ಶಿವಮೊಗ್ಗ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿರುವ ವಿಜಯೇಂದ್ರ, ಕ್ಷೇತ್ರದ ಶಕ್ತಿ ಕೇಂದ್ರಗಳ ಪ್ರಮುಖರ ಭೇಟಿ ಮಾಡುವ ಜೊತೆಗೆ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಪ್ರಮುಖರ ಭೇಟಿ, ವಿಜಯೇಂದ್ರ ಅವರ ಈ ರೀತಿಯ ಓಡಾಟ ಶಿಕಾರಿಪುರ ಕ್ಷೇತ್ರದಿಂದಲೇ ವಿಜಯೇಂದ್ರ ಸ್ಪರ್ಧೆ ಖಚಿತನಾ ಎಂಬ ಅನುಮಾನ ಮೂಡಲು ಆರಂಭಿಸಿದೆ.
Advertisement
Advertisement
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ವಿಜಯೇಂದ್ರ ಅವರು, ಶಿಕಾರಿಪುರ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಮನವಿ ಮಾಡಿದ್ದಕ್ಕೆ, ತಂದೆಯವರಾದ ಮಾಜಿ ಸಿಎಂ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ನಾನು ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. ಇದನ್ನೂ ಓದಿ: ಧ್ವಜದ ಬಗ್ಗೆ ಸಿದ್ದರಾಮಯ್ಯ ಮಾತು ಕೇಳಿ ದುಃಖವಾಗುತ್ತಿದೆ: ನಾಗೇಶ್ ಕಿಡಿ
Advertisement
ಶಿಕಾರಿಪುರ ಕ್ಷೇತ್ರ ನನಗೆ ಹೊಸದೇನಲ್ಲ. ಈ ಹಿಂದೆ ಸಹ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚೆಚ್ಚು ಪ್ರವಾಸ ಮಾಡುತ್ತೇನೆ. ರಾಜಕೀಯದಲ್ಲಿ ಎಂಎಲ್‍ಎ, ಎಂಎಲ್‍ಸಿ ಆಗಬೇಕು ಅಂತಾ ಪಕ್ಷ ಸಂಘಟನೆ ಮಾಡುತ್ತಿಲ್ಲ. ಬಿಜೆಪಿಯಲ್ಲಿ ಹಲವು ಹುದ್ದೆಯಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದ್ದೀನಿ, ಮಾಡುತ್ತಿದ್ದೇನೆ ಎಂದರು.
Advertisement
ಸದ್ಯ ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಶಕ್ತಿಮೀರಿ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಅದರಲ್ಲಿ ಸಂತೃಪ್ತಿ ಇದೆ. ಬರುವಂತಹ ದಿನಗಳಲ್ಲಿ ಏನಾಗುತ್ತದೆ, ಏನಾಗುತ್ತೇನೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ಈಗಾಗಿ ವಿಜಯೇಂದ್ರ ಯಾವಾಗ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಪಕ್ಷ ಹಾಗೂ ಪಕ್ಷದ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದು ವಿವರಿಸಿದರು.