ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ (Parliament winter session) ಎರಡನೇ ದಿನವಾದ ಇಂದೂ ಕೂಡ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚೆಗೆ ಪಟ್ಟು ಹಿಡಿದು ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದೆ. ಪರಿಣಾಮ ಉಭಯ ಸದನಗಳ ಕಲಾಪ ಹಲವು ಬಾರಿ ಮುಂದೂಡಿಕೆಯಾಯಿತು.
ಬೆಳಗ್ಗೆ 11 ಗಂಟೆಗೆ ಲೋಕಸಭೆ (Lok Sabha)ಕಲಾಪ ಆರಂಭಗೊಂಡಾಗ ಎಸ್‌ಐಆರ್ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಆರಂಭಿಸಿದರು. ಸದನದ ಬಾವಿಗಿಳಿದು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ಹೆಚ್ಚಾದಾಗ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು. 12 ಗಂಟೆಗೆ ಸದನ ಮತ್ತೆ ಸೇರಿದಾಗ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಹಾಗಾಗಿ, ಸ್ಪೀಕರ್ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ ಮಾಡಿದರು. ಬಳಿಕವೂ ಗದ್ದಲವೂ ಮುಂದುವರಿದ ಹಿನ್ನಲೆ ನಾಳೆಗೆ ಕಲಾಪ ಮುಂದೂಡಲಾಯಿತು. ಬಳಿಕ ಸ್ಪೀಕರ್ ಓಂಬಿರ್ಲಾ ಸರ್ವಪಕ್ಷ ಸಭೆ ಕರೆದು ಮಾತುಕತೆ ನಡೆಸಿದರು. ಇದನ್ನೂ ಓದಿ: ಪ್ರಧಾನಿ ಕಚೇರಿ ಇನ್ಮುಂದೆ ಸೇವಾ ತೀರ್ಥ; ರಾಜಭವನಗಳಿಗೆ ಲೋಕಭವನ ಎಂದು ಮರುನಾಮಕರಣ ಮಾಡಿದ ಕೇಂದ್ರ
ರಾಜ್ಯಸಭೆಯಲ್ಲೂ (Rajya Sabha) ಇದೇ ಬೆಳವಣಿಗೆ ನಡೆದಿದೆ. ಈ ನಡುವೆ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಜನರು ಸಾಯುತ್ತಿದ್ದಾರೆ, ಆದರೆ ಎಸ್‌ಐಆರ್ ಪ್ರಕ್ರಿಯೆಯು ವೇಗವಾಗಿ ಮುಂದುವರಿದಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು, ಇದನ್ನು ತಕ್ಷಣವೇ ಚರ್ಚಿಸಬೇಕು ಎಂದು ಹೇಳಿದರು. ಇದರ ನಂತರ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಿರೋಧ ಪಕ್ಷಗಳ ನಾಯಕರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ಆದರೆ ವಿರೋಧ ಪಕ್ಷಗಳು ಅದಕ್ಕೆ ಗಡುವು ನಿಗದಿಪಡಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಪುಟಿನ್ – ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆ: ರಕ್ಷಣಾ ಒಪ್ಪಂದಗಳ ಬಗ್ಗೆ ಚರ್ಚೆ
ಸಂಸತ್ತಿನಲ್ಲಿ ಚುನಾವಣಾ ಸೋಲಿನ ಬಗ್ಗೆ ವಿರೋಧ ಪಕ್ಷಗಳು ತಮ್ಮ ಕೋಪವನ್ನು ಹೊರಹಾಕುತ್ತಿವೆ ಎಂದು ರಿಜುಜು ಇದೇ ವೇಳೆ ವಾಗ್ದಾಳಿ ನಡೆಸಿದರು. ಸಂಸದೀಯ ಪ್ರಜಾಪ್ರಭುತ್ವದಲ್ಲಿ, ನಾವು ಚರ್ಚೆಗಳನ್ನು ನಡೆಸಬೇಕು. ದೇಶದಲ್ಲಿ ಹಲವು ಪ್ರಮುಖ ಸಮಸ್ಯೆಗಳಿವೆ, ಆದರೆ ಒಂದು ವಿಷಯಕ್ಕಾಗಿ ನೀವು ಇತರರನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಎಲ್ಲಾ ಸಮಸ್ಯೆಗಳು ಮುಖ್ಯ. ನಾವು ಚರ್ಚೆಗೆ ಸಿದ್ಧರಿದ್ದೇವೆ, ಆದರೆ ನೀವು ಮೊದಲು ಸಮಾಲೋಚಿಸಬೇಕು. ನೀವು ಗಡುವನ್ನು ನಿಗದಿಪಡಿಸುತ್ತಿದ್ದೀರಿ ಮತ್ತು ಸರ್ಕಾರವು ಈಗ ನಮಗೆ ತಿಳಿಸಬೇಕು ಎಂದು ಹೇಳುತ್ತಿದ್ದೀರಿ, ಇದು ಸರಿಯಲ್ಲ. ನೀವು ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ, ಜನರು ನಿಮ್ಮನ್ನು ನಂಬುವುದಿಲ್ಲ ಮತ್ತು ನೀವು ಸಂಸತ್ತಿನಲ್ಲಿ ನಿಮ್ಮ ಕೋಪವನ್ನು ಹೊರಹಾಕುತ್ತಿದ್ದೀರಿ. ಇದು ಸರಿಯಲ್ಲ ಎಂದು ಕುಟುಕಿದರು. ಇದನ್ನೂ ಓದಿ: 8 ನಿಮಿಷಕ್ಕಿಂತ ಹೆಚ್ಚು ಹೊತ್ತು ವಾಹನ ನಿಲ್ಲಿಸಿದ್ರೆ ದಂಡ – ಏರ್‌ಪೋರ್ಟ್‌ನಲ್ಲಿ ಪಿಕಪ್ ಮಾಡುವ ಕ್ಯಾಬ್, ಖಾಸಗಿ ವಾಹನಗಳಿಗೆ ರೂಲ್ಸ್

