ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ತಮ್ಮ ಜೀವನದ ಪ್ರಮುಖ ಘಟನೆಯೊಂದನ್ನು ರಿವೀಲ್ ಮಾಡಿದ್ದಾರೆ. ಆ ಮೂಲಕ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಸಿದ್ಧರಾಗಿಬೇಕೆಂದು ಪ್ರೇರಣೆಯ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಪಾರ್ಥಿವ್ ತಮ್ಮ ಎರಡು ಕೈಗಳಲ್ಲಿ 9 ಬೆರಳುಗಳು ಮಾತ್ರ ಇದೇ ಎಂದು ರಿವೀಲ್ ಮಾಡಿದ್ದು, ಆರು ವರ್ಷದ ವಯಸ್ಸಿನ ಸಂದರ್ಭದಲ್ಲಿ ಎಡಗೈ ಕಿರುಬೆರಳನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಇದುವರೆಗೂ 9 ಬೆರಳುಗಳೊಂದಿಗೆ ತಾವು ಕ್ರಿಕೆಟ್ ಆಡಿದ್ದಾಗಿ ತಿಳಿಸಿದ್ದಾರೆ. ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಆಗಿರುವ ಪಾರ್ಥಿವ್, ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪಾದಾರ್ಪಣೆ ಮಾಡುವ ಮುನ್ನ ತಂಡದ ರೆಗ್ಯುಲರ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಧೋನಿ ಆಗಮನದೊಂದಿಗೆ ಪಾರ್ಥಿವ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು.
ಬಾಲ್ಯದ ಸಮಯದಲ್ಲಿ ಬಾಗಿಲಿನ ಹಿಂದೆ ಕೈ ಬೆರಳು ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಕೈಬೆರಳು ಕಳೆದುಕೊಂಡಿದ್ದೆ. 9 ಬೆರಳುಗಳೊಂದಿಗೆ ವಿಕೆಟ್ ಕೀಪಿಂಗ್ ಮಾಡುವುದು ತುಂಬಾ ಕಷ್ಟ. ವಿಕೆಟ್ ಕೀಪಿಂಗ್ ಮಾಡುವ ವೇಳೆ ಕಿರುಬೆರಳಿನ ಭಾಗವನ್ನು ಉಂಗುರದ ಬೆರಳಿಗೆ ಟೇಪ್‍ನಿಂದ ಕಟ್ಟಿಕೊಂಡು ಮೈದಾನಕ್ಕಿಳಿಯುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ ಎಂದು ಪಾರ್ಥಿವ್ ಹೇಳಿದ್ದಾರೆ.
2002ರಲ್ಲಿ 17 ವರ್ಷದ ಪಾರ್ಥಿವ್ ಪಟೇಲ್ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ಭಾರತ ಪರ 25 ಟೆಸ್ಟ್ ಗಳಲ್ಲಿ 934 ರನ್, 38 ಏಕದಿನ ಪಂದ್ಯಗಳಿಂದ 736 ರನ್, 2 ಟಿ20 ಪಂದ್ಯಗಳಲ್ಲಿ 36 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್‍ನಲ್ಲಿ 194 ಫಸ್ಟ್ ಕ್ಲಾಸ್ ಕ್ರಿಕೆಟ್, 193 ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿರುವ ಪಾರ್ಥಿವ್ 16 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.