ಕನ್ನಡ ಚಿತ್ರರಂಗಕ್ಕೆ ಆಲದಮರ ಎಂದು ಕರೆಸಿಕೊಳ್ಳುವ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಅವರ ಬದುಕು ಆದರ್ಶಪ್ರಾಯ. ವಿದ್ಯೆ ಇಲ್ಲದಿದ್ದರೂ ವ್ಯವಹಾರದಲ್ಲಿ ಅವರು ತೊಡಗಿಸಿಕೊಂಡ ರೀತಿ ವಿಸ್ಮಯವೇ ಸರಿ.
ಸಿನಿಮೋದ್ಯಮದಲ್ಲಿ ಅವರ ಕಾರ್ಯಪ್ರವೃತ್ತಿ ಅದೆಷ್ಟೇ ವರ್ಷಗಳು ಉರುಳಿದರೂ ಅವಿಸ್ಮರಣೀಯ. ಯಾಕಂದ್ರೆ ವಜ್ರೇಶ್ವರಿ ಕಂಬೈನ್ಸ್ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಕಟ್ಟಿ ಅದರಿಂದ ವರ್ಷಕ್ಕೆ ಹತ್ತಿಪ್ಪತ್ತು ಸಿನಿಮಾ ಕೊಟ್ಟ ದಾಖಲೆಯನ್ನ ಕನ್ನಡ ಚಿತ್ರರಂಗ ಮರೆಯುವುದಿಲ್ಲ. ಇದೀಗ ಇದೇ ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟುಹಾಕಿರುವ ಕನಸಿನ ಕೂಸು ಬೆಳೆದು ಹೆಮ್ಮರವಾಗಿದೆ. ಅವರಿಲ್ಲದಿದ್ದರೂ ಅವರು ನೆಟ್ಟ ಆಲದಮರ ಚಿತ್ರರಂಗಕ್ಕೆ ಆಶ್ರಯ ನೀಡಿದೆ. ಆ ಚಿತ್ರ ನಿರ್ಮಾಣ ಸಂಸ್ಥೆಗೀಗ 50 ವರ್ಷದ ಸಂಭ್ರಮ.ಇದನ್ನೂ ಓದಿ: ದರ್ಶನ್‌ಗೆ ನೋ ಟೆನ್ಷನ್ – ಜಾಲಿ ಮೂಡಲ್ಲಿ ಥಾಯ್ಲೆಂಡ್‌ನಲ್ಲಿ ಬಿಂದಾಸ್ ಪಾರ್ಟಿ
1975ರಲ್ಲಿ ಡಾ.ರಾಜ್‌ಕುಮಾರ್ ಅವರ ನಟನೆಯಲ್ಲಿ ತ್ರಿಮೂರ್ತಿ ಸಿನಿಮಾ ನಿರ್ಮಾಣ ಮಾಡುವ ಮೂಲಕ ವಜ್ರೇಶ್ವರಿ ಕಂಬೈನ್ಸ್ ತಮ್ಮ ಮೊದಲ ಹೆಜ್ಜೆ ಇಡ್ತು. ಮೊದಲ ಚಿತ್ರವೇ ಯಶಸ್ಸಿನ ರುಚಿ ಕೊಡ್ತು. ಅಲ್ಲಿಂದ ಕಷ್ಟ ನಷ್ಟಗಳನ್ನ ಮೆಟ್ಟಿನಿಂತು ರಾಜ್‌ಕುಮಾರ್ ಅವರ ದಿಟ್ಟ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಪತಿಯ ಸಿನಿಮಾಗಳನ್ನ ನಿರ್ಮಾಣ ಮಾಡ್ತಾ ಬಂದ್ರು. ತಾವೇ ನಿರ್ದೇಶಕರನ್ನ ಹುಡುಕಿ, ಕಥೆಯನ್ನೂ ಕೊಟ್ಟು ಸಿನಿಮಾ ಮಾಡಲಾರಂಭಿಸಿದ್ರು. ಹೀಗೆ ಶುರುವಾದ ವಜ್ರೇಶ್ವರಿ ಕಂಬೈನ್ಸ್ ಹೆಸರಿಗೆ ತಕ್ಕಂತೆ ವಜ್ರದಂತೆ ಪ್ರಜ್ವಲಿಸುತ್ತಿದೆ.
