ನವದೆಹಲಿ: ಅದಾನಿ ವಿಚಾರವನ್ನು (Adani Case) ಇಟ್ಟುಕೊಂಡು ಸಂಸತ್ ಸದನದಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಿರ್ಧಾರಕ್ಕೆ ಟಿಎಂಸಿ (TMC) ವಿರೋಧ ವ್ಯಕ್ತಪಡಿಸಿದೆ.
ಇಂದು ಸದನ ನಡೆಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸೇರಿಂತೆ INDIA ಒಕ್ಕೂಟದ ಸದಸ್ಯರು ಅದಾನಿ ವಿರುದ್ಧ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಇದರ ಜೊತೆ ವಿವಿಧ ವಿಷಯಗಳನ್ನು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕೊನೆಗೆ ಲೋಕಸಭೆ ಮತ್ತು ರಾಜ್ಯ ಸಭೆಯ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.
ಸದನ ನಡೆಯುವ ಮೊದಲು ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಅವರ ಕಚೇರಿಯಲ್ಲಿ INDIA ಒಕ್ಕೂಟದ ಸದಸ್ಯರು ಸಭೆ ನಡೆಸಿದರು. ಈ ಸಭೆಗೆ ಟಿಎಂಸಿ ಸದಸ್ಯರು ಗೈರಾಗಿದ್ದರು.
ಮೂಲಗಳ ಪ್ರಕಾರ ಬೆಲೆ ಏರಿಕೆ, ಮಣಿಪುರ ಘರ್ಷಣೆ, ನಿರುದ್ಯೋಗ ಇತ್ಯಾದಿ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಬೇಕು. ಆದರೆ ಕಾಂಗ್ರೆಸ್ ಕೇವಲ ಅದಾನಿ ವಿಚಾರವನ್ನು ಮುಂದಿಟ್ಟುಕೊಂಡು ಗದ್ದಲ ಎಬ್ಬಿಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡ ಟಿಎಂಸಿ ಸದಸ್ಯರು ಸಭೆಗೆ ಹಾಜರಾಗಲಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ನನ್ನ ಸೋಲಿಸೋಕೆ ದೇವೇಗೌಡ್ರು ವೀಲ್‍ಚೇರ್‌ನಲ್ಲಿ ಹಳ್ಳಿ ಹಳ್ಳಿಗೆ ಹೋಗಿದ್ರು: ಶಿವಲಿಂಗೇಗೌಡ
ಕಳೆದ ಸೋಮವಾರದಿಂದ ಸಂಸತ್ ಅಧಿವೇಶನ ಆರಂಭವಾಗಿದೆ. ಪ್ರತಿ ದಿನವೂ ಕಾಂಗ್ರೆಸ್ ಅದಾನಿ ವಿಚಾರಕ್ಕೆ ಜೆಪಿಸಿ ತನಿಖೆ ನಡೆಸಬೇಕೆಂದು ಪಟ್ಟು ಹಿಡಿದಿದೆ. ಚಳಿಗಾಲದ ಅಧಿವೇಶನದ ಡಿ. 20ಕ್ಕೆ ಕೊನೆಯಾಗಲಿದೆ.