೌಹಿದ್ ಹೃದೋಯ್ (40) ಹಾಗೂ ನಾಯಕ ಶಂಟೋ 41 ರನ್‍ಗಳಿಸಿದರು.
ಈ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದುಲ್ಲಾ, ಮಹೇದಿ ಹಸನ್ ಮತ್ತು ತೌಹಿದ್ ಹೃದಯ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ಕಿತ್ತರು. ಪ್ರಸಕ್ತ ವಿಶ್ವಕಪ್‍ನಲ್ಲಿ ಇದು ಮೊದಲ ಹ್ಯಾಟ್ರಿಕ್ ಆಗಿದ್ದು, ಟಿ-20 ವಿಶ್ವಕಪ್‍ನಲ್ಲಿ ಈ ದಾಖಲೆ ಬರೆದ ಏಳನೇ ಬೌಲರ್ ಅವರಾಗಿದ್ದಾರೆ. ಕಮ್ಮಿನ್ಸ್ ಆಸ್ಟ್ರೇಲಿಯಾ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. 2007 ರಲ್ಲಿ, ಬ್ರೆಟ್ಲಿ ಬಾಂಗ್ಲಾದೇಶದ ವಿರುದ್ಧವೇ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಆಗಿದ್ದರು.
ಟಾಸ್ ಸೋತ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ನಾಯಕ ಶಾಂಟೊ (41) ಮತ್ತು ತೌಹಿದ್ (40) ಭರ್ಜರಿ ಬ್ಯಾಟಿಂಗ್ ಮಾಡಿ ಉತ್ತಮ ಮೊತ್ತ ಕಲೆ ಹಾಕಿಕೊಟ್ಟಿದ್ದರು. ಇವರಿಬ್ಬರನ್ನು ಹೊರತುಪಡಿಸಿ ಉಳಿದವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಕಾರಣ ಬಾಂಗ್ಲಾ ಸಾಧಾರಣ ಸ್ಕೋರ್‍ಗೆ ಕುಸಿಯಿತು. ಕಮ್ಮಿನ್ಸ್ (3/29) ಜೊತೆಗೆ ಆಡಮ್ ಝಂಪಾ (2/24) ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮ್ಯಾಕ್ಸ್‍ವೆಲ್, ಸ್ಟೊಯಿನಿಸ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.
ಬಾಂಗ್ಲ ನೀಡಿದ ಗುರಿ ಬೆನ್ನಟ್ಟಿದ ಆಸೀಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆಸ್ಟ್ರೇಲಿಯಾ 11.2 ಓವರ್‍ಗಳಲ್ಲಿ 2 ವಿಕೆಟ್‍ಗಳ ನಷ್ಟಕ್ಕೆ 100 ರನ್‍ಗಳನ್ನು ಕಲೆ ಹಾಕಿತ್ತು. ಡೇವಿಡ್ ವಾರ್ನರ್ (55*) ಮತ್ತು ಗ್ಲೆನ್ ಮ್ಯಾಕ್ಸ್‍ವೆಲ್ (14*) ಕ್ರೀಸ್‍ನಲ್ಲಿದ್ದರು. ಈ ವೇಳೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಬಳಿಕ ಡಿಎಲ್‍ಎಸ್ ನಿಯಮದ ಅಡಿ ಅಂಪೈರ್‌ಗಳು ಆಸೀಸ್ ತಂಡಕ್ಕೆ 28 ರನ್‍ಗಳ ಜಯ ಘೋಷಿಸಿದರು.
ಟಿ20 ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಬೌಲರ್‌ಗಳು
ಬ್ರೆಟ್ ಲೀ (ಆಸ್ಟ್ರೇಲಿಯಾ) – ಬಾಂಗ್ಲಾದೇಶ, ಕೇಪ್‍ಟೌನ್, 2007
ಕರ್ಟಿಸ್ ಕ್ಯಾಂಫರ್ (ಐರ್ಲೆಂಡ್)- ನೆದಲೆರ್ಂಡ್, ಅಬುಧಾಬಿ, 2021
ವನಿಂದು ಹಸರಂಗ (ಶ್ರೀಲಂಕಾ)- ದಕ್ಷಿಣ ಆಫ್ರಿಕಾ, ಶಾರ್ಜಾ, 2021
ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ)- ಇಂಗ್ಲೆಂಡ್, ಶಾರ್ಜಾ, 2021
ಕಾರ್ತಿಕ್ ಮೇಯಪ್ಪನ್ (ಯುಎಇ)- ಶ್ರೀಲಂಕಾ, ಗೀಲಾಂಗ್, 2022
ಜೋಶುವಾ ಲಿಟಲ್ (ಐರ್ಲೆಂಡ್)- ನ್ಯೂಜಿಲೆಂಡ್, ಅಡಿಲೇಡ್, 2022
ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ)- ಬಾಂಗ್ಲಾದೇಶ, ಆಂಟಿಗುವಾ, 2024