ಬೆಂಗಳೂರು: ಹಿರಿಯ ನಿರ್ಮಾಪಕಿ, ಡಾ. ರಾಜ್‍ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಬಾರದ ಲೋಕದತ್ತ ಪ್ರಯಾಣ ಬೆಳೆಸಿದ್ದಾರೆ.
ಇಂದು ಸಂಜೆ ಸುಮಾರು 5.30ರ ವೇಳೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಪಾರ್ವತಮ್ಮ ಅವರ ಅಂತ್ಯಕ್ರಿಯೆ ನೆರವೇರಿತು. ಕಂಠೀರವ ಸ್ಟುಡಿಯೋದಲ್ಲಿ ಡಾ ರಾಜ್‍ಕುಮಾರ್ ಅವರ ಸಮಾಧಿ ಬಲಭಾಗದಲ್ಲಿಯೇ ಪಾರ್ವತಮ್ಮ ಅವರ ಅಂತ್ಯಕ್ರಿಯೆ ಮಾಡಲಾಯ್ತು.
Advertisement
Advertisement
ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸಿದ್ರು. ಗೋವಿಂದನ ನಾಮ ಸ್ಮರಣೆ ಮಾಡುತ್ತಾ, ಶಂಕ ಜಾಗಟೆ ಬಾರಿಸುತ್ತಾ ಪೂಜೆ ಮಾಡಲಾಯ್ತು. ಈಡಿಗ ಸಂಪ್ರದಾಯದಂತೆ ವಿಧಿವಿಧಾನಗಳನ್ನ ನೆರವೇರಿಸಲಾಯ್ತು. ಪೊಲೀಸರು 3 ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದ್ರು.
Advertisement
Advertisement
ಸಚಿವರಾದ ಕೆಜೆ ಜಾರ್ಜ್, ಡಿಕೆ ಶಿವಕುಮಾರ್ ಸೇರಿದಂತೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಮತ್ತು ರಾಜ್‍ಕುಮಾರ್ ಕುಟುಂಬಸ್ಥರು ಈ ವೇಳೆ ಉಪಸ್ಥಿತರಿದ್ರು.
ಕಂಠೀರವ ಸ್ಟುಡಿಯೋದೊಳಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು. ಸಾರ್ವಜನಿಕರು ಒಳನುಗ್ಗಲು ಯತ್ನಿಸಿ ನೂಕುನುಗ್ಗಲು ಉಂಟಾಗಿದ್ದರಿಂದ ಲಘು ಲಾಠಿಪ್ರಹಾರ ನಡೆಸಲಾಯ್ತು.
ಬಹು ಅಂಗಾಂಗ ವೈಫಲ್ಯದಿಂದ ಬಳುತ್ತಿದ್ದ ಪಾರ್ವತಮ್ಮ ಅವರು ಕಳೆದ 15 ದಿನಗಳಿಂದ ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ.
ಓರ್ವ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರ್ತಾರೆ ಎಂಬ ಮಾತಿದೆ. ಈ ಮಾತು ಅಕ್ಷರಶಃ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸೂಕ್ತವಾಗಿದೆ. ಡಾ.ರಾಜ್ ಕುಮಾರ್ ಎಂಬ ಮಹಾನ್ ನಟನ ಹಿಂದೆ ಪಾರ್ವತಮ್ಮ ರಾಜ್ ಕುಮಾರ್ ದೊಡ್ಡ ಶಕ್ತಿ ಆಗಿದ್ದರು. ಡಾ.ರಾಜ್ ಕುಮಾರ್ ಓರ್ವ ವ್ಯಕ್ತಿಯಾಗಿ, ನಟರಾಗಿ, ನಟಸಾರ್ವಭೌಮರಾಗಿ, ಅಭಿಮಾನಿಗಳ ಪಾಲಿಗೆ ಅಣ್ಣಾವ್ರಾಗಿ ರೂಪುಗೊಳ್ಳಲು ಪಾರ್ವತಮ್ಮ ಅವರ ಕಾಣಿಕೆ ದೊಡ್ಡದು. ರಾಜ್ ಕುಮಾರ್ ಅವರಿಗೆ ಪಾರ್ವತಮ್ಮ ಕೇವಲ ಪತ್ನಿಯಾಗಿ ಮಾತ್ರವಲ್ಲ ಗೆಳತಿ, ಮಾರ್ಗದರ್ಶಕಿ ಹಾಗೂ ವ್ಯಕ್ತಿತ್ವ ರೂಪಕಿ ಆಗಿದ್ದರು. ”ಪಾರ್ವತಿ ನನ್ನ ಪತ್ನಿ ಮಾತ್ರವಲ್ಲ, ನನ್ನ ತಾಯಿ ಎಂದು ಸ್ವತಃ ರಾಜ್ ಕುಮಾರ್ ಅವರೇ ಹಲವು ಬಾರಿ ಹೇಳಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.
