ನೀವು ಮನುಸ್ಮೃತಿ ಪರವೋ ಸಂವಿಧಾನದ ಪರವೋ? 50% ಮೀಸಲಾತಿ ಗೋಡೆಯನ್ನು ತೆಗೆಯುತ್ತೇವೆ: ರಾಹುಲ್‌ ಗಾಂಧಿ

Public TV
3 Min Read
Rahul Gandhi Constitution Manusmriti

– ಸಂವಿಧಾನ ಚರ್ಚೆಯಲ್ಲಿ ಬಿಜೆಪಿಗೆ ಸವಾಲು
– ಸಂವಿಧಾನದ ಪುಸ್ತಕದ ಜೊತೆ ಮನುಸ್ಮೃತಿಯನ್ನು ತಂದ ರಾಹುಲ್‌
– ಬಿಜೆಪಿ ದೇಶದ ಹೆಬ್ಬೆರಳನ್ನು ಕತ್ತರಿಸಿದೆ

ನವದೆಹಲಿ: ಭಾರತದ ಆಡಳಿತ ವ್ಯವಸ್ಥೆ ಮನುಸ್ಮೃತಿಯನ್ನು (Manusmriti) ಪಾಲಿಸಬೇಕು ಎಂದು ವೀರ್ ಸಾವರ್ಕರ್‌ (Savarkar) ಹೇಳಿದ್ದರು. ಈ‌ ವೀರ್ ಸಾವರ್ಕರ್‌ ಅನುಸರಿಸುವ ಬಿಜೆಪಿ (BJP) ನಾಯಕರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಸಂವಿಧಾನದ ಪರವೋ, ಸಾರ್ವಕರ್ ಪಾಲಿಸುವ ಮನುಸ್ಮೃತಿ ಪರವೋ ಎಂಬುದನ್ನು  ಸ್ಪಷ್ಟಪಡಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಆಗ್ರಹಿಸಿದ್ದಾರೆ.

ಸಂವಿಧಾನ (Constitution) ಜಾರಿಗೆ ಬಂದು 75 ವರ್ಷವಾದ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ನಡೆಯುತ್ತಿರುವ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಹಿಂದೆ ಭಾರತ ಹೇಗೆ ನಡೆಯುತ್ತಿತ್ತು? ಈಗಲೂ ಹಾಗೆಯೇ ನಡೆಸಲು ಬಿಜೆಪಿ ನಾಯಕರು ಬಯಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕೀಳುಜಾತಿಯವನು ಎನ್ನುವ ಕಾರಣಕ್ಕೆ ವಿದ್ಯೆಯನ್ನೇ ಕಲಿಸದೇ ದ್ರೋಣಚಾರ್ಯರು ಗುರುದಕ್ಷಣೆಯಾಗಿ ಏಕಲವ್ಯನಿಂದ ಹೆಬ್ಬೆರಳು ಪಡೆದರು. ಹೆಬ್ಬೆರಳು ಕೈಗೆ ಮುಖ್ಯವಾಗಿದೆ, ದ್ರೋಣಾಚಾರ್ಯರು ಹೇಗೆ ಏಕಲವ್ಯನ ಹೆಬ್ಬೆರಳು ಕತ್ತರಿಸಿದರೋ ಹಾಗೇ ನೀವೂ ದೇಶದ ಹೆಬ್ಬೆರಳು ಕತ್ತರಿಸಿದ್ದೀರಿ ಎಂದು ಆರೋಪಿದರು.