ಪಾರ್ವತಮ್ಮ ಅವರ ಅಗಲಿಕೆಯ ಬಳಿಕ ಪುತ್ರರಾದ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅದರ ಜವಾಬ್ದಾರಿ ಹೊತ್ತಿದ್ದರು. ಇದರದ್ದೇ ನೆರಳಲ್ಲಿ ಚಿಗುರಿಕೊಂಡಿದ್ದು ಪಿಆರ್‌ಕೆ ಫಿಲಂಸ್. ಒಂದರ್ಥದಲ್ಲಿ ವಜ್ರೇಶ್ವರಿ ಸಂಸ್ಥೆಯ ಕುಡಿ ಇದ್ದಂತೆ. ಇದೀಗ ಎಕ್ಕ ಸಿನಿಮಾ ಕೂಡ ಇದೇ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದು, ಇದೀಗ 50 ವರ್ಷವನ್ನು ಪೂರೈಸಿರುವ ಸಂತಸದಲ್ಲಿದೆ. ಈ ಖುಷಿಯನ್ನ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಪ್ರೀತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ನಟ-ನಟಿಯರು, ನಿರ್ದೇಶಕರು, ತಂತ್ರಜ್ಞರು, ಪೋಷಕ ನಟರು ಕಥೆಗಾರರು ಹೀಗೆ ಇಡೀ ಚಿತ್ರರಂಗಕ್ಕೆ ನೆರಳಾಗಿದ್ದ ಚಿತ್ರಸಂಸ್ಥೆ ವಜ್ರೇಶ್ವರಿ ಕಂಬೈನ್ಸ್. ಇದರ ಆಶ್ರಯದಲ್ಲೇ ಬದುಕು ಕಟ್ಟಿಕೊಂಡ ಅದೆಷ್ಟೋ ಕಲಾವಿದರು ಈಗ ಸ್ವತಂತ್ರವಾಗಿ ವಿರಮಿಸುತ್ತಿದ್ದಾರೆ. ಹೀಗಾಗಿ ವಜ್ರೇಶ್ವರಿ ಕಂಬೈನ್ಸ್ನ ಈ ಅವಿಸ್ಮರಣೀಯ ಹೆಜ್ಜೆಯನ್ನ ವೀಡಿಯೋ ರಿಲೀಸ್ ಮಾಡುವ ಮುಖಾಂತರ ನೆನೆದ ಸಂಸ್ಥೆ ತಮ್ಮ ಸಂಸ್ಥೆಯಲ್ಲಿ ನಿರ್ಮಾಣವಾದ ಕೆಲವು ಪ್ರಮುಖ ಚಿತ್ರಗಳ ವೀಡಿಯೋ ತುಣುಕನ್ನೂ ಹಂಚಿಕೊಂಡಿದೆ. ಸದ್ಯಕ್ಕೆ ವಜ್ರೇಶ್ವರಿ ಸಂಸ್ಥೆಯನ್ನ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಹೀಗೆ ವಜ್ರೇಶ್ವರಿ ಕಂಬೈನ್ಸ್ ಚಿತ್ರ ನಿರ್ಮಾಣ ಸಂಸ್ಥೆ ಸುವರ್ಣ ಮಹೋತ್ಸವದ ವರ್ಷದಲ್ಲಿದೆ.ಇದನ್ನೂ ಓದಿ: ಆಷಾಢದ 4ನೇ ಶುಕ್ರವಾರ – ಚಾಮುಂಡಿ ತಾಯಿಗೆ ಸಿಂಹವಾಹಿನಿ ಅಲಂಕಾರ