ಮದುವೆ: ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಪಾರ್ವತಮ್ಮ ಕುಟುಂಬದವರು ಸಂಬಂಧಿಕರೇ ಆಗಿದ್ದರು. ಪಾರ್ವತಮ್ಮ ಹುಟ್ಟಿದ ಸಮಯದಲ್ಲಿ ಮನೆಗೆ ಬಂದಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ”ಇವಳೇ ನನ್ನ ಸೊಸೆ” ಎಂದು ಅಂದೇ ನಿರ್ಧರಿಸಿದ್ದರಂತೆ. ಇನ್ನು ರಾಜ್ ಕುಮಾರ್ ಕೂಡ ಸಂಗೀತ ಕಲಿಯಲು ಪಾರ್ವತಮ್ಮ ಅವರ ಮನೆಗೆ ಹೋಗುತ್ತಿದ್ದರಂತೆ. ಆಗಲೇ ಇಬ್ಬರಲ್ಲಿ ಪರಿಚಯ ಮೂಡಿತ್ತು.
1953ರ ಜೂನ್ 25 ರಂದು ರಾಜ್ ಕುಮಾರ್ ಅವರೊಂದಿಗೆ ಪಾರ್ವತಮ್ಮ ಅವರು ವಿವಾಹವಾದರು. ಆಗ ಅವರ ವಯಸ್ಸು ಕೇವಲ 14, ರಾಜ್ ಕುಮಾರ್ ಅವರ ವಯಸ್ಸು 24 ವರ್ಷ. ನಂಜನಗೂಡಿನ ರಾಣಪ್ಪ ಛತ್ರದಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. ದುರಾದೃಷ್ಟವಶಾತ್ ರಾಜ್ ಕುಮಾರ್ ತಂದೆ ಈ ಮದುವೆಗೂ ಮುಂಚೆ ವಿಧಿವಶರಾಗಿದ್ದರು.
ಅದೃಷ್ಟ ದೇವತೆ: ರಾಜ್ ಕುಮಾರ್ ಅವರಿಗೆ ಪಾರ್ವತಮ್ಮ ಅದೃಷ್ಟ ದೇವತೆ. ರಾಜ್ ಕುಮಾರ್ ಅವರನ್ನ ಪಾರ್ವತಮ್ಮ ಮದುವೆಯಾದಾಗ ರಾಜ್ ಅವರು ರಂಗಭೂಮಿ ಕಲಾವಿದರಾಗಿದ್ದರು. ಆದ್ರೆ ಮದುವೆಯ ನಂತರ ರಾಜ್ ಕುಮಾರ್ ಅವರಿಗೆ ಅದೃಷ್ಟ ಒಲಿಯುತ್ತೆ. ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಗುತ್ತೆ. ಅದು 1954 ರ ‘ಬೇಡರ ಕಣ್ಣಪ್ಪ’ ಚಿತ್ರ. ಅಲ್ಲಿವರೆಗೂ ಮುತ್ತುರಾಜ್ ಆಗಿದ್ದವರು ರಾಜ್ ಕುಮಾರ್ ಆಗಿ ಬದಲಾಗ್ತಾರೆ.
ದಿಟ್ಟ ನಿರ್ಮಾಪಕಿ : ಗಾಂಧಿನಗರದಲ್ಲಿ ಸಿನಿಮಾ ಮಾಡಿ ಹಣ ಕಳೆದುಕೊಂಡೆ, ಜೀವನ ಕಳೆದುಕೊಂಡೆ ಎಂದು ಹೇಳುವ ನಿರ್ಮಾಪಕರು ಕಾಣುತ್ತಾರೆ. ಆದ್ರೆ ಸಿನಿಮಾನೇ ಪ್ರಾಣ, ಸಿನಿಮಾನೇ ಉಸಿರು, ಸಿನಿಮಾದಿಂದಲೇ ಬದುಕು ಎಂದು ಬದುಕುತ್ತಾ, ಸಿನಿಮಾದಿಂದಲೇ ಎಲ್ಲವೂ ಸಿಕ್ಕಿದೆ ಎಂದು ಹೇಳಿಕೊಂಡ ದಿಟ್ಟ ಮಹಿಳೆ ಪಾರ್ವತಮ್ಮ ರಾಜ್ ಕುಮಾರ್. ಅದೇ ರೀತಿ ಯಶಸ್ವಿ ಸಿನಿಮಾಗಳನ್ನ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದ ದಿಟ್ಟ ನಿರ್ಮಾಪಕಿ ಎನಿಸಿಕೊಂಡರು. ಅದೊಂದು ಕಾಲದಲ್ಲಿ ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ರೆ, ನಿರ್ಮಾಪಕರಿಗೆ ನಷ್ಟವಾಗುತ್ತೆ ಎಂಬ ಮಾತು ಕೇಳಿಬಂತು. ಇದರಿಂದ ರಾಜ್ ಕುಮಾರ್ ಅವರು ಬೇಸರಗೊಂಡು, ನಮಗೆ ಸಿನಿಮಾ ಬೇಡ, ಊರಿಗೆ ಹೋಗಿ ಕೃಷಿ ಮಾಡಿ ಬದುಕೋಣ ಎಂದು ನಿರ್ಧರಿಸಿದ್ದರಂತೆ. ಇಂತಹ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ ಸಮಾಧಾನಪಡಿಸಿದ ಪಾರ್ವತಮ್ಮ ದಿಟ್ಟ ನಿರ್ಧಾರ ತೆಗೆದುಕೊಂಡರು. ಪೂರ್ಣಿಮಾ ಎಂಟರ್‍ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್ ಸ್ಥಾಪಿಸಿದರು. ಪತಿ, ಮಕ್ಕಳದ್ದು ಸೇರಿ 80ಕ್ಕೂ ಹೆಚ್ಚು ಚಿತ್ರ ನಿರ್ಮಿಸಿದ್ರು. ಮೊದಲ ಚಿತ್ರ ತ್ರಿಮೂರ್ತಿಯಿಂದ ಹಿಡಿದು ಶಬ್ಧವೇದಿವರೆಗೆ ಶೇಕಡಾ 90ರಷ್ಟು ಹಿಟ್ ಚಿತ್ರಗಳನ್ನು ಕೊಟ್ಟರು.
ಮೂರು ರತ್ನಗಳನ್ನ ಕನ್ನಡಕ್ಕೆ ಕೊಟ್ಟ ಪಾರ್ವತಮ್ಮ: ಪಾರ್ವತಮ್ಮ ಅವರು ಕೇವಲ ರಾಜ್ ಕುಮಾರ್ ಅವರಿಗೆ ಮಾತ್ರ ಶಕ್ತಿ ಆಗಿರಲಿಲ್ಲ. ತಮ್ಮ ಮೂವರು ಮಕ್ಕಳಿಗೂ ಕೂಡ ಪಾರ್ವತಮ್ಮ ಯಶಸ್ಸಿನ ಮೆಟ್ಟಿಲು ಆಗಿದ್ದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಎಂಬ ಮೂರು ರತ್ನಗಳನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ವಿತರಣೆಯಲ್ಲಿ ಬದಲಾವಣೆ ತಂದರು. ಶಿವರಾಜ್‍ಕುಮಾರ್‍ಗೆ ಆನಂದ್, ರಥಸಪ್ತಮಿ.. ರಾಘವೇಂದ್ರ ರಾಜ್‍ಕುಮಾರ್‍ಗೆ ನಂಜುಂಡಿ ಕಲ್ಯಾಣದಿಂದ ಹಿಡಿದು ಸ್ವಸ್ತಿಕ್‍ವರೆಗೂ ಹಲವು ಹಿಟ್ ಚಿತ್ರಗಳನ್ನು ನೀಡಿದ್ರು.
ಪಾರ್ವತಮ್ಮ ಕೃಪಾಕಟಾಕ್ಷದಿಂದ ಬಂದ ನಟಿಯರು: ಪಾರ್ವತಮ್ಮ ಅವರ ಆಶೀರ್ವಾದದಿಂದ ಅನೇಕ ಪ್ರತಿಭೆಗಳು ಇಂಡಸ್ಟ್ರಿಗೆ ಪರಿಚಯವಾಗಿದ್ದಾರೆ. ಸುಧಾರಾಣಿ, ಸರಳ, ವೀಣಾ, ವಿದ್ಯಾಶ್ರೀ, ಮಾಲಾಶ್ರೀ, ಮೋಹಿನಿ, ಮಮತಾಶ್ರೀ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ರಕ್ಷಿತಾ, ರಮ್ಯಾ ಹೀಗೆ ಇನ್ನೂ ಹಲವು ನಟಿಯರು ಬೆಳ್ಳಿತೆರೆ ಆಳಿದ್ದಾರೆ.
ಹೆಣ್ಣು ಮಕ್ಕಳ ಬದುಕಿಗೆ ಆಸರೆ : ಸಮಾಜದಲ್ಲಿ ತಿರಸ್ಕೃರಾದ ನಿರ್ಗತಿಕ ಮಹಿಳೆಯರು ಹಾಗೂ ಮಕ್ಕಳ ಪುನರ್ ವಸತಿಗಾಗಿ ಪಾರ್ವತಮ್ಮ ರಾಜಕುಮಾರ್ 1997ರಲ್ಲಿ ಈ ಸ್ವಯಂ ಸೇವಾ ಸಂಸ್ಥೆಯನ್ನ ಸ್ಥಾಪಿಸಿದ್ರು. ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಸ್ಥಾಪಿಸಿರುವ ಈ ಶಕ್ತಿಧಾಮದಲ್ಲಿ ಪ್ರಸ್ತುತ 40 ಮಹಿಳೆಯರು ಹಾಗೂ 14 ಮಕ್ಕಳು ಆಶ್ರಯ ಪಡೆದಿದ್ದಾರೆ. 1997 ರಲ್ಲಿ ಸ್ಥಾಪನೆಯಾದ ಶಕ್ತಿಧಾಮಕ್ಕೆ ಡಾ.ರಾಜ್‍ಕುಮಾರ್ ಮೊದಲ ಅಧ್ಯಕ್ಷರಾಗಿದ್ರು. ಈಗಲೂ ಶಕ್ತಿಧಾಮಕ್ಕೆ ಪಾರ್ವತಮ್ಮ ರಾಜ್‍ಕುಮಾರ್ ಗೌರವಾಧ್ಯಕ್ಷರಾಗಿದ್ದರು. ದೌರ್ಜನ್ಯ, ಶೋಷಣೆ, ಲೈಂಗಿಕ ಕಿರುಕುಳ ಹಾಗೂ ಯಾವುದೇ ವೈಯುಕ್ತಿಕ ಸಮಸ್ಯೆಗಳಿಗೆ ಒಳಗಾಗಿರುವ ಮಹಿಳೆಯರಿಗೆ ಶಕ್ತಿಧಾಮ ನೆಲೆಯಾಗಿದೆ.