ಬೆಂಗಳೂರು: ಪುನೀತ್ ರಾಜ್ ಕುಮಾರ್ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಬೇಕೆಂಬುದು ಪಾರ್ವತಮ್ಮನವರ ಕನಸಾಗಿತ್ತು. ಕಾದಂಬರಿಗಳನ್ನು ಓದುವ ಅತೀವ ಆಸಕ್ತಿ ಹೊಂದಿದ್ದ ಪಾರ್ವತಮ್ಮ ಸಿನಿಮಾ ಕಥೆಗಳನ್ನು ಆರಿಸುವಲ್ಲಿಯೂ ಸಿದ್ಧಹಸ್ತರಾಗಿದ್ದವರು. ಆದ್ದರಿಂದಲೇ ಕನ್ನಡದ ಪ್ರಸಿದ್ಧ ಸಾಹಿತಿ ಕುಂ.ವೀರಭದ್ರಪ್ಪನವರ ಕನಕಾಂಗಿ ಕಲ್ಯಾಣ ಕಾದಂಬರಿಯನ್ನು ಮೆಚ್ಚಿಕೊಂಡಿದ್ದರು. ಇದಕ್ಕೆ ಸಿನಿಮಾ ರೂಪ ಕೊಟ್ಟು, ತಮ್ಮ ಪುತ್ರ ಪುನೀತ್ ನಟಿಸಬೇಕೆಂಬ ಆಸೆ ಹೊಂದಿದ್ದರು. ಆದರೆ ಆ ನಂತರದಲ್ಲಿ ಅನಾರೋಗ್ಯಕ್ಕೀಡಾಗಿದ್ದ ಪಾರ್ವತಮ್ಮನವರ ಪಾಲಿಗೆ ತಮ್ಮ ಕನಸು ನನಸು ಮಾಡಿಕೊಳ್ಳುವ ಸುಯೋಗ ಕೂಡಿ ಬರಲೇ ಇಲ್ಲ.
Advertisement
ಪುನೀತ್ ರಾಜ್ ಕುಮಾರ್ ಅವರಿಗೂ ಕೂಡಾ ಅಮ್ಮನ ಕನಸನ್ನು ನನಸು ಮಾಡಲಾಗಲಿಲ್ಲ ಎಂಬ ಕೊರಗು ಇದ್ದೇ ಇತ್ತು. ಆದರೀಗ ಮತ್ತೆ ಕನಕಾಂಗಿ ಕಲ್ಯಾಣಕ್ಕೆ ಮುಹೂರ್ತ ನಿಗದಿಯಾಗೋ ಲಕ್ಷಣಗಳು ಕಾಣಿಸುತ್ತಿವೆ. ಇದೀಗ ಯುವರತ್ನ ಚಿತ್ರದಲ್ಲಿ ತೊಡಗಿಸಿಕೊಂಡಿರೋ ಪುನೀತ್ ಅದಾದ ನಂತರ ಜೇಮ್ಸ್ ಚಿತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಬಂದಿತ್ತು. ಆದರೆ ಅದರ ಜೊತೆಜೊತೆಗೇ ಕನಕಾಂಗಿ ಕಲ್ಯಾಣಕ್ಕೂ ಸಿದ್ಧತೆ ಮಾಡಿಕೊಳ್ಳಲು ಪುನೀತ್ ನಿರ್ಧರಿಸಿದ್ದಾರಂತೆ.
Advertisement
ಕುಂವೀ ಅವರ ಕನಕಾಂಗಿ ಕಲ್ಯಾಣವನ್ನು ಸಿನಿಮಾ ಮಾಡಬೇಕೆಂಬುದು ಪಾರ್ವತಮ್ಮನವರ ಕನಸಾಗಿತ್ತು. ಈ ಬಗ್ಗೆ ಖುದ್ದು ಕುಂವೀ ಅವರ ಬಳಿಯೂ ಅವರು ಮಾತುಕತೆ ನಡೆಸಿದ್ದರಂತೆ. ಕಾದಂಬರಿಯನ್ನು ಮೆಚ್ಚಿಕೊಳ್ಳುತ್ತಲೇ ಅದನ್ನು ಸಿನಿಮಾ ಮಾಡುವ ಪ್ರಸ್ತಾಪವನ್ನೂ ಇಟ್ಟಿದ್ದರಂತೆ. ಇದೀಗ ಅದೆಲ್ಲದಕ್ಕೂ ಮತ್ತೆ ಜೀವ ಬಂದಿದೆ. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆಂಬ ಪ್ರಶ್ನೆಯ ಬೆಂಬಿದ್ದರೆ ಅದು ದುನಿಯಾ ಸೂರಿಯವರತ್ತ ಬೊಟ್ಟು ಮಾಡುತ್ತದೆ. ಪಾರ್ವತಮ್ಮ ಜಾಕಿ ಚಿತ್ರದ ಸಂದರ್ಭದಲ್ಲಿಯೇ ಕನಕಾಂಗಿ ಕಲ್ಯಾಣದ ಬಗ್ಗೆ ಸೂರಿ ಬಳಿ ಚರ್ಚೆ ನಡೆಸಿದ್ದರಂತೆ. ಆದ್ದರಿಂದ ಸೂರಿಯೇ ಈ ಚಿತ್ರವನ್ನು ನಿರ್ದೇಶನ ಮಾಡೋದು ಗ್ಯಾರೆಂಟಿ ಅನ್ನಲಾಗುತ್ತಿದೆ.
Advertisement
Advertisement
ಸೂರಿ ಈಗ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಪುನೀತ್ ಕೂಡಾ ಯುವರತ್ನ ಚಿತ್ರದ ಅಂತಿಮ ಹಂತದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಆದರೂ ಈ ನಡುವೆಯೇ ಕನಕಾಂಗಿ ಕಲ್ಯಾಣದ ಬಗ್ಗೆಯೂ ಚರ್ಚೆಗಳು ಚಾಲ್ತಿಯಲ್ಲಿವೆ. ಈ ಚಿತ್ರ ಟೇಕಾಫ್ ಆಗೋ ಮೂಲಕ ಕಾದಂಬರಿ ಆಧಾರಿತ ಚಿತ್ರಗಳ ಜಮಾನ ಮತ್ತೆ ಶುರುವಾಗೋ ಲಕ್ಷಣಗಳೂ ಗೋಚರಿಸುತ್ತಿವೆ.