ಚಿತ್ರದುರ್ಗ: ಪ್ಯಾಸೆಂಜರ್ ರೈಲು ಹಳಿ ತಪ್ಪಿ, ಪ್ರಯಾಣಿಕರು ದಿಕ್ಕುತೋಚದೇ ಪರದಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 13ರಲ್ಲಿರುವ ರೈಲ್ವೆ ಸೇತುವೆ ಬಳಿ ಘಟನೆ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಹಳಿ ತಪ್ಪಿದ ನಂತರವೂ ರೈಲು ಸುಮಾರು 1 ಕಿ.ಮೀವರೆಗೆ ಕ್ರಮಿಸಿದ್ದು, ಚಾಲಕ ರೈಲನ್ನು ನಿಯಂತ್ರಿಸಿದ್ದರಿಂದ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಮಂಗಳವಾರ ರಾತ್ರಿ 10ಕ್ಕೆ ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಪ್ಯಾಸೆಂಜರ್ ರೈಲು ಹೊರಟಿದ್ದು, ರೈಲ್ವೆ ಹಳಿಯಲ್ಲಿ ಬಿರುಕು ಉಂಟಾಗಿದ್ದರಿಂದ ಘಟನೆ ನಡೆದಿರುವ ಶಂಕೆಯಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹಳಿ ತಪ್ಪಿದ ರೈಲನ್ನು ಸರಿ ಮಾರ್ಗಕ್ಕೆ ತರಲು ಹರಿಹರದಿಂದ ತಜ್ಞರ ತಂಡ ಹೊರಟಿದೆ. ಅರಸೀಕೆರೆಯಿಂದಲೂ ಒಂದು ತಜ್ಞರ ತಂಡ ಚಿತ್ರದುರ್ಗದತ್ತ ಧಾವಿಸಿದೆ. ಮೈಸೂರಿನಿಂದ ಡಿಆರ್‍ಎಂ ಮತ್ತು ಡಿಸಿಎಂ ಅಧಿಕಾರಿಗಳ ತಂಡ ಚಿತ್ರದುರ್ಗಕ್ಕೆ ದೌಡಾಯಿಸಿವೆ.
ರೈಲ್ವೆ ಹಳಿಯನ್ನ ದುರಸ್ಥಿ ಮಾಡಲು 2-3 ಗಂಟೆಗಳ ಸಮಯ ತಗುಲಬಹುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲಿನಲ್ಲಿದ್ದ 700-800 ಜನ ಪ್ರಯಾಣಿಕರು ಚಿತ್ರದುರ್ಗದಿಂದ ಹೊಸಪೇಟೆ ಕಡೆಗೆ ಪ್ರಯಾಣಿಸುತ್ತಿದ್ದರು. ಘಟನೆಯಿಂದ ಭಯಭೀತರಾಗಿರುವ ಪ್ರಯಾಣಿಕರನ್ನ ಅವರವರ ಊರುಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. 11 ಬೋಗಿಗಳಲ್ಲಿದ್ದ ಪ್ರಯಾಣಿಕರು ಲಗೇಜ್ ಸಮೇತ ಬಸ್ ನಿಲ್ದಾಣಕ್ಕೆ ತೆರಳಲು ಪರದಾಡಿದ್ದಾರೆ. ರಾಯದುರ್ಗಕ್ಕೆ ತೆರಳುತ್ತಿದ್ದ ಅಂಗವಿಕಲರಾದ ಮಲ್ಲಿಕಾರ್ಜುನ ಎಂಬವರು ಕೆಳಗಿಳಿಯಲಾಗದೆ ಬೋಗಿಯಲ್ಲೇ ಕುಳಿತಿದ್ರು. ನಂತರ ನಗರಸಭೆ ಸದಸ್ಯ ತಿಮ್ಮಣ್ಣ ಮಲ್ಲಿಕಾರ್ಜುನ ಅವರಿಗೆ ಸಹಾಯ ಮಾಡಿದ್ರು.