ನವದೆಹಲಿ: ಬಿಜೆಪಿ ಪಕ್ಷದಲ್ಲಿ 75 ವರ್ಷದ ಮೇಲ್ಪಟ್ಟವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ನೀತಿ, ನಿಯಮ ಪ್ರಕಾರ 75 ವರ್ಷದ ತುಂಬಿದ ಹಿರಿಯ ನಾಯಕರಿಗೆ ಟಿಕೆಟ್ ನೀಡದಿರಲು ತೀರ್ಮಾನಿಸಲಾಗಿದೆ. ಈ ಹಿನ್ನೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿಗೆ ಟಿಕೆಟ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಪಕ್ಷವನ್ನು ಬೆಳೆಸಿದ ಹಿರಿಯ ನಾಯಕರಿಗೆ ಟಿಕೆಟ್ ತಪ್ಪಿದರ ಬಗ್ಗೆ ಮಾಧ್ಯಮಗಳು ದೊಡ್ಡ ವಿಷಯ ಮಾಡಿವೆ. ಪಕ್ಷದಲ್ಲೇ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿ ಪಕ್ಷದಲ್ಲಿ ಇನ್ನು ಮುಂದೆ 75 ವರ್ಷ ತುಂಬಿದ ಯಾರಿಗೂ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದರು.
ಅಡ್ವಾಣಿ ಅವರು ಸ್ಪರ್ಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದ ಬಗ್ಗೆ ಮಾತನಾಡಿ, ನಾನು 25 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದು, ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ನಾನು ರಾಜ್ಯಸಭೆ ಮೂಲಕ ಸಂಸತ್ತಿಗೆ ಈ ಬಾರಿ ಹೋಗುತ್ತಿಲ್ಲ. ಜನರಿಂದ ಆಯ್ಕೆಯಾಗಿ ಹೋಗುತ್ತಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿ, ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ರಾಷ್ಟ್ರಿಯ ಭದ್ರತೆ ವಿಚಾರದ ದೃಷ್ಟಿಯಿಂದ ತೆಗದುಕೊಂಡ ಪ್ರಮುಖ ವಿಷಯಗಳು ನಮಗೆ ಈ ಲೋಕಸಭೆ ಚುನಾವಣೆಯಲ್ಲಿ ಸಹಕಾರಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಭಯೋತ್ಪಾದನೆಯ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡಿದ್ದರಿಂದ ಸರ್ಜಿಕಲ್ ಸ್ಟೈಕ್, ಹಾಗೂ ವಾಯುದಾಳಿಗಳು ಯಶಸ್ವಿಯಾದವು. ಬಾಲಾಕೋಟ್ ಮೇಲಿನ ವಾಯುದಾಳಿ ನಡೆದಿದೆ ಎನ್ನುವುದನ್ನು ಅಲ್ಲಿನ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ದೇಶದ ವಿರೋಧ ಪಕ್ಷಗಳು ಸತ್ತಿರುವ ಉಗ್ರರ ಹೆಣಗಳ ಲೆಕ್ಕ ಕೇಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ರಾಮಮಂದಿರ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ, ಇದೊಂದು ಸೂಕ್ಷ್ಮ ವಿಚಾರ. ಈ ವಿಷಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ತೀರ್ಪು ಬಂದ ನಂತರ ಮುಂದಿನ ಸ್ಪಷ್ಟ ಚಿತ್ರಣ ದೊರೆಯಲಿದೆ. ರಾಮಮಂದಿರವನ್ನು ಪವಿತ್ರ ಕ್ಷೇತ್ರದಲ್ಲೇ ನಿರ್ಮಾಣ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ದಿಟ್ಟ ನಿಲುವು ತೆಗದುಕೊಳ್ಳುವುದಾಗಿ ಭರವಸೆ ನೀಡಿದರು.