ಹೈದರಾಬಾದ್: 4 ಇಸ್ತ್ರಿ ಪೆಟ್ಟಿಗೆಯಲ್ಲಿ ಬರೋಬ್ಬರಿ 3.45 ಕೋಟಿ ಮೌಲ್ಯದ ಚಿನ್ನವನ್ನು ಅಡಿಗಿಸಿಟ್ಟು, ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ 3.46 ಕೋಟಿ ರೂಪಾಯಿ ಮೌಲ್ಯದ 9.21 ಕೆಜಿ ಚಿನ್ನವನ್ನು ಅಬಕಾರಿ ಇಲಾಖೆಯ ಗುಪ್ತಚರ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ದುಬೈ ಮೂಲದವನೆಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಈ ಚಾಲಾಕಿ ಆರೋಪಿ ಚಿನ್ನದ ಬಾರ್ ಗಳನ್ನು ಇಸ್ತ್ರಿ ಪೆಟ್ಟಿಗೆಯ ಹೀಟಿಂಗ್ ಕಾಯಿಲ್ ಅಳವಡಿಸುವ ಭಾಗದಲ್ಲಿ ಜೊಡಿಸಿ, ಅವುಗಳನ್ನು ಚೆಕ್ಡ್-ಇನ್ ಬ್ಯಾಗೇಜ್‍ನಲ್ಲಿ ಹಾಕಿ ಭದ್ರವಾಗಿ ಪ್ಯಾಕ್ ಮಾಡಿದ್ದನು.
Advertisement
Advertisement
ಆದರೆ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಮೇರೆಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆರೋಪಿ ಹಾಗೂ ಆತನ ಬ್ಯಾಗ್‍ಗಳನ್ನು ಪರಿಶೀಲನೆ ಮಾಡಿದಾಗ ಸತ್ಯ ಹೊರಬಿದ್ದಿದೆ. ಆರೋಪಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 3,46,48,096 ರೂಪಾಯಿ ಬೆಲೆ ಬಾಳುವ ನಾಲ್ಕು ವಿ-ಆಕಾರದ ಚಿನ್ನದ ಬಾರ್ ಗಳನ್ನು ಪೊಲೀಸರು ವಶಪಡಿಸಿಕೊಂಡು, ಆತನನ್ನು ಬಂಧಿಸಿದ್ದಾರೆ.
Advertisement
ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ಹಿನ್ನೆಲೆ ಹಾಗೂ ಆತನ ಬಳಿ ಚಿನ್ನ ಹೇಗೆ ಬಂತು? ಎಲ್ಲಿಗೆ ಇದನ್ನು ಸಾಗಿಸುತ್ತಿದ್ದ ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.