ಅಗ್ನಿವೀರ್, ಪೇಪರ್ ಲೀಕ್ ಜಾರಿ ಮಾಡುವ ಮೂಲಕ ಭಾರತದ ಯುವಕರ ಹೆಬ್ಬೆರಳು ಕತ್ತರಿಸಿದ್ದೀರಿ. ಅದಾನಿ ಅವರಿಗೆ ಧಾರವಿ ಕೊಟ್ಟು ಅಲ್ಲಿ ಸಣ್ಣ ಪುಟ್ಟ ಉದ್ಯಮ ನಡೆಸುತ್ತಿದ್ದ ಜನರು ಹೆಬ್ಬೆರಳು ಕತ್ತರಿಸಿದ್ದೀರಿ. ಬೆಂಬಲ ಬೆಲೆ ಕೇಳುವ ರೈತರ ಮೇಲೆ ಟಿಯರ್ ಗ್ಯಾಸ್ ಬಳಕೆ ಮಾಡುವ ಮೂಲಕ ರೈತರ ಬೆರಳು ಕತ್ತರಿಸಲಾಗಿದೆ. ಸಂವಿಧಾನದಲ್ಲಿ ಜನರ ಬೆರಳು ಕತ್ತರಿಸಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳಿ ಎಂದು ಹೇಳಿಲ್ಲ ಆದರೆ ನೀವು ಅವಕಾಶಗಳನ್ನು ಕಿತ್ತುಕೊಂಡಿದ್ದೀರಿ ಎಂದು ದೂರಿದರು.

ಹತ್ರಾಸ್‌ನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಇತ್ತೀಚೆಗೆ ನಾನು ಆ ಯುವತಿಯ ಕುಟುಂಬವನ್ನು ಭೇಟಿ ಮಾಡಿದೆ. ಅಲ್ಲಿ ಗ್ಯಾಂಗ್ ರೇಪ್ ಮಾಡಿದವರು ಹೊರಗೆ ಸುತ್ತಾಡುತ್ತಿದ್ದಾರೆ. ಯುವತಿಯ ಕುಟುಂಬಸ್ಥರು ಮನೆಯಿಂದ ಹೊರಗೆ ಬಾರದಂತೆ ಮಾಡಲಾಗಿದೆ. ಯುವತಿಯ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಲಿಲ್ಲ. ಅತ್ಯಚಾರಿಗಳನ್ನು ಹೊರಗೆ ಸುತ್ತಲು ಬಿಡಿ ಎಂದು ಸಂವಿಧಾನ ಅಲ್ಲ ಮನುಸ್ಮೃತಿಯಲ್ಲಿ ಬರೆದಿದೆ. ಉತ್ತರ ಪ್ರದೇಶದಲ್ಲಿ ಮನುಸ್ಮೃತಿ ಜಾರಿಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಜಾತಿ, ಧರ್ಮ, ಸ್ಥಳ ಹೆಸರಿನ ಮೇಲೆ ತಾರತಮ್ಯ ಮಾಡಬಾರದು ಎಂದು ಸಂವಿಧಾನ ಹೇಳಿದೆ. ಆದರೆ ನೀವು ಹೋದ ಕಡೆ ಧರ್ಮಗಳ ನಡುವೆ ಜಗಳ ಹಚ್ಚುತ್ತಿದ್ದೀರಿ. ದ್ವೇಷ ಬೆಳೆಸುತ್ತಿದ್ದೀರಿ, ದಲಿತ ಕುಟುಂಬಗಳನ್ನು ಮನೆಯಲ್ಲಿ ಕೂಡಿ ಹಾಕಿದ್ದೀರಿ. ಇದು ಯಾವ ಸಂವಿಧಾನದಲ್ಲಿ ಬರೆದಿದೆ? ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆ ಇಲ್ಲ. ಇದಕ್ಕಾಗಿ ನಾವು ಜಾತಿ ಜನಗಣತಿ ಮಾಡಲು ನಿರ್ಧರಿಸಿದ್ದೇವೆ. ಬಳಿಕ ಭಾರತದಲ್ಲಿ ಹೊಸ ರೀತಿಯ ಅಭಿವೃದ್ಧಿಯಾಗಲಿದೆ ಹೊಸ ರೀತಿಯ ರಾಜಕೀಯ ಶುರುವಾಗಲಿದೆ 50% ಮೀಸಲಾತಿ ಗೋಡೆಯನ್ನು ಒಡೆದು ಹಾಕಲಿದ್ದೇವೆ ನೀವು ಏನ್ ಮಾಡಬೇಕು ಮಾಡಿ ಎಂದು ಸವಾಲು ಹಾಕಿದರು.

Share This